ಡಿ.23: ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಕಾಣಿಯೂರು ಶಾಖೆಯ ಉದ್ಘಾಟನೆ

0

ಪುತ್ತೂರು: ಕರ್ನಾಟಕ ರಾಜ್ಯ ಸರಕಾರದ ಅತ್ಯುತ್ತಮ ಮಹಿಳಾ ಸಹಕಾರಿ ಸಂಘವೆಂಬ ರಾಜ್ಯ ಪ್ರಶಸ್ತಿ ಮತ್ತು ಉತ್ತಮ ಸಹಕಾರ ಸಂಘ ಪ್ರಶಸ್ತಿಯನ್ನು ಪಡೆದು ಕಳೆದ ಸತತ ನಾಲ್ಕು ವರ್ಷಗಳಿಂದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸಾಧನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಪುತ್ತೂರು ಶ್ರೀ ರಾಧಾಕೃಷ್ಣ ಮಂದಿರ ರಸ್ತೆಯಲ್ಲಿನ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ೫ನೇ ಶಾಖೆ ಡಿ.23ರಂದು ಕಡಬ ತಾಲೂಕಿನ ಕಾಣಿಯೂರು ಸಮೃದ್ಧಿ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಹಿರಿಯ ನಿರ್ದೇಶಕಿ ಪ್ರೇಮಲತಾ ರಾವ್ ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿಕೊಂಡು ದರ್ಬೆ ಟೌನ್ ಶಾಖೆ, ಉಪ್ಪಿನಂಗಡಿ ಶಾಖೆ, ನೆಹರುನಗರ ಶಾಖೆಯೊಂದಿಗೆ ಕಾರ್ಯಾಚರಿಸುತ್ತಿರುವ ಸಂಘ ಮಹಿಳೆಯರಿಂದ ಮಹಿಳೆಯರಿಗಾಗಿ 1975-76ರಲ್ಲಿ ಬಾಡಿಗೆ ಕೊಠಡಿಯಲ್ಲಿ ಪ್ರಾರಂಭಗೊಂಡು ಇದೀಗ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ತಾಲೂಕಿನ ಸೀಮಿತ ವ್ಯಾಪ್ತಿಯಲ್ಲಿ ಕಾರ್ಯ ನಡೆಸುತಿದ್ದ ನಮ್ಮ ಸಂಸ್ಥೆ ಜಿಲ್ಲಾ ವ್ಯಾಪ್ತಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಮೊದಲ ಪ್ರಯತ್ನ ಎಂಬಂತೆ ತಾಲೂಕಿನಿಂದ ಹೊರಗೆ ಕಡಬ ತಾಲೂಕಿನ ಕಾಣಿಯೂರಿನಲ್ಲಿ 5ನೇ ಶಾಖೆಯನ್ನು ಪ್ರಾರಂಭ ಮಾಡಲಿದ್ದೇವೆ ಎಂದ ಅವರು ಕಾಣಿಯೂರು ಶಾಖೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಸಮಾರಂಭದ ಉದ್ಘಾಟನೆ ಮಾಡಲಿದ್ದಾರೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು ಅವರು ಸಹಕಾರ ಧ್ವಜಾರೋಹಣ ಮಾಡಲಿದ್ದಾರೆ. ಸುಳ್ಯ ವಿಧಾನಸಭಾಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಕಾಣಿಯೂರು ಶಾಖೆಯ ಉದ್ಘಾಟನೆ ಮಾಡಲಿದ್ದಾರೆ. ರಾಜ್ಯ ಸಹಕಾರಿ ಪ್ರಕೋಷ್ಠದ ಸಂಚಾಲಕ ನಿಕಟಪೂರ್ವ ಶಾಸಕ ಸಂಜೀವ ಮಠಂದೂರು ಅವರು ಗಣಕೀಕೃತ ಬ್ಯಾಂಕಿಂಗ್‌ಗೆ ಚಾಲನೆ ನೀಡಲಿದ್ದಾರೆ. ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಅವರು ನಿರಖು ಠೇವಣಿ ಬಿಡುಗಡೆ ಮಾಡಲಿದ್ದಾರೆ.

ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಕಾಣಿಯೂರು ಗ್ರಾ.ಪಂ ಅಧ್ಯಕ್ಷ ವಿಶ್ವನಾಥ ಕೊಪ್ಪ ಅವರು ಉಳಿತಾಯ ಖಾತೆಗೆ ಚಾಲನೆ ನೀಡಲಿದ್ದಾರೆ. ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಉಷಾ ಅಂಚನ್ ಮಾರಾಟ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ತ್ರಿವೇಣಿ ಅವರು ಸಹಕಾರ ಜ್ಯೋತಿ ಮಹಿಳಾ ಸ್ವ ಸಹಾಯ ಸಂಘವನ್ನು ಉದ್ಘಾಟಿಸಲಿದ್ದಾರೆ. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಮತ್ತು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷ ಆನಂದ ಮೇಲ್ಮನೆ ಅವರು ಗೌರವ ಉಪಸ್ಥಿತಿಯಲ್ಲಿರುತ್ತಾರೆಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷೆ ಗೌರಿ ಹೆಚ್, ಉಪಾಧ್ಯಕ್ಷೆ ಉಮಾ ಡಿ.ಪ್ರಸನ್ನ, ನಿರ್ದೇಶಕರಾದ ವತ್ಸಲಾ ರಾಜ್ಞಿ, ಜಯಶ್ರೀ ಎಸ್ ಶೆಟ್ಟಿ, ಅರ್ಪಣಾ ಎಸ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ಟಿ ಅವರು ಉಪಸ್ಥಿತರಿದ್ದರು.

ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ:
ಸಂಘದಲ್ಲಿ ಸದಸ್ಯರಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಜೊತೆಗೆ ಜವುಳಿ, ಗ್ರಾಹಕ ಸಾಮಾಗ್ರಿಗಳ ಮಾರಾಟ, ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ಸರಕಾರಿ ಕಚೇರಿಗಳಿಗೆ ಸಾಮಾಗ್ರಿಗಳ ಸರಬರಾಜು ಮಾಡುವುದರ ಜೊತೆಗೆ ನ್ಯಾಯಬೆಲೆ ಅಂಗಡಿಯನ್ನು ಹೊಂದಿಕೊಂಡು ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಇ-ಸ್ಟಾಂಪಿಂಗ್ ವ್ಯವಸ್ಥೆಯಿದೆ. ಸಂಘದ ಮೂಲಕ ಅಂಗನವಾಡಿ ಕೇಂದ್ರಗಳಿಗೆ, ಆಸ್ಪತ್ರೆಗಳಿಗೆ, ಕನ್ಯಾನ ಆಶ್ರಮಕ್ಕೆ, ಎಂಡೋಸಲ್ಫಾನ್ ಪೀಡಿತ ಸಂರಕ್ಷಣ ಕೇಂದ್ರ ಹಾಗು 2016-17ನೇ ಸಾಲಿನ ಲಾಭಾಂಶದಲ್ಲಿ ಕೊಡಗು ಜಿಲ್ಲೆಯ ಗೋಣಿಕೊಪ್ಪ ತಾಲೂಕಿನ ನೆರೆ ಸಂತ್ರಸ್ತರಿಗೆ ಧನಸಹಾಯ ಮಾಡಲಾಯಿತು. ಆರ್ಥಿಕವಾಗಿ ಹಿಂದುಳಿದ ಅರ್ಹ ಸದಸ್ಯರಿಗೆ ಹಾಗು ಸಾರ್ವಜನಿಕರಿಗೆ ಆರ್ಥಿಕ ನೆರವು ನೀಡಲಾಗಿದೆ. ಸಂಘವು 31-3-2023ರ ಅಂತ್ಯಕ್ಕೆ ರೂ. 43.18 ಲಕ್ಷ ನಿವ್ವಳ ಲಾಭವನ್ನು ಹೊಂದಿ ಶೇ.16ರ ಲಾಭಾಂಶವನ್ನು ಘೋಷಣೆ ಮಾಡಲಾಗಿದೆ. ಜೊತೆಗೆ ಪ್ರಸ್ತುತ ಸಂಘದಲ್ಲಿ 2,800 ಮಂದಿ ಸದಸ್ಯರಿದ್ದಾರೆ. ಪುತ್ತೂರಿನಲ್ಲಿ ಸಹಕಾರ ಸಂಘದ ಕಚೇರಿಯ ಸಹಕಾರ ಭವನ ಆಧುನೀಕರಣಗೊಂಡು ಹವಾನಿಯಂತ್ರಣ ಅಳವಡಿಸಲಾಗಿದೆ. ಎಲ್ಲಾ ಶಾಖೆಗಳಿಗೆ ಸಿ.ಸಿ.ಕ್ಯಾಮರ ಅಳವಡಿಸಲಾಗಿದೆ. ನೂತನ ಕಾಣಿಯೂರು ಶಾಖೆಯಲ್ಲಿ ತ್ವರಿತಗತಿಯಲ್ಲಿ ಚಿನ್ನಾಭರಣ ಸಾಲ, ಠೇವಣಿ ಮೇಲಿನ ಆಕರ್ಷಕ ಬಡ್ಡಿದರ, ಹಿರಿಯ ನಾಗರಿಕರಿಗೆ ಹೆಚ್ಚುವರ ಬಡ್ಡಿ , ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ವಾಹನ ಸಾಲ ಸೌಲಭ್ಯ ನೀಡಲಾಗುವುದು ಎಂದು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಹೆಚ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here