ಬೆಟ್ಟಂಪಾಡಿ: ಇಲ್ಲಿನ ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರವನ್ನು ಪುನರ್ ನಿರ್ಮಾಣ ಮಾಡುವ ಸಲುವಾಗಿ ದ್ವಾದಶ ನಾರಿಕೇಳ ಶ್ರೀ ಗಣಪತಿ ಹವನ ಮತ್ತು ಬಾಲಾಲಯ ಪ್ರತಿಷ್ಠೆಯು ವೇ. ಮೂ. ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆಯವರ ನೇತೃತ್ವದಲ್ಲಿ ದ. 7 ರಂದು ಜರಗಿತು. ಪೂರ್ವಾಹ್ನ 7.40 ರ ಧನುಲಗ್ನದಲ್ಲಿ ಬಾಲಾಲಯ ಪ್ರತಿಷ್ಠೆ ನೆರವೇರಿ ಹಳೆಯ ಮಂದಿರವನ್ನು ಕೆಡವಲು ಚಾಲನೆ ನೀಡಲಾಯಿತು.
ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಪುನರ್ ನಿರ್ಮಾಣದ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು.
ನಿಧಿ ಸಂಚಯಕ್ಕೆ ಚಾಲನೆ:
ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕರವರು ನಿಧಿ ಸಂಚಯಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಅತಿಥಿಗಳಾಗಿದ್ದ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಸುಧಾಕರ ಭಟ್ ಬಂಟಾಜೆಯವರು ಸಂದರ್ಭೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ಹಿರಿಯ ಭಜಕರಾದ ಮೋನಪ್ಪ ಗೌಡ ಮಿತ್ತಡ್ಕ, ಬೆಟ್ಟಂಪಾಡಿ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್ ಕೆ. ಕೋರ್ಮಂಡ, ಪ್ರಗತಿಪರ ಕೃಷಿ ಸನತ್ ಕುಮಾರ್ ರೈ ಸಂಗಮ್ ತೋಟದಮೂಲೆ, ಪಿಡಬ್ಲ್ಯುಡಿ ಗುತ್ತಿಗೆದಾರ ಅಪ್ಪಣ್ಣ ನಾಯ್ಕ್ ಕಟೀಲ್ತಡ್ಕ, ಪ್ರಗತಿಪರ ಕೃಷಿಕ ನಾಗರಾಜನ್ ತಲೆಪ್ಪಾಡಿ, ಕುಟ್ಟಿ ವಿನಾಯಕನಗರ, ಪುನರ್ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ವೇ.ಮೂ. ರಾಧಾಕೃಷ್ಣ ಭಟ್ ಕಕ್ಕೂರು ಉಪಸ್ಥಿತರಿದ್ದರು. ಪುನರ್ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರೈ ಚೆಲ್ಯಡ್ಕ, ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಕುಲಾಲ್ ಉಡ್ಡಂಗಳ ಅತಿಥಿ ಅಭ್ಯಾಗತರನ್ನು ಗೌರವಿಸಿದರು. ಸೇವಾ ಸಂಘದ ಪ್ರ. ಕಾರ್ಯದರ್ಶಿ ಹರೀಶ್ ಮಿತ್ತಡ್ಕ, ಕೋಶಾಧಿಕಾರಿ ಶ್ರೀಪ್ರಸಾದ್ ಅಡ್ಯೆತ್ತಿಮಾರು, ಪುನರ್ನಿರ್ಮಾಣ ಸಮಿತಿಯ ಕೋಶಾಧಿಕಾರಿ ದಿನೇಶ್ ಪಂಬೆಜಾಲು, ಪದಾಧಿಕಾರಿಗಳು, ಸದಸ್ಯರುಗಳು ವಿವಿಧ ಜವಾಬ್ದಾರಿ ನಿರ್ವಹಿಸಿದರು.
ಶ್ರೀ ಸಿದ್ದಿವಿನಾಯಕ ಸೇವಾ ಸಂಘದ ಗೌರವಾಧ್ಯಕ್ಷ ನಾರಾಯಣ ಮನೋಳಿತ್ತಾಯ ಕಾಜಿಮೂಲೆಯವರು ಪ್ರಾಸ್ತಾವಿಕ ನುಡಿಯಾಡಿದರು. ಜಲಜಾಕ್ಷಿ ನಾಗೇಶ್ ಕೋಡಿ, ಪ್ರತಿಭಾ ಸತೀಶ್ ಕೂವೆಂಜ ಪ್ರಾರ್ಥಿಸಿದರು. ಲಕ್ಷ್ಮಿನಾರಾಯಣ ರೈ ಡೆಮ್ಮಂಗರ ಸ್ವಾಗತಿಸಿ, ಪುನರ್ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕಕ್ಕೂರು ವಂದಿಸಿದರು. ಯತೀಶ್ ಕುಲಾಲ್ ಕೆ. ನಿರೂಪಿಸಿದರು.
ಮರುನಿರ್ಮಾಣದ ಕುರಿತು ಸಮಿತಿಯವರು ಹೇಳಿದ್ದು ಹೀಗೆ..
