ಉಪ್ಪಿನಂಗಡಿ: ಪೆರ್ನೆ ಬಿಳಿಯೂರಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಡಿ ಕಟ್ಟಿರುವ ಕಿಂಡಿ ಅಣೆಕಟ್ಟಿನಲ್ಲಿ ಗೇಟ್ ಅಳವಡಿಸುವ ಮೂಲಕ ನೀರು ನಿಲ್ಲಿಸುವ ಕಾರ್ಯವಾಗಿದ್ದು, ಭಾನುವಾರ ಮಾಜಿ ಶಾಸಕ ಸಂಜೀವ ಮಠಂದೂರು ಅವರು ನದಿಗೆ ಬಾಗಿನ ಅರ್ಪಿಸಿದರು.
ಬಳಿಕ ಮಾತನಾಡಿದ ಅವರು ಈ ಅಣೆಕಟ್ಟಿನಿಂದಾಗಿ ಪುತ್ತೂರು ಬಂಟ್ವಾಳ ಬೆಳ್ತಂಗಡಿ ತಾಲೂಕುಗಳ ಆರು ಗ್ರಾಮಗಳ ಕೃಷಿಕರಿಗೆ ಅನುಕೂಲತೆ ಆಗಲಿದೆ. ಈ ಭಾಗದಲ್ಲಿ ಅಂತರ್ಜಲ ಹೆಚ್ಚಳಿದೆ. ಹಿಂದಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿಯವರು ವಿಶೇಷ ಕಾಳಜಿ ವಹಿಸಿ ಬಿಡುಗಡೆಗೊಳಿಸಿದ ಸುಮಾರು 51 ಕೋ.ರೂ.ಗಳ ಅನುದಾನದಲ್ಲಿ ಈ ಅಣೆಕಟ್ಟು ನಿರ್ಮಾಣಗೊಂಡಿದ್ದು, ನಾನು ಶಾಸಕನಾಗಿದ್ದಾಗ ಪ್ರಮುಖವಾಗಿ ರೈತಾಪಿ ವರ್ಗದ ಹಿತದೃಷ್ಟಿಯನ್ನಿಟ್ಟುಕೊಂಡು ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಕಿಂಡಿ ಅಣೆಕಟ್ಟು ಸೇತುವೆಯಾಗಿಯೂ ಕಾರ್ಯನಿರ್ವಹಿಸಲಿದ್ದು, ನದಿಯ ಎರಡೂ ದಡವನ್ನು ಬೆಸೆಯುವ ಕಾರ್ಯವೂ ಆಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಸರಕಾರಿ ಬಸ್‌ನ ಸೌಲಭ್ಯವೂ ಬರಲಿದೆ ಎಂದರು.
ಈ ಸಂದರ್ಭ ಪೆರ್ನೆ ಗ್ರಾ.ಪಂ. ಸದಸ್ಯರಾದ ನವೀನ ಪದಬರಿ, ಕೇಶವ ಸುಣ್ಣಾನ, 34 ನೆಕ್ಕಿಲಾಡಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ, ಪ್ರಮುಖರಾದ ಸಂತೋಷ್, ಗಂಗಾಧರ, ಹಮ್ಮಬ್ಬ ಶೌಕತ್ ಆಲಿ, ಲಕ್ಷ್ಮಣ ಗೌಡ, ಗೋಪಾಲ ಸಪಲ್ಯ, ಮಂಜುನಾಥ ಸಾಲಿಯಾನ್, ಮಹೇಶ್ ಬಿಳಿಯೂರು, ಸದಾನಂದ ನೆಕ್ಕಿಲಾಡಿ, ಮುಕುಂದ ಬಜತ್ತೂರು, ಪ್ರವೀಣ ಗೌಡ, ಸತೀಶ, ಪ್ರಶಾಂತ್ ಗೌಡ, ಸದಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.