ಹಳದಿ ಎಲೆ ರೋಗಕ್ಕೆ ಪರಿಹಾರ ಕೊಡಬೇಕು ಮತ್ತು ಅಡಿಕೆ ಆಮದನ್ನು ತಕ್ಷಣ ನಿಲ್ಲಿಸಬೆಕು
ಪುತ್ತೂರು: ದ ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಅಡಿಕೆಯೇ ಪ್ರಧಾನ ಬೆಳೆಯಾಗಿರುವ, ದ ಕ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಈಗಾಗಲೇ ಹಳದಿ ಎಲೆ ರೋಗ ಕಾಣಿಸಿಕೊಂಡಿದ್ದು ಸುಮಾರು 10 ಗ್ರಾಮಗಳಲ್ಲಿ ಈ ರೋಗ ಕಾಣಿಸಿಕೊಂಡಿದ್ದು ಕೃಷಿಕರು ಆತಂಕದಲ್ಲಿದ್ದು ಇದುವರೆಗೂ ಇವರಿಗೆ ಯಾವುದೇ ಪರಿಹಾರವಾಗಲಿ, ರೋಗಕ್ಕೆ ಸೂಕ್ತ ಔಷಧಿಯಾಗಲಿ ದೊರೆಯದೇ ಇರುವುದರಿಂದ ಈ ಭಾಗದ ಕೃಷಿಕರು ಆರ್ಥಿಕವಾಗಿ ನಷ್ಟವನ್ನು ಅನುಭವಿಸುವಂತಾಗಿದ್ದು ಇವರಿಗೆ ಪರಿಹಾರ ಕೊಡಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರು ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ.
ಸುಳ್ಯ ತಾಲೂಕಿನ 37,317 ಹೆಕ್ಟೇರ್ ಭೂಮಿಯಲ್ಲಿ 11,449 ಹೆಕ್ಟೇರ್ ಭೂಮಿಯಲ್ಲಿ ಕೃಷಿ ಇದೆ ಇದರಲ್ಲಿ 511 ಹೆಕ್ಟೇರ್ ಭೂಮಿಯಲ್ಲಿ ಅಡಿಕೆ ಕೃಷಿಯನ್ನು ಮಾಡುತ್ತಿದ್ದಾರೆ. ಈ ಪ್ರದೇಶದ ಜನತೆಯ ಮುಖ್ಯ ಬೆಳೆ ಮತ್ತು ಜೀವನಕ್ಕೆ ಆಧಾರವಾಗಿಸಿಕೊಂಡ ಕೃಷಿಗೆ ರೋಗ ಬಾಧಿಸಿದೆ, ಒಟ್ಟು 5588 ಅಡಿಕೆ ಕೃಷಿಕರು ಈ ಭಾಗದಲ್ಲಿದ್ದು ಹಳದಿ ಎಲೆ ರೋಗದಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದು ಇದುವರೆಗೂ ಇವರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಸರಕಾರ ಈ ಬಗ್ಗೆ ತಕ್ಷಣ ಕ್ರಮಕೈಗೊಂಡು ಅಡಿಕೆ ಬೆಳೆಗಾರರಿಗೆ ಪರಿಹಾರವನ್ನು ಕೊಡಬೇಕು ಎಂದು ಶಾಸಕರು ಸಭೆಯಲ್ಲಿ ಅಗ್ರಹಿಸಿದರು.
ಅಡಿಕೆ ಆಮದು ತಕ್ಷಣ ನಿಲ್ಲಿಸಿ
ಕರಾವಳಿ ಭಾಗದಲ್ಲಿ ಹೆಚ್ಚಾಗಿ ಅಡಿಕೆಯನ್ನು ಬೆಳೆಯಲಾಗುತ್ತಿದ್ದು ಈ ಜಿಲ್ಲೆಯಲ್ಲಿ ಅಡಿಕೆಯೇ ಜನತೆಯ ಆರ್ಥಿಕತೆಗೆ ಮೂಲ ಆಧಾರವಾಗಿದೆ. ವಿದೇಶದಿಂದ ಭಾರತಕ್ಕೆ ಅಡಿಕೆ ಆಮದು ಮಾಡುತ್ತಿರುವ ಕಾರಣ ನಮ್ಮ ಭಾಗದ ಅಡಿಕೆಗೆ ಬೆಲೆ ಕಡಿಮೆಯಾಗುತ್ತಿದೆ. ವಿದೇಶದಿಂದ ಕಡಿಮೆ ಬೆಲೆಗೆ ಆಡಿಕೆಯನ್ನು ಕೇಂದ್ರ ಸರಕಾರ ಅಮದು ಮಾಡಿಕೊಳ್ಳುವ ಕಾರಣ ನಮ್ಮ ಅಡಿಕೆ ಬೆಲೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. 480 ರಿಂದ 500 ರೂ ಇದ್ದ ಅಡಿಕೆ ದರ ಕಳೆದ ಕೆಲವು ದಿನಗಳಿಂದ 410 ಕ್ಕೆ ಇಳಿದಿದೆ. ಈ ಕಾರಣಕ್ಕೆ ಕೇಂದ್ರ ಸರಕಾರ ಅಡಕೆಯನ್ನು ಆಮದು ಮಾಡಿಕೊಳ್ಳುವುದನ್ನು ತಕ್ಷಣ ನಿಲ್ಲಿಸಿ ಕರಾವಳಿ ಭಾಗದ ಅಡಿಕೆ ಬೆಳೆಗಾರರ ಹಿತವನ್ನು ಕಾಯುವ ಕೆಲಸವನ್ನು ಮಾಡಬೇಕು. ರಾಜ್ಯ ಸರಕಾರ ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಿ ಅಥವಾ ಮನವಿ ಮಾಡುವ ಮೂಲಕ ಅಮದು ನಿಲ್ಲಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. 12000 ಟನ್ ಅಡಿಕೆ ಈಗಾಗಲೆ ಆಮದು ಮಾಡಿಕೊಳ್ಳಲಾಗಿದ್ದು ವಿದೇಶಿ ಅಡಿಕೆ ಮಾರುಕಟ್ಟೆಯಲ್ಲಿ ಬಂದಿರುವ ಕಾರಣ ನಮ್ಮ ಭಾಗದ ಅಡಿಕೆಗೆ ಬೇಡಿಕೆ ಕಡಿಮೆಯಾಗಿದ್ದು , ಆಮದು ಪ್ರಕ್ರಿಯೆ ಮುಂದುವರೆದರೆ ಅಡಿಕೆ ಕೃಷಿಕರು ತೊಂದರೆಗೊಳಗಾಗುವ ಆತಂಕ ಇದ್ದು ಅ ರೀತಿಯಾಗದಂತೆ ಅಡಿಕೆ ಕೃಷಿಕರಿಗೆ ಸೂಕ್ತ ಆರ್ಥಿಕ ಭದ್ರತೆಯನ್ನು ಒದಗಿಸಬೇಕು ಎಂದು ಶಾಸಕರು ಸರಕಾರವನ್ನು ಆಗ್ರಹಿಸಿದರು.
ಅಡಿಕೆಯಲ್ಲಿ ನಿಕೊಟಿನ್ ಸ್ಪಷ್ಟಪಡಿಸಿ
ಅಡಿಕೆಯಲ್ಲಿ ನಿಕೊಟಿನ್ ಇದೆ ಎಂಬ ವಿಚಾರಕ್ಕೆ ಸಂಬಂದಿಸಿದಂತೆ ಸುಪ್ರಿಂ ಕೋರ್ಟಿನಲ್ಲಿ ಆಫಿದವಿತ್ ಸಲ್ಲಿಸಲಾಗಿತ್ತು. ಅಡಿಕೆಯಲ್ಲಿ ನಿಕೊಟಿನ್ ಇಲ್ಲ ಎದು ಈಗಾಗಲೇ ಸುಪ್ರಿಂ ಕೋರ್ಟಿನಲ್ಲಿ ಸ್ಪಷ್ಟಪಡಿಸಿಲಾಗಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವು ಆತಂಕ ಇದ್ದು ಅದನ್ನು ತಕ್ಷಣ ಸ್ಪಷ್ಟಪಡಿಸಿಬೇಕು ಎಂದು ಶಾಸಕರು ಸದನದಲ್ಲಿ ಪ್ರಸ್ತಾಪಿಸಿದರು.