ಪುತ್ತೂರು: ಕಳೆದ ಬಾರಿ ನಡೆದ ವಿಧಾನಸಭಾ ಅಧಿವೇಶನಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗಿದ್ದು ಮಾತ್ರವಲ್ಲದೆ ಸದನ ಮುಗಿಯುವ ತನಕ ಸದನದಲ್ಲೇ ಇದ್ದು ಸದನಕ್ಕೆ ಗೌರವ ಸಲ್ಲಿಸಿದ್ದ ಪುತ್ತೂರು ಶಾಸಕ ಅಶೋಕ್ ರೈಯವರಿಗೆ ಸ್ಪೀಕರ್ ಯು ಟಿ ಖಾದರ್ ಬಹುಮಾನ ನೀಡಿ ಗೌರವಿಸಿದ್ದಾರೆ.
ಶಾಸಕ ಅಶೋಕ್ ರೈ ಅವರು ಕಳೆದ ಬಾರಿ ಚೊಚ್ಚಲ ಅದಿವೇಶನದಲ್ಲಿ ಭಾಗವಹಿಸಿದ್ದರು. ಸದನಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗುವ ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಯು ಟಿ ಖಾದರ್ ಅವರು ಘೋಷಣೆ ಮಾಡಿದ್ದರು. ಕಳೆದ ಬಾರಿಯ ಅಧಿವೇಶನಕ್ಕೆ ಒಟ್ಟು 10 ಮಂದಿ ಸದಸ್ಯರು ಸಮಯಕ್ಕೆ ಸರಿಯಾಗಿ ಹಾಜರಾಗಿ ಅಧಿವೇಶನ ಮುಗಿಯುವ ತನಕವೂ ಸದನದಲ್ಲೇ ಇದ್ದರು. ಹತ್ತು ಮಂದಿಯ ಪೈಕಿ ಪುತ್ತೂರು ಶಾಸಕ ಅಶೋಕ್ ರೈ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮಂಗಳವಾರ ಅಧಿವೇಶನ ಕೊನೇ ಗಳಿಗೆಯಲ್ಲಿ ಸ್ಪೀಕರ್ ಯು ಟಿ ಖಾದರ್ ಅವರು ಶಾಸಕ ಅಶೋಕ್ ರೈ ಅವರನ್ನು ಬಹುಮಾನ ನೀಡಿ ಗೌರವಿಸಿದರು.
ಚೊಚ್ಚಲ ಅಧಿವೇಶನದಲ್ಲಿ 14 ಪ್ರಶ್ನೆಗಳನ್ನು ಕೇಳುವ ಮೂಲಕ ಸುದ್ದಿಯಾಗಿದ್ದ ಶಾಸಕ ಅಶೋಕ್ ರೈಯವರು ತುಳು ಭಾಷೆಯಲ್ಲಿ ಸದನದಲ್ಲಿ ಮಾತನಾಡುವ ಮೂಲಕ ಕೋಟ್ಯಂತರ ತುಳುವರ ಮನಸ್ಸನ್ನು ಗೆದ್ದಿದ್ದರು. 14 ಪ್ರಶ್ನೆಗಳ ಪೈಕಿ ಬಹುತೇಕ ಪ್ರಶ್ನೆಗಳು ಬಡವರ ಪರವಾಗಿ ಇದ್ದದ್ದು ಇನ್ನೊಂದು ವಿಶೇಷವಾಗಿತ್ತು.