ಕೊಂಡಾಡಿಕೊಪ್ಪ ಸ.ಕಿ.ಪ್ರಾ. ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ

0

ಒಗ್ಗೂಡಿ ಕೆಲಸ ಮಾಡಿದರೆ ವಿದ್ಯಾಸಂಸ್ಥೆಯ ಪ್ರಗತಿ ಸಾಧ್ಯ- ಭಾಗೀರಥಿ ಮುರುಳ್ಯ

ಕಾಣಿಯೂರು: ಕೊಂಡಾಡಿಕೊಪ್ಪ ಶಾಲೆಯು ಕೊಂಡಾಟದ ಶಾಲೆಯಾಗಿದ್ದು, ಇಲ್ಲಿನ ಮುಖ್ಯಗುರುಗಳು ಊರಿನ ಎಲ್ಲಾ ವಿದ್ಯಾಭಿಮಾನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಲೆಯ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ವಿದ್ಯಾಭಿಮಾನಿಗಳು ಒಗ್ಗೂಡಿ ಕೆಲಸ ಮಾಡಿದರೆ ಶಿಕ್ಷಣ ಸಂಸ್ಥೆಗಳ ಪ್ರಗತಿ ಸಾಧ್ಯ ಎಂದು ಸುಳ್ಯ ವಿಧಾನಸಭಾ ಕ್ಷೇತದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಕೊಂಡಾಡಿಕೊಪ್ಪ ಸ.ಕಿ.ಪ್ರಾ.ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಶಿಕ್ಷಕರು ಪೋಷಕರು, ಊರವರು ಕೊಂಡಿಯಾಗಿ ಶಾಲಾಭಿವೃದ್ಧಿಗೆ ಪ್ರಯತ್ನಿಸಬೇಕು. ಶಾಲೆಯು ಇನ್ನೂ ಉತ್ತುಂಗಕ್ಕೆ ಏರಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಲಂಕಾರು ಗ್ರಾ.ಪಂ.ಅಧ್ಯಕ್ಷೆ ಸುಶೀಲ ಕೊಂಡಾಡಿ, ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಸಂಸ್ಕೃತಿ ಮತ್ತು ಸಂಪ್ರದಾಯಗಳ ಕುರಿತು ಅರಿತುಕೊಳ್ಳಬೇಕು. ಒಳ್ಳೆಯ ಚಿಂತನೆ, ಒಳ್ಳೆಯ ಸಂಸ್ಕೃತಿ ಮುಂದಿನ ಜೀವನಕ್ಕೆ ಬುನಾದಿ ಎಂದರು. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ, ಶಾಲೆ ಬೆಳಕು ಕೊಡುವ ಕೇಂದ್ರ. ಬಾಲ್ಯದಿಂದಲೇ ಮಕ್ಕಳಿಗೆ ಕನಸನ್ನು ಬಿತ್ತುವ ಕೆಲಸ ಆಗಬೇಕಾಗಿದೆ. ಮಗುವಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ಕೊಟ್ಟಾಗ ಮಾತ್ರ ಅ ಮಗುವಿನ ಕನಸು ನನಸಾಗಲು ಸಾಧ್ಯ. ಸರಕಾರಿ ಶಾಲೆಗಳಿಗೆ ಸರಕಾರ ಹಲವಾರು ಯೋಜನೆಗಳನ್ನು ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ನೀಡುತ್ತಿದ್ದು, ಸದುಪಯೋಗ ಪಡೆದುಕೊಂಡು ಸರಕಾರಿ ಶಾಲೆಯನ್ನು ಉಳಿಸಿ, ಬೆಳೆಸಿಕೊಳ್ಳಬೇಕು ಎಂದವರು ಸರಕಾರಿ ಶಾಲೆಗಳಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಅಧಿಕಾರಿಗಳಾಗಿದ್ದಾರೆ, ಸರಕಾರಿ ಕೆಲಸಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಅಲಂಕಾರು ಗ್ರಾ.ಪಂ.ಸದಸ್ಯರಾದ ಸದಾನಂದ ಆಚಾರ್ಯ, ವಾರಿಜಾ, ಶ್ವೇತ ಕುಮಾರ್, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ಅಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಅಲಂಕಾರು ಕ್ಲಸ್ಟರ್ ಸಿ.ಆರ್.ಪಿ ಪ್ರಕಾಶ್ ಬಾಕಿಲ ಶುಭಹಾರೈಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮೋಹನ ಕಮಿತ್ತಿಲು, ಉಪಾಧ್ಯಕ್ಷೆ ಲತಾ, ಶಾಲಾ ಎಸ್‌ಡಿಎಂಸಿ ಪೂರ್ವಾಧ್ಯಕ್ಷರಾದ ಶೀನಪ್ಪ ಕುಂಬಾರ, ಮೇದಪ್ಪ ಕುಂಬಾರ, ಶಾಲಾ ನಾಯಕ ಯಶಸ್