ಪುತ್ತೂರು: ಗ್ರಾಮೀಣ ಭಾಗದ ಪ್ರತಿಭೆಗಳ ಅನಾವರಣದ ಜೊತೆ, ರಾಜ್ಯ ಮಟ್ಟದಲ್ಲಿ ಗ್ರಾಮೀಣ ಭಾಗದ ಹೆಸರನ್ನು ತರುವಲ್ಲಿ ಗುರುಪ್ರಿಯಾ ಕಾಮತ್ ಇವರು ಪಟ್ಟ ಶ್ರಮ ಬಹಳಷ್ಟು. ನಮ್ಮೂರಿನ ಹೆಮ್ಮೆಯ ಪ್ರತಿಭೆ ಒಂದು ಕಲಾಕೇಂದ್ರ ಸ್ಥಾಪಿಸಿ ಪುರುಷರಕಟ್ಟೆಯಿಂದ – ಬಿ. ಸಿ ರೋಡಿನವರೆಗೆ ತನ್ನ ಶಾಖೆ ವಿಸ್ತರಿಸಿ, ಸಂಗೀತ ಕ್ಷೇತ್ರದಲ್ಲಿ ಶಕ್ತಿಯನ್ನು ತುಂಬುವಂತಹ ನಿಟ್ಟಿನಲ್ಲಿ ಪುತ್ತೂರಿನಲ್ಲಿ ನೂತನ ಶಾಖೆ ಪ್ರಾರಂಭಿಸಿರುವುದು ಸಂತಸದ ವಿಚಾರ ಎಂದು ಗುರುಕುಲ ಕಲಾಕೇಂದ್ರದ ಪ್ರೋತ್ಸಾಹಕ, ಪುತ್ತಿಲ ಪರಿವಾರದ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಅವರು ಗುರುಕುಲ ಕಲಾಕೇಂದ್ರ ಪುರುಷರಕಟ್ಟೆ ಇದರ ಸುಗಮ ಸಂಗೀತ ತರಗತಿಯ ನೂತನ ಶಾಖೆಯನ್ನು ಡಿ.10 ರಂದು ಪುತ್ತೂರು ಬೊಳುವಾರಿನ ಶ್ರೀ ರಕ್ಷಾ ಕಲಾ ಕೌಶಲ್ಯ ತರಬೇತಿ ಕೇಂದ್ರ ಇಲ್ಲಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೊಳುವಾರು ಶ್ರೀ ರಕ್ಷಾ ಕಲಾ ಕೌಶಲ್ಯ ತರಬೇತಿ ಕೇಂದ್ರದ ಸಂಚಾಲಕ ಶ್ರೀನಿವಾಸ್ ಹೆಚ್.ಬಿ.ಮಾತನಾಡಿ ,ಒಂದೊಳ್ಳೆ ಗುರುಗಳು ನಮ್ಮ ತರಬೇತಿ ಕೇಂದ್ರಕ್ಕೆ ದೊರಕಿದ್ದು – ಪುತ್ತೂರಿನ ಸಂಗೀತಾಸಕ್ತ ಮಕ್ಕಳಿಗೆ ಒಂದು ಒಳ್ಳೆಯ ಅವಕಾಶ ಸಿಕ್ಕಿದಂತಾಗಿದೆ. ಒಳ್ಳೆಯ ವಾತಾವರಣದಲ್ಲಿ ಮಕ್ಕಳು ಸಂಗೀತಭ್ಯಾಸ ಮಾಡಲು ಬೇಕಾದ ಎಲ್ಲಾ ಸೌಕರ್ಯಗಳು ಕಲಾ ಕೇಂದ್ರದಲ್ಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ರಕ್ಷಾ ಕಲಾ ಕೌಶಲ್ಯ ತರಬೇತಿ ಕೇಂದ್ರದ ಅಧ್ಯಕ್ಷ ಡಾ. ಕೆ. ಎಸ್. ಭಟ್ ಅವರು ಮಾತನಾಡಿ , ನಮ್ಮ ಸಹೋದರಿ ಗುರುಪ್ರಿಯಾ ಇವರು ಪ್ರಾರಂಭಿಸಿರುವ ಸಂಗೀತ ತರಗತಿಯು ಇನ್ನಷ್ಟು ಹೆಸರುವಾಸಿಯಾಗಲಿ, ಇಲ್ಲಿ ಕಲಿತಂತಹ ಮಕ್ಕಳು ಈ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಆಗಲಿ, ಯಾವುದೇ ಸಂದರ್ಭದಲ್ಲಿ ಈ ಕಲಾಕೇಂದ್ರಕ್ಕೆ ಬೇಕಾದ ಸಹಕಾರ ಪ್ರೋತ್ಸಾಹ ನಮ್ಮಿಂದ ಸಿಗುತ್ತದೆ ಎಂದರು. ಕನ್ನಡ ಕೋಗಿಲೆ ಖ್ಯಾತಿಯ ಅಪೇಕ್ಷಾ ಪೈ, ಪ್ರಗತಿ ಸ್ಟಡಿ ಸೆಂಟರ್ ನ ಸಂಚಾಲಕ ಪಿ.