ಯಕ್ಷಗಾನವನ್ನು ಅರ್ಥೈಸಿಕೊಳ್ಳುವ ಸಹೃದಯಿಗಳು ನಾವಾಗಬೇಕು: ಲಕ್ಷ್ಮೀಶ ತೋಳ್ಪಾಡಿ
ಪುತ್ತೂರು: “ಮಂತ್ರದ ವಿನಿಯೋಗವಾಗುವ ಕ್ಷೇತ್ರ ಯಕ್ಷಗಾನ. ಇದನ್ನು ಅರ್ಥೈಸಿಕೊಳ್ಳುವ ಸಹೃದಯಿಗಳು ನಾವಾಗಬೇಕು. ಅಂತೆಯೇ ಇದು ಕೇಳುಗರನ್ನು ಬೆಳೆಸುವ ಕ್ಷೇತ್ರವೂ ಹೌದು. ಅರ್ಥದಾರಿಗಳು ಕೇಳುಗರನ್ನು ತೃಪ್ತಿ ಪಡಿಸುವ ಗುಣವನ್ನು ಹೊಂದಿರಬೇಕು” ಎಂದು ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ಇವರು ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನ ಕೇಂದ್ರ, ಐಕ್ಯೂಎಸಿ, ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ದೇರಾಜೆ ಸೀತಾರಾಮಯ್ಯ ಸಂಸ್ಕರಣ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ದೇರಾಜೆ ಸೀತಾರಾಮಯ್ಯ ನೆನಪು ನೂರೆಂಟು (ಸಂಸ್ಕರಣ ಗ್ರಂಥ) ಮತ್ತು ರಸಋಷಿ (ಮರುಮುದ್ರಣ) ಕೃತಿಗಳನ್ನು ಲೋಕಾರ್ಪಣೆ ಗೈದು ಮಾತನಾಡಿದರು.

“ಯಕ್ಷಗಾನ ಕಲಾವಿದನಾದವನು ಸೋಲುವುದಕ್ಕೆ ಭಯಪಡಬಾರದು. ಸೋಲಿಗೆ ಹೆದರಿದರೆ ಸೋಲುವ ಮೊದಲೇ ಸೋಲನ್ನು ಒಪ್ಪಿಕೊಂಡಂತೆ. ಗೆಲುವಿನ? ಸಮಾನವಾಗಿ ಸೋಲನ್ನು ಕೂಡಾ ಸ್ವೀಕರಿಸುವ ಮನೋಭಾವನೆ ಕಲಾವಿದನಲ್ಲಿರಬೇಕು. ವಾಗ್ವಾದಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡದೆ ಜೀವನವನ್ನು ಕಲೆಯ ಜೊತೆ ಸರಿದೂಗಿಸಿಕೊಂಡು ಮುನ್ನಡೆಯಬೇಕು” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಪತಿ ಕಲ್ಲೂರಾಯ ಮಾತನಾಡಿ, “ಈಗಿನ ಸಮಾಜದಲ್ಲಿ ವೃತ್ತಿಯನ್ನು ಪಡೆದುಕೊಳ್ಳುವುದೇ ಜನರ ಗುರಿಯಾಗಿದೆ. ವೃತ್ತಿಯನ್ನು ಪಡೆದುಕೊಳ್ಳುವುದರ ಜೊತೆಗೆ ಕಲೆಯನ್ನು ಬೆಳೆಸಿಕೊಳ್ಳುವುದು ಕೂಡಾ ಬಹಳ ಮುಖ್ಯ. ವೃತ್ತಿಯನ್ನು ಪಡೆದುಕೊಳ್ಳಲು ಬೇಕಾದ ವ್ಯಕ್ತಿತ್ವವನ್ನು ಕಲೆ ರೂಪಿಸಿಕೊಡುತ್ತದೆ. ಇಂತಹ ಅದ್ಭುತ ಕಲೆಯನ್ನು ಬೆಳೆಸುವಂತವರು ನಾವಾಗಬೇಕು” ಎಂದು ನುಡಿದರು.
ಈ ಸಂದರ್ಭದಲ್ಲಿ ದೇರಾಜೆ ಸಂಸ್ಕರಣಾ ಸಮಿತಿಯ ಗೌರವಾಧ್ಯಕ್ಷ ಆನೆಕಾರು ಗಣಪ್ಪಯ್ಯ ಹಾಗೂ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳೀಕೃಷ್ಣ ಕೆ. ಎನ್ ಶುಭಹಾರೈಸಿದರು.ಬಳಿಕ ಶ್ರೀರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ಅರ್ಥಧಾರಿ ಗಣರಾಜ ಕುಂಬ್ಳೆ ಯಕ್ಷ ಗೌರವವನ್ನು ಪಡೆದುಕೊಂಡರು.
ವೇದಿಕೆಯಲ್ಲಿ ಐಕ್ಯೂಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕೆ ಎಸ್ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಸ್ವಾಗತಿಸಿ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ ಬಿ ವಂದಿಸಿದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ ಎಂ. ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ದೇರಾಜೆ ಅರ್ಥ ವೈಭವ ಸ್ಮರಣೆಯನ್ನು ಲಕ್ಷ್ಮೀಶ ತೋಳ್ಪಾಡಿ ಉದ್ಯೋನ್ಮುಖ ಅರ್ಥಧಾರಿಗಳ ಸಮ್ಮುಖದಲ್ಲಿ ನಡೆಸಿಕೊಟ್ಟರು. ಮದ್ಯಾಹ್ನ ನಂತರದ ಅವಧಿಯಲ್ಲಿ ಅಗ್ನಿಪರೀಕ್ಷೆ -ಶ್ರೀರಾಮ ಪಟ್ಟಾಭಿಷೇಕ ತಾಳಮದ್ದಳೆ ಕಾರ್ಯಕ್ರಮ ನೆರವೇರಿತು.