ಪುತ್ತೂರು: ಮುರದಲ್ಲಿರುವ ‘ಶಿವಸದನ’ ಆಶ್ರಯಧಾಮದಲ್ಲಿ ಮಂಗಳೂರಿನ ಎಮ್ ಆರ್ ಪಿ ಎಲ್ ವತಿಯಿಂದ ರೂ. 40 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ 45 ಕಿ.ವ್ಯಾ ಸೌರವಿದ್ಯುತ್ ಉತ್ಪಾದನಾ ಘಟಕ ಮತ್ತು ಕರ್ಣಾಟಕ ಬ್ಯಾಂಕ್ ಕೊಡುಗೆಯಾಗಿ ನೀಡಿದ ಲಿಫ್ಟ್ ಇದರ ಉದ್ಘಾಟನೆಯು ಡಿ.27 ರಂದು ನಡೆಯಲಿದೆ ಎಂದು ಶ್ರೀ ಸುಬ್ರಹ್ಮಣ್ಯ ಸಭಾ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಕರುಣಾಕರ ರಾವ್ ಬೆಳ್ಲೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಮ್ಮ ನಿಮ್ಮಂತೆ ಬದುಕಿ ಬಾಳಿದ ಸಂಧ್ಯಾಕಾಲದಲ್ಲಿರುವ ಹಿರಿಯ ಜೀವಗಳಿಗೆ ಹಾಗೂ ತಮ್ಮದಲ್ಲದ ಕಾರಣಕ್ಕಾಗಿ ಸಂತ್ರಸ್ತರಾಗಿರುವ ವಿಶಿಷ್ಟಚೇತನಗಳ ನೆಮ್ಮದಿಯ ಬದುಕಿಗಾಗಿ ಯೋಜಿಸಲ್ಪಟ್ಟು ಈ ಸೇವಾ ಟ್ರಸ್ಟ್ ಕೆಲಸ ಮಾಡುತ್ತಿದೆ. ಸೇವಾ ಟ್ರಸ್ಟ್ನ ಸಾರ್ಥಕ ಸೇವಾಯೋಜನೆಗೆ ಸುಮಾರು ರೂ. 550 ಲಕ್ಷ ವೆಚ್ಚದಲ್ಲಿ ಈ ಸಾಂತ್ವನ ಕೇಂದ್ರದ ಸಂರಚನೆಯಾಗಿದೆ. ಇಲ್ಲಿ 55 ಜನ ಹಿರಿಯ ನಾಗರಿಕರಿಗೆ, 50 ಮಂದಿ ವಿಶೇಷಚೇತನರಿಗೆ ವಾಸಿಸಲು ಸುಸಜ್ಜಿತ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ 40 ಜನ ಸಿಬ್ಬಂದಿಗಳಿಗೆ ಇಲ್ಲಿ ಅವಕಾಶವಿದೆ. ಈಗಾಗಲೇ 40 ಹಿರಿಯ ನಾಗರಿಕರು ಈ ವಸತಿ ನಿಲಯದ ಫಲಾನುಭವಿಗಳಾಗಿದ್ದಾರೆ. ಮುಂದೆ ಜನವರಿಯಿಂದ ವಿಶೇಷ ಚೇತನರಿಗೂ ವ್ಯವಸ್ಥೆ ಕಲ್ಪಿಸಲಾಗುವುದು.ನಾಲ್ಕು ಅಂತಸ್ತುಗಳ 40 ಸಾವಿರ ಚದರ ಅಡಿ ವಿಸ್ತಾರದ ಈ ಕಟ್ಟಡಕ್ಕೆ ಅವಶ್ಯಕತೆಯಾದ ಲಿಫ್ಟ್ ಸೌಕರ್ಯವನ್ನು ಕರ್ಣಾಟಕ ಬ್ಯಾಂಕ್, ಮಂಗಳೂರು ಇವರು ರೂ30 ಲಕ್ಷ ದೇಣಿಗೆಯನ್ನು ನೀಡುವುದರ ಮೂಲಕ ಒದಗಿಸಿಕೊಟ್ಟಿದ್ದಾರೆ. ಮಂಗಳೂರಿನ ಎಮ್ ಆರ್ ಪಿ ಎಲ್ ವತಿಯಿಂದ ರೂ.40 ಲಕ್ಷ ರೂಪಾಯಿ ವೆಚ್ಚದಲ್ಲಿ 45 ಕಿ.ವ್ಯಾ ಸೌರವಿದ್ಯುತ್ ಉತ್ಪಾದನಾ ಘಟಕದ ನಿರ್ಮಾಣ ಪೂರ್ಣಗೊಂಡಿದ್ದು ಇವೆರಡರ ಉದ್ಘಾಟನೆ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಸುಬ್ರಹ್ಮಣ್ಯ ಸಭಾ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷೆ ಸುಮಂಗಳ ಪ್ರಭಾಕರ್, ನಿರ್ದೇಶಕ ಎಮ್ ಎಸ್ ರಘುನಾಥ ರಾವ್ ಉಪಸ್ಥಿತರಿದ್ದರು.