ಸಾಮೆತ್ತಡ್ಕ ಶಾಲಾ ಸುವರ್ಣ ಸಂಭ್ರಮಕ್ಕೆ ಅದ್ಧೂರಿ ಚಾಲನೆ

0

ಶಿಕ್ಷಕರು, ಪಾಲಕರು ಮಕ್ಕಳಿಗೆ ಆದರ್ಶ ಪ್ರತಿಮೆಗಳಾಗಬೇಕು – ಪ್ರೊ . ಝೇವಿಯರ್ ಆಶಯ

ಪುತ್ತೂರು : ಜ್ಞಾನ ದೇಗುಲವೊಂದು ಬೆಳಗಲು ಹಿರಿಯ ವಿದ್ಯಾರ್ಥಿಗಳು, ಯುವಕ ಮಂಡಲ ಜೊತೆಗೆ ಇಲ್ಲಿನ ಜನತೆ ಸೇರಿಕೊಳ್ಳಬೇಕು. ಇಂಥ ವರ್ಗವೊಂದಿದ್ದರೆ ಆ ಜ್ಣಾನ ದೇಗುಲ ಬೆಳೆಯುತ್ತದೆ. ಶಿಕ್ಷಣದ ವಿಚಾರದಲ್ಲಿ ಶೈಕ್ಷಣಿಕ ಪ್ರಕ್ರಿಯೆಯೊಂದು ತ್ರಿಕೋನ ವ್ಯವಸ್ಥೆಯಾಗಿದ್ದು, ಇಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರೂ ಮುಖ್ಯವೆನಿಸಿಕೊಳ್ಳುತ್ತಾರೆ. ಪುಟಾಣಿ ಮಕ್ಕಳೂ ರಾಷ್ಟ್ರ ಬೆಳಗಬೇಕೆಂದರೆ ಅವರನ್ನು ಅತೀ ನಾಜೂಕಾಗಿ ನಿರ್ವಹಿಸಬೇಕಾಗುತ್ತದೆಯೆಂದು ನಿವೃತ್ತ ಪ್ರಾಂಶುಪಾಲ ಝೇವಿಯರ್ ಡಿಸೋಜಾ ಅಭಿಪ್ರಾಯಪಟ್ಟರು. ಸಾಮೆತ್ತಡ್ಕ ಸ.ಹಿ.ಪ್ರಾ. ಶಾಲೆ ಇದರ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿ, ಅಧ್ಯಾಪಕರು ಕೂಡ ಅಪ್ಡೇಟ್ ಆಗಿ, ಜ್ಞಾನ ಹಾಗೂ ಕೌಶಲ್ಯಗಳನ್ನೂ ವೃದ್ಧಿಸಿಕೊಳ್ಳುವುದನ್ನು ಕೂಡ ಮರೆಯಬಾರದೆಂಬ ಕಿವಿಮಾತು ಹೇಳಿ, ಹರಸಿದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಸುವರ್ಣ ಸಂಭ್ರಮವೆಂದರೆ, ಚಿನ್ನದಂತಹ ಮಕ್ಕಳನ್ನು ಉಳಿಸಿಕೊಂಡಿರುವ ಸಂಭ್ರಮ. ಮುಚ್ಚುವ ಹಂತ ಮುಟ್ಟಿದ್ದ ಶಾಲೆಗೆ 150ಕ್ಕೂ ಮೀರಿ ಮಕ್ಕಳನ್ನು ಅನುವು ಮಾಡಿಕೊಟ್ಟು ನಮ್ಮ ಶಾಲೆ ಸಾಮೆತ್ತಡ್ಕ ಚಾರಿಟೇಬಲ್ ಟ್ರಸ್ಟ್ ಇದಕ್ಕೆ ತಲೆ ತಗ್ಗಿಸಿ, ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿ, ಏನನ್ನೇ ಕಲಿಸಿದರೂ, ಮಕ್ಕಳಿಗೆ ಮೊದಲಾಗಿ ಸಂಸ್ಕಾರ, ಮಾನವೀಯತೆಯನ್ನು ತಿಳಿಸಿಕೊಡಿಯೆಂದು ಹೇಳಿದರು.

