ವಿದ್ಯಾರ್ಥಿಗಳು ದೇಶಕ್ಕೆ ಕೃತಜ್ಞರಾಗಿರಬೇಕು; ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ
ರಾಮಕುಂಜ: ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ ಹಾಗೂ ಪ.ಪೂ.ಕಾಲೇಜು ವತಿಯಿಂದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಷಷ್ಟ್ಯಬ್ದ ಪ್ರಯುಕ್ತ ಗುರುವಂದನೆ ಡಿ.17ರಂದು ಮಧ್ಯಾಹ್ನ ಪ.ಪೂ.ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಶ್ರೀ ವಿಶ್ವಪ್ರಸನ್ನ ಸ್ವಾಮೀಜಿಯವರಿಗೆ ಪುಷ್ಪಾರ್ಚನೆ ಮಾಡಿ, ಮೈಸೂರು ಪೇಟ, ತುಳಸಿ ಮಾಲೆ, ಫಲತಾಂಬೂಲ ಸಮರ್ಪಣೆ ಮಾಡಿ ಗುರುವಂದನೆ ಸಲ್ಲಿಸಲಾಯಿತು. ಗುರುವಂದನೆ ಸ್ವೀಕರಿಸಿ ಮಾತನಾಡಿದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ನಮ್ಮನ್ನು ಎತ್ತರಕ್ಕೆ ಬೆಳೆಸಿರುವ ತಂದೆ, ತಾಯಿ, ಶಿಕ್ಷಣ ಸಂಸ್ಥೆ, ದೇಶಕ್ಕೆ ಕೃತಜ್ಞರಾಗಿರಬೇಕು. ಈ ದಿಶೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಪ್ರಯತ್ನಿಸಬೇಕು. ಶಿಕ್ಷಣದ ಜೊತೆ ಜೊತೆಗೆ ಉನ್ನತ ಸಂಸ್ಕಾರವನ್ನೂ ಪಡೆಯಬೇಕೆಂದು ನುಡಿದರು. ಶ್ರೀ ವಿಶ್ವೇಶತೀರ್ಥರ ಹುಟ್ಟೂರಿನ ಈ ವಿದ್ಯಾಸಂಸ್ಥೆ ಉನ್ನತ ಸ್ಥಾನಕ್ಕೇರಬೇಕು. ಇಲ್ಲಿ ಹಲವು ಅನುಕೂಲತೆಗಳೂ ಇವೆ. ಇಲ್ಲಿ ಚೆನ್ನಾಗಿ ಕಲಿತು ವಿದ್ಯಾರ್ಥಿಗಳು ಮುಂದೆ ಉನ್ನತ ಹುದ್ದೆಗೆ ಏರಬೇಕೆಂದು ಹೇಳಿದರು.
ಅಭಿನಂದನಾ ಭಾಷಣ ಮಾಡಿದ ಧಾರ್ಮಿಕ ವಿದ್ವಾಂಸರಾದ ವೇದಮೂರ್ತಿ ಶಿಬರ ಶ್ರೀವತ್ಸ ಕೆದಿಲಾಯ ಅವರು, ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಜನಸೇವೆಯನ್ನು ಅನುಸರಿಸಿಕೊಂಡು ಬಂದವರು ಶ್ರೀ ವಿಶ್ವಪ್ರಸನ್ನ ತೀರ್ಥರು. ಮಕ್ಕಳ ಜೊತೆ ಮಕ್ಕಳಾಗಿ ಬೆರೆಯುವ ಸದ್ಗುಣ ಅವರದ್ದು. ಬದರಿನಾಥ, ಕೇದರನಾಥಕ್ಕೆ ಪಾದಯಾತ್ರೆ, ಗೋಶಾಲೆ ನಡೆಸುವ ಮೂಲಕ ವಿಶ್ವ ವಿಖ್ಯಾತರಾಗಿದ್ದಾರೆ. ಅವರೊಳಗಿನ ಸದ್ಗುಣಗಳನ್ನು ನಾವೂ ಅಳವಡಿಸಿಕೊಂಡಲ್ಲಿ ಮಾತ್ರ ಅವರ ಷಷ್ಟ್ಯಬ್ದ ಆಚರಣೆಯು ಸಾರ್ಥಕ್ಯ ಪಡೆದುಕೊಳ್ಳಲಿದೆ. ದೇವರು ಅವರಿಗೆ 120 ವರ್ಷ ಆಯುಷ್ಯ ನೀಡಲಿ. ಅವರಿಂದ ಸನಾತನ ಧರ್ಮ ಬೆಳೆಯಲಿ ಎಂದರು.
ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್.ರಾಧಾಕೃಷ್ಣ ಅವರು ಮಾತನಾಡಿ, ಸಂಸ್ಥೆ ಬೆಳೆದು ಬಂದ ಹಾದಿ ಬಗ್ಗೆ ತಿಳಿಸಿ ಹಿರಿಯ ವಿದ್ಯಾರ್ಥಿಗಳ ಹಾಗೂ ವಿವಿಧ ಸಂಘಸಂಸ್ಥೆಗಳು ನೀಡಿರುವ ಆರ್ಥಿಕ ಸಹಾಯದ ಬಗ್ಗೆ ತಿಳಿಸಿದರು. ಸುಮಾರು 1.50 ಕೋಟಿ ರೂ.ವೆಚ್ಚದಲ್ಲಿ ಸಭಾಭವನ ನಿರ್ಮಾಣವಾಗುತ್ತಿದ್ದು ಶೇ.50ರಷ್ಟು ಕಾಮಗಾರಿ ಮುಗಿದಿದೆ ಎಂದು ಹೇಳಿದರು. ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಭೌತಶಾಸ್ತ್ರ ಉಪನ್ಯಾಸಕ ನರಸಿಂಹ ಭಟ್, ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಪುತ್ತೂರು ವಿವೇಕಾನಂದ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಹೆಚ್ಒಡಿ ಕೃಷ್ಣ ಕಾರಂತ್, ನ್ಯಾಯವಾದಿ ನಾಗೇಶ್ ಶರ್ಮ ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ಹಿರಿಯ ವಿದ್ಯಾರ್ಥಿಗಳಾದ ಬೆಂಗಳೂರಿನ ಐಟಿ ಕನ್ಸಲ್ಟೆಂಟ್ ಪ್ರಿನ್ಸಿಪಾಲ್ ರಾಘವೇಂದ್ರ ಉಳಿತ್ತಾಯ, ಬೆಂಗಳೂರಿನ ಎಎಂಎ ಸೆರಾಮಿಕ್ಸ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಅಬ್ದುಲ್ ಸಮದ್ ಕುಂತೂರು, ಕಡಬ ಜೋನ್ಸನ್ ಗ್ಲಾಸಸ್ ಮತ್ತು ಪ್ಲೈವುಡ್ ಮಾಲಕ, ಕಡಬ ಲಯನ್ಸ್ ಕ್ಲಬ್ ಅಧ್ಯಕ್ಷರೂ ಆದ ತೋಮಸ್ ಕೆ.ಎಸ್., ಪ್ರಗತಿಪರ ಕೃಷಿಕ ಕೃಷ್ಣ ಕೆದಿಲಾಯ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್, ಕೋಶಾಧಿಕಾರಿ ಕೆ.ಸೇಸಪ್ಪ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಕೊಯಿಲ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸದಸ್ಯ ಮಾಧವ ಆಚಾರ್ ಇಜ್ಜಾವು, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮಾಧವ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ.ಪೂ.ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್ ವಂದಿಸಿದರು. ಉಪನ್ಯಾಸಕ ಚೇತನ್ ಮೊಗ್ರಾಲ್ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ:
ನಿವೃತ್ತ ಉಪನ್ಯಾಸಕರಾದ ಹರಿನಾರಾಯಣ ಆಚಾರ್ಯ, ಪ್ರೌಢಶಾಲಾ ವಿಭಾಗದ ನಿವೃತ್ತ ಶಿಕ್ಷಕ ಬಾಲಚಂದ್ರ ಮುಚ್ಚಿಂತಾಯ, ಸಂಸ್ಕೃತ ಪಾಠಶಾಲೆಯ ನಿವೃತ್ತ ಮುಖ್ಯಗುರು ಜನಾರ್ದನ ಕೆ.ಜಿ., ಖ್ಯಾತ ಕಬಡ್ಡಿ ತರಬೇತುದಾರ ಮಾಧವ ಬಿ.ಕೆ., ಜಶ್ವಂತ್ ಗೌಡ ಅವರನ್ನು ಸಂಸ್ಥೆಯ ಪರವಾಗಿ ಪೇಜಾವರ ಸ್ವಾಮೀಜಿಯವರು ಸನ್ಮಾನಿಸಿ ಆಶೀರ್ವದಿಸಿದರು. ಹರಿನಾರಾಯಣ ಆಚಾರ್, ಬಾಲಚಂದ್ರ ಮುಚ್ಚಿಂತಾಯ, ಜನಾರ್ದನ ಬಿ.ಕೆ.,ಅವರು ಮಾತನಾಡಿ ಸನ್ಮಾನಕ್ಕೆ ಕೃತಜ್ಞತೆ ಸೂಚಿಸಿದರು. ಅತಿಥಿಗಳನ್ನು ಸ್ವಾಮೀಜಿಯವರು ಸನ್ಮಾನಿಸಿ ಗೌರವಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ:
ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗಿನಿಂದ ಮಧ್ಯಾಹ್ನದ ತನಕ ಪ.ಪೂ.ಕಾಲೇಜು ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.