ಪೂಕಳ ಲಕ್ಷ್ಮೀನಾರಾಯಣ ಭಟ್ರಿಗೆ ’ಶ್ರೀ ಯಕ್ಷಾಂಜನೇಯ ಪ್ರಶಸ್ತಿ’ – ಜಬ್ಬಾರ್ ಸಮೋ ಅವರಿಗೆ ’ಶ್ರೀ ಆಂಜನೇಯಯ 55ರ ಗೌರವ’ ಪ್ರದಾನ
ಶಾಸ್ತ್ರೀಯ ಸಂಗೀತ, ಹನುಮಾನ್ ಚಾಲೀಸ್, ಹರಿಕಥಾ ಕಾಲಕ್ಷೇಪ, ಭರತನಾಟ್ಯ, ತಾಳಮದ್ದಳೆಯ 5 ಅಂಶಗಳ ಕಾರ್ಯಕ್ರಮ
ಪುತ್ತೂರು: ಪುತ್ತೂರು ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘಕ್ಕೆ ಈಗ 55ರ ಸಂಭ್ರಮವು ಡಿ.23 ರಂದು ಬೆಳಿಗ್ಗೆ ಗಂಟೆ 9 ರಿಂದ ರಾತ್ರಿ 9ರ ತನಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ’ನಟರಾಜ ವೇದಿಕೆಯಲ್ಲಿ ’ಆಂಜನೇಯ 55 ಸಮಾರಂಭವು ನಡೆಯಲಿದೆ. ಸಮಾರಂಭವು ಶಾಸ್ತ್ರೀಯ ಸಂಗೀತ, ಹನುಮಾನ್ ಚಾಲೀಸ್, ಹರಿಕಥಾ ಕಾಲಕ್ಷೇಪ, ಭರತನಾಟ್ಯ, ತಾಳಮದ್ದಳೆಯ ೫ ಅಂಶಗಳೊಂದಿಗೆ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ’ಶ್ರೀ ಆಂಜನೇಯ 55’ ಹಿರಿಯ ಕಲಾವಿದ ಪೂಕಳ ಶ್ರೀ ಲಕ್ಷ್ಮೀನಾರಾಯಣ ಭಟ್ ಅವರಿಗೆ ’ಶ್ರೀ ಯಕ್ಷಾಂಜನೇಯ ಪ್ರಶಸ್ತಿ’, ಹಾಗೂ ಅರ್ಥದಾರಿ ಜಬ್ಬಾರ್ ಸಮೋ ಅವರಿಗೆ ’ಶ್ರೀ ಆಂಜನೇಯಯ 55ರ ಗೌರವ’ ಪ್ರದಾನ ನಡೆಯಲಿದೆ ಎಂದು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಿಗ್ಗೆ ಶ್ರೀ ಕ್ಷೇತ್ರ ಒಡಿಯೂರು ಗರುದೇವದತ್ತ ಸಂಸ್ಥಾನಮ್ ನ ಸಾದ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ ವಿ ಶ್ರೀನಿವಾಸ್ ಉಪಸ್ಥಿತಿಯಲ್ಲಿರುತ್ತಾರೆ. ಬಳಿಕ ಗಂ.10 ಕ್ಕೆ ವಿದುಷಿ ಡಾ| ಪವಿತ್ರಾ ರೂಪೇಶ್ ಅವರಿಂದ ಶಾಸ್ತ್ರೀಯ ಸಂಗೀತ, ಗಂ.11.15 ಕ್ಕೆ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಕಲಾವಿದರಿಂದ ’ ಹನುಮಾನ್ ಚಾಲೀಸ್’ ತಾಳಮದ್ದಳೆ, ಗಂ.12.30 ಕ್ಕೆ ಕೆ ಮಹಾಬಲ ಕೂಡ್ಲು ಅವರಿಂದ ಶರಸೇತು ಕಥಾಭಾಗದ ’ ಹರಿಕಥಾ ಕಾಲಕ್ಷೇಪ’ ಮದ್ಯಾಹ್ನ ಗಂಟೆ 1.45 ಕ್ಕೆ ವಿದುಷಿ ಮೇಘ ದೇವಾಡಿಗ ಪುತ್ತೂರು ಅವರಿಂದ ಭರತನಾಟ್ಯ ಪ್ರಸ್ತುತಿ ನಡೆಯಲಿದೆ. ಮದ್ಯಾಹ್ನ ಗಂ.3 ಕ್ಕೆ ತಾಳಮದ್ದಳೆ ವೀರಮಣಿ ಪ್ರಸಂಗ ನಡೆಯಲಿದೆ ಎಂದು ಅವರು ಹೇಳಿದರು.
ಸಂಜೆ ಶ್ರೀ ಆಂಜನೇಯ 55ರ ಸಭಾ ಕಾರ್ಯಕ್ರಮ:
ಸಂಜೆ ಗಂಟೆ 5ಕ್ಕೆ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ’ಶ್ರೀ ಆಂಜನೇಯ 55’ರ ಸಂಭ್ರಮವು ಸಂಪನ್ನವಾಗಲಿದೆ. ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ್ವಾರಕಾ ಕನ್ಸ್ಟ್ರಕ್ಷನ್ ಪುತ್ತೂರು ಇದರ ಮಾಲಕ ಕೆ.ಗೋಪಾಲಕೃಷ್ಣ ಭಟ್ ಹಾಗೂ ಪುತ್ತೂರು ಕಲ್ಲಮೆ ಶ್ರೀ ರಾಘವೇಂದ್ರ ಮಠದ ವ್ಯವಸ್ಥಾಪಕ ಡಾ.ಕೆ.ಸೀತಾರಾಮ ಭಟ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಬಿ.ಕೆ.ವೀಣಾ ಶುಭಾಶಂಸನೆ ಮಾಡಲಿದ್ದಾರೆ. ಇದೇ ಸಂದರ್ಭ ಹಿರಿಯ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ ಅವರಿಗೆ ಯಕ್ಷಾಂಜನೇಯ ಪ್ರಶಸ್ತಿ ಪ್ರದಾನ, ಅರ್ಥದಾರಿ ಜಬ್ಬಾರ್ ಸುಮೋ ಅವರಿಗೆ ಶ್ರೀ ಆಂಜನೇಯ 55ರ ಗೌರವ ಪ್ರದಾನ ಮಾಡಲಾಗುವುದು. ಡಾ. ವಿದ್ವಾನ್ ವಿನಾಯಕ ಭಟ್ ಗಾಳಿಮನೆ ಅವರು ಅಭಿನಂದನ ನುಡಿಯನ್ನಾಡಲಿದ್ದಾರೆ ಎಂದು ಭಾಸ್ಕರ್ ಬಾರ್ಯ ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಗೌರವ ಕಾರ್ಯದರ್ಶಿ ಟಿ.ರಂಗನಾಥ್ ರಾವ್, ಕೋಶಾಧಿಕಾರಿ ದುಗ್ಗಪ್ಪ ಎನ್, ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ ಪ್ರೆಮಲತಾ ಟಿ.ರಾವ್, ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ ಉಪಸ್ಥಿತರಿದ್ದರು.