ಶಾಲಾ ಸ್ಥಾಪಕಾಧ್ಯಕ್ಷ, ನಮ್ಮ ಶಾಲೆ ಸಾಮೆತ್ತಡ್ಕ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಪ್ರಸಾದ್, ಪೊಲೀಸ್ ಇಲಾಖಾ ಉದ್ಯೋಗಿ ಹಿರಿಯ ವಿದ್ಯಾರ್ಥಿ ಪಕಿರೇಶ್, ಜಾನ್ ಪೀಟರ್ ಡಿ ಸಿಲ್ವ, ಸಾಹಿತಿ ಅಬ್ದುಲ್ ಸಮದ್ ಬಾವಾ, ಶಾಲಾ ಟ್ರಸ್ಟಿಗಳಾದ ನಳಿನಿ ಪಿ ಶೆಟ್ಟಿ ಹಾಗೂ ಮೀನಾಕ್ಷಿ, ದಿನೇಶ್ ಪ್ರಸನ್ನ , ಯುವಕ ಮಂಡಲ ಅಧ್ಯಕ್ಷ ರೋಶನ್ ರೆಬೆಲ್ಲೊ, ಶಾಲೆಯ ನಿವೃತ್ತ ಮುಖ್ಯೋಪಾದ್ಯಾಯಿನಿ ರಾಧ ಹಾಗೂ ನಿವೃತ್ತ ಶಿಕ್ಷಕಿ ಶಾರದಾ ಮತ್ತು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಸಿರಾಜ್ ವೇದಿಕೆಯಲ್ಲಿ ಉಪಸಸ್ಥಿತರಿದ್ದರು.

ಬಳಿಕ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪುಟಾಣಿಗಳಿಗೆ, ಹಿರಿಯ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಬಹುಮಾನ ವಿತರಿಸಿದರು. ಬಳಿಕ ಪುಟಾಣಿಗಳಿಂದ, ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕ ವೃಂದ ಪ್ರಾರ್ಥನೆ ನೆರವೇರಿಸಿ, ಶಾಲಾ ಮುಖ್ಯಗುರು ಮರಿಯಾ ಆಶ್ರಫ್ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು. ಸ್ಥಾಪಕಾಧ್ಯಕ್ಷ ಗೋಪಾಲ ಕೃಷ್ಣ ಭಟ್ ಶಾಲಾ ಅವರಣದಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಶಾಲಾ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು, ಶಾಲಾ ನಾಯಕಿ ವೀಣಾ ಹಾಗೂ ವಿದ್ಯಾರ್ಥಿ ವೃಂದ, ಹಳೆಯ ವಿದ್ಯಾರ್ಥಿಗಳು, ಅಕ್ಷರ ದಾಸೋಹ ಸಿಬ್ಬಂದಿಗಳು, ನಮ್ಮ ಶಾಲೆ ಸಾಮೆತ್ತಡ್ಕ ಚಾರಿಟೇಬಲ್ ಟ್ರಸ್ಟ್ ಇದರ ಪದಾಧಿಕಾರಿಗಳು ಹಾಗೂ ಸದಸ್ಯರ ಸಹಿತ ವಿದ್ಯಾಭಿಮಾನಿಗಳು, ಪೋಷಕರು ಮತ್ತು ಸ್ಥಳಿಯರು ಹಾಜರಿದ್ದರು. ಆ ಬಳಿಕ ಸವಿ ಭೋಜನ ನಡೆದು, ಸಂಜೆ ದಾನಿಗಳಿಂದ ನಿರ್ಮಾಣಗೊಂಡಿರುವಂಥಹ ನೂತನ ಶಾಲಾ ಕೊಠಡಿ ಹಾಗೂ ರಂಗ ವೇದಿಕೆ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here