ಈ ಕ್ಷೇತ್ರದಲ್ಲಿ ವಿಶೇಷ ಸಾನ್ನಿಧ್ಯವಿದೆ. ದೇವಾಲಯವೇ ಆಗಬೇಕು ಎನ್ನುವಷ್ಟರಮಟ್ಟಿಗೆ ದೇವರ ಪ್ರೇರಣೆ ಮತ್ತು ಶಕ್ತಿಯಿದೆ. ವಿಶೇಷ ಪ್ರಾರ್ಥನೆ ಮತ್ತು ಭಜನಾ ಹರಕೆಗೆ ಇಲ್ಲಿನ ಗಣಪತಿ ದೇವರು ಅನುಗ್ರಹ ಪ್ರಾಪ್ತಿ ಮಾಡುತ್ತಿದ್ದಾರೆ ಎಂಬುದಕ್ಕೆ ನೂರಾರು ನಿದರ್ಶನಗಳಿವೆ.
ವೇ.ಮೂ. ದಿನೇಶ್ ಮರಡಿತ್ತಾಯ ಪುರೋಹಿತರು
ಮಂದಿರ ಪುನರ್ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಕ್ಕೆ ಚಾಲನೆ ನೀಡಲಾಗಿದೆ. ದೇವ ಕಾರ್ಯದಲ್ಲಿ ಭಕ್ತರು ತೊಡಗಿಸಿ ವಿನಿಯೋಗ ಮಾಡುವ ಮನಃಸ್ಥಿತಿಯನ್ನು ನೀಡುವಂತೆ ದೇವರ ಆಶೀರ್ವಾದ ಬೇಡಿದ್ದೇವೆ. ಹತ್ತು ಮನಸ್ಸುಗಳು ಒಂದಾಗಿ ಕೈಂಕರ್ಯ ಕೈಗೆತ್ತಿಕೊಳ್ಳಬೇಕಾಗಿದೆ.
ವೇ.ಮೂ. ರಾಧಾಕೃಷ್ಣ ಭಟ್ ಕಕ್ಕೂರು ಗೌರವಾಧ್ಯಕ್ಷರು ಪುನರ್ ನಿರ್ಮಾಣ ಸಮಿತಿ
ಬಂಡೆಕಲ್ಲಿನ ಕೋರೆಯನ್ನು ಸಮತಟ್ಟು ಮಾಡಿ ಚಪ್ಪರದಡಿ ಭಜನೆ ಆರಂಭಿಸುವ ಮೂಲಕ ಇಲ್ಲಿ ಭಜನಾ ಮಂದಿರ ನಿರ್ಮಿಸಿದ್ದೇವೆ. ಭಜನೆಯಿಂದಲೇ ಇಲ್ಲಿನ ಸಾನ್ನಿಧ್ಯ ವೃದ್ಧಿಯಾಗಿದೆ. ವರ್ಷದಿಂದ ವರ್ಷಕ್ಕೆ ಭಕ್ತಿ ಮತ್ತು ಶ್ರದ್ಧೆಯ ಆರಾಧನಾ ಕೇಂದ್ರವಾಗಿ ಊರ ಪರವೂರ ಭಕ್ತಾಭಿಮಾನಿಗಳು ಬಂದು ಭಜನಾ ಹರಕೆ ಹೇಳಿ ದೇವರ ಅನುಗ್ರಹ ಪಡೆದುಕೊಳ್ಳುತ್ತಿದ್ದಾರೆ.
ಸಾಂತಪ್ಪ ಗೌಡ ಪಂಬೆಜಾಲು ಗೌರವ ಸಲಹೆಗಾರರು
23 ವರ್ಷಗಳಿಂದ ಈ ಮಂದಿರ ಸ್ಥಳೀಯರ ಆರಾಧನಾ ಕೇಂದ್ರವಾಗಿ ಚೈತನ್ಯದಾಯಕವಾಗಿ ನಡೆದಿದೆ. 2019 ರಲ್ಲಿ ಪುನರ್ ನಿರ್ಮಾಣದ ಯೋಜನೆ ಹಾಕಲಾಗಿತ್ತು. ಇದೀಗ 2 ತಿಂಗಳ ಹಿಂದಿನಿಂದ ಯೋಜನೆ ಕೈಗೆತ್ತಿಕೊಂಡು ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ 1.5 ವರ್ಷಗಳ ಕಾಲಾವಧಿಯಲ್ಲಿ ಮಂದಿರ ಪುನರ್ ನಿರ್ಮಾಣ ಮಾಡುವ ಸಂಕಲ್ಪ ಮಾಡಿಕೊಳ್ಳಲಾಗಿದೆ
ಜಯಪ್ರಕಾಶ್ ರೈ ಚೆಲ್ಯಡ್ಕ ಅಧ್ಯಕ್ಷರು, ಪುನರ್ನಿರ್ಮಾಣ ಸಮಿತಿ
ದೇವರ ಪ್ರೇರಣೆ ಮತ್ತು ಅನುಗ್ರಹವಿದೆ. ಊರಪರವೂರ ಭಕ್ತಾಭಿಮಾನಿಗಳು ಈ ಕಾರ್ಯದಲ್ಲಿ ಕೈ ಜೋಡಿಸಲು ಈ ಮೂಲಕ ಮನವಿ ಮಾಡುತ್ತೇನೆ.
ಕೃಷ್ಣಪ್ಪ ಕುಲಾಲ್ ಅಧ್ಯಕ್ಷರು ಶ್ರೀ ಸಿದ್ಧಿವಿನಾಯಕ ಸೇವಾ ಸಂಘ (ರಿ.)