ವಿ. ಗೋಕುಲದಾಸ್,ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ, ಕಲಾಕೇಂದ್ರದ ಪ್ರೋತ್ಸಾಹಕ ಸುರೇಶ್ ರೈ ಸೂಡಿಮುಳ್ಳು, ಹಿರಿಯ ಗಾಯಕ ಶಿವಾನಂದ್ ಶೆಣೈ, ಚಂದ್ರಶೇಖರ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಗುರುಕುಲ ಕಲಾಕೇಂದ್ರ ದ ವಿದ್ಯಾರ್ಥಿಗಳಾದ ಶ್ರಾವ್ಯ, ರಕ್ಷಾ, ತೀರ್ಥನಾ, ಲಿಷಾ, ತನ್ವಿ ಇವರಿಂದ ಗೀತಾ ಗಾಯನ ನಡೆಯಿತು. ಗುರುಕುಲ ಪರಿವಾರಕ್ಕೆ ಹೊಸದಾಗಿ ಸೇರಿದ ಮಕ್ಕಳಿಗೆ ಕಲಾಕೇಂದ್ರದ ವಿಶೇಷವಾಗಿ ಸ್ವಾಗತಿಸಲಾಯಿತು.ಕಲಾಕೇಂದ್ರದ ಸಂಚಾಲಕಿ ಗುರುಪ್ರಿಯಾ ಕಾಮತ್ ಪ್ರಾಸ್ತವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.ಕಲರ್ಸ್ ಕನ್ನಡ ವಾಹಿನಿಯ ಕನ್ನಡಕೋಗಿಲೆ ಖ್ಯಾತಿಯ ಅಪೇಕ್ಷಾ ಪೈ ಇವರಿಂದ ಹಾಡುಗಾರಿಕೆ ನಡೆಯಿತು.
ಕಾರ್ಯಕ್ರಮದಲ್ಲಿ ಗುರುಕುಲ ಕಲಾಕೇಂದ್ರದ ಪೋಷಕರಾದ ವಿದ್ಯಾನಾಗೇಶ್ ನಾಯಕ್, ವಿಜಯ ಕಾಮತ್, ತಾಲೂಕು ಯುವಜನ ಒಕ್ಕೂಟದ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು, ಕಲಾಕೇಂದ್ರದ ಸುಗಮ ಸಂಗೀತಕ್ಕೆ ಸೇರಿದ ನೂತನ ಮಕ್ಕಳ ಪೋಷಕರು ಹಾಗೂ ಕಲಾಭಿಮಾನಿಗಳು ಭಾಗವಹಿಸಿದ್ದರು.ಪ್ರಖ್ಯಾತಿ ಯುವತಿ ಮಂಡಲದ ದೀಪ್ತಿ ಬಲ್ನಾಡು ಅತಿಥಿಗಳಿಗೆ ಹೂ ಗುಚ್ಛ ನೀಡಿ ಸ್ವಾಗತಿಸಿದರು. ಶಿವಾನಂದ ಕಾಮತ್ ಸ್ಮರಣಿಕೆ ನೀಡಿ ಗೌರವಿಸಿದರು.ಪ್ರಖ್ಯಾತಿ ಯುವತಿ ಮಂಡಲದ ಸಮೃದ್ಧಿ ಶೆಣೈ ವಂದಿಸಿದರು.
ಇಲ್ಲಿ ಸುಗಮ ಸಂಗೀತ ತರಗತಿ, ಭಜನೆ, ಭಕ್ತಿಗೀತೆ ,ಭಾವಗೀತೆ, ಜನಪದ ಗೀತೆ, ದೇಶ ಭಕ್ತಿಗೀತೆ ಮತ್ತು ಸುಮಧುರ ಚಲನಚಿತ್ರ ಗೀತೆಗಳನ್ನು ಕಲಿಸಿಕೊಡಲಾಗುವುದು ಎಂದು ಗುರುಕುಲ ಕಲಾಕೇಂದ್ರದ ನಿರ್ದೇಶಕಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ,ಖ್ಯಾತ ಗಾಯಕಿ ಗುರುಪ್ರಿಯಾ ನಾಯಕ್ ಅವರು ತಿಳಿಸಿದ್ದಾರೆ.