ಉಪ್ಪಿನಂಗಡಿ: ಉತ್ತಮ ಶಿಕ್ಷಣ ನಮ್ಮದಾದಾಗ ಮಾತ್ರ ಸಮಾಜದಲ್ಲಿ ತಲೆ ಎತ್ತಿ ನಿಲ್ಲಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣವನ್ನು ಕಡೆಗಣಿಸದೇ ಗುಣಮಟ್ಟದ ಶಿಕ್ಷಣವನ್ನು ತಮ್ಮದಾಗಿಸುವ ಮೂಲಕ ಸಮಾಜದಲ್ಲಿ ಸುಸಂಸ್ಕೃತರಾಗಿ ಬಾಳಬೇಕು ಎಂದು ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ತಿಳಿಸಿದರು.
ಇಲ್ಲಿನ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಎಲ್ಲರೊಂದಿಗೆ ಬಾಳಿ ಬದುಕುವ ಗುಣವನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು.
ಶಾಲಾ ಸಂಚಾಲಕ ರೆ.ಫಾ. ಅಬೆಲ್ ಲೋಬೋ ಮಾತನಾಡಿ, ಜನರು ಶಿಕ್ಷಿತರಾದಾಗ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ನಮ್ಮಿಂದ ಕೆಲಸ ದೊರಕಿಸಿ ಕೊಡಲು ಸಾಧ್ಯವಿಲ್ಲದಿದ್ದರೂ, ಗುಣಮಟ್ಟದ ಶಿಕ್ಷಣ ಮಾತ್ರ ಖಂಡಿತಾ ನೀಡಬಲ್ಲೆವು. ಮಕ್ಕಳನ್ನು ಉತ್ತಮ ನಾಗರಿಕನ್ನರಾಗಿ ಮಾಡಬಲ್ಲೆವು ಎಂದರು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಮಕ್ಕಳ ಪೋಷಕರಿಗೆ ಈ ಸಂದರ್ಭ ಬಹುಮಾನ ವಿತರಿಸಲಾಯಿತು. ಸೈಂಟ್ ಮೇರಿಸ್ ನರ್ಸರಿ ಶಾಲೆಯ ಸ್ಥಾಪಕ ಮುಖ್ಯೋಪಾಧ್ಯಾಯಿನಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸಿಸ್ಟರ್ ಜೆಸಿಂತಾ ಫ್ಲೋರಾ ಕ್ರಾಸ್ತಾ ಅವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮಾಕ್ಸಿಂ ಲೋಬೋ, ಶಾಲೆಯ ಪೋಷಕರ ಮತ್ತು ಶಿಕ್ಷಕರ ಸಂಘದ ಅಧ್ಯಕ್ಷೆ ಲೀನಾ ಫ್ಲೋರಿನ್ ಪಿಂಟೋ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಮೀರಾ ರೊಡ್ರಿಗಸ್ ವರದಿ ವಾಚಿಸಿದರು. ಸಿಸ್ಟರ್ ವೆಲೈಂಟಿನ ಸ್ವಾಗತಿಸಿದರು ಮೇಘಶ್ರೀ ವಂದಿಸಿದರು. ಶಶಿಧರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.