ಬಲ್ನಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುನಶ್ಚೇತನ ಕಾರ್ಯಾಗಾರ

0

ಕಲಿಯುವಿಕೆ ಸ್ವಾಭಾವಿಕ ಪ್ರಕ್ರಿಯೆ ಆಗಬೇಕು: ಡಾ| ವಿಜಯ ಸರಸ್ವತಿ

ಪುತ್ತೂರು: ವಿದ್ಯಾರ್ಥಿಗಳು ಆತಂಕ ಬಿಟ್ಟು ಒತ್ತಡಕ್ಕೆ ಒಳಗಾಗದೆ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು, ಕಲಿಯುವಿಕೆ ಎಂದರೆ ಅದು ಸ್ವಾಭಾವಿಕ ಪ್ರಕ್ರಿಯೆ ಆಗಬೇಕು. ಕಂಬಳಿ ಹುಳ ಚಿಟ್ಟೆ ಆಗುವ ರೀತಿಯಲ್ಲಿ ಕಲಿಕೆ ಆಗಬೇಕು ಆಗ ಮಾತ್ರ ವಿದ್ಯೆ ತಲೆಗೆ ಹತ್ತಲು ಸಾಧ್ಯ ಎಂದು ವಿವೇಕಾನಂದ ಕಾಲೇಜಿನ ವಾಣಿಜ್ಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಸರಸ್ವತಿ ಹೇಳಿದರು.


ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಲ್ನಾಡು ಇದರ ಜಂಟಿ ಆಶ್ರಯದಲ್ಲಿ ದ.16 ರಂದು ಬಲ್ನಾಡು ವಸತಿ ಶಾಲೆಯಲ್ಲಿ ಜರಗಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪುನಶ್ಚೇತನ ಕಾರ್ಯಾಗಾರ ಹಾಗೂ ಸುಗಮ ಸಂಗೀತ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ನಾವು ಜ್ಞಾನಾರ್ಜನೆಗಾಗಿ ಓದಬೇಕು, ಕೇವಲ ಮಾರ್ಕ್ಸ್‌ಗೆ ಮಾತ್ರ ಓದುವುದಲ್ಲ ಎಂದು ಹೇಳಿದ ಅವರು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾರ್ಥಿಗಳು ಪರೀಕ್ಷೆಗೆ ಯಾವ ರೀತಿ ತಯಾರು ಮಾಡಬಹುದು ಮತ್ತು ಜೀವನದಲ್ಲಿ ಹೇಗೆ ಒಳ್ಳೆಯ ಗುರಿಯನ್ನು ಸಾಧಿಸುವ ಮೂಲಕ ಉತ್ತಮ ಪ್ರಜೆಗಳಾಗಿ ಬದುಕಬಹುದು ಎಂಬ ಬಗ್ಗೆ ಮಾತನಾಡಿದರು.


ಸಭಾಧ್ಯಕ್ಷತೆ ವಹಿಸಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಅರುಣ್ ನಾಯ್ಕ್‌ರವರು, ವಿದ್ಯಾರ್ಥಿಗಳು ಭಯಬಿಟ್ಟು ಚೆನ್ನಾಗಿ ಓದುವ ಮೂಲಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಶಾಲೆಗೆ ಮತ್ತು ಹೆತ್ತವರಿಗೆ ಕೀರ್ತಿ ತರುವಂತೆ ಶುಭ ಹಾರೈಸಿದರು. ಅತಿಥಿಯಾಗಿದ್ದ ಪತ್ರಕರ್ತ ಸಿಶೇ ಕಜೆಮಾರ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಗಾಯಕರುಗಳಾದ ಕೃಷ್ಣರಾಜ್ ಸುಳ್ಯ, ಪೂರ್ಣಿಮಾ ಕೃಷ್ಣರಾಜ್,ಸುಬ್ರಹ್ಮಣ್ಯ ಕಾರಂತ್ ಉಪಸ್ಥಿತರಿದ್ದರು. ಬಾಂಧವಿ ಮತ್ತು ತಂಡದವರು ಪ್ರಾರ್ಥಿಸಿದರು. ಪುತ್ತೂರು ಸ್ವರ ಮಾಧುರ್ಯ ಸಂಗೀತ ಬಳಗದ ಜನಾರ್ದನ್ ಬಿ.ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ಮೀನಾ ಸತೀಶ್ ವಂದಿಸಿದರು. ವಿದ್ಯಾರ್ಥಿನಿಯರಾದ ಅನನ್ಯ ಮತ್ತು ಪೂರ್ಣಶ್ರೀ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸದಾಶಿವ ಸಹಕರಿಸಿದ್ದರು.


ಮನರಂಜಿಸಿದ ಸುಗಮ ಸಂಗೀತ
ಸಭಾ ಕಾರ್ಯಕ್ರಮದ ಬಳಿಕ ಪುತ್ತೂರು ಸ್ವರ ಮಾಧುರ್ಯ ಸಂಗೀತ ಬಳಗದ ಜನಾರ್ದನ್ ಬಿ ಮತ್ತು ಬಳಗದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ರಿದಂ ಪ್ಯಾಡ್‌ನಲ್ಲಿ ಕೃಷ್ಣರಾಜ್, ಕೀಬೋರ್ಡ್‌ನಲ್ಲಿ ಸುಬ್ರಹ್ಮಣ್ಯ ಕಾರಂತ, ತಬಲಾದಲ್ಲಿ ಜನಾರ್ದನ್ ಬಿ ಸಹಕರಿಸಿದ್ದರು. ಗಾಯನದಲ್ಲಿ ಪ್ರಕೃತಿ ಅನಂತಾಡಿ, ಸೋನಿಕಾ ಜನಾರ್ದನ್, ಪೂರ್ಣಿಮಾ ಕೃಷ್ಣರಾಜ್‌ರವರ ಕಂಠಸಿರಿಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸುಮಾರು ೨೪೦ ವಿದ್ಯಾರ್ಥಿಗಳು ಸಂಗೀತಾ ಕಾರ್ಯಕ್ರಮ ಆಲಿಸಿ ಖುಷಿಪಟ್ಟರು.

LEAVE A REPLY

Please enter your comment!
Please enter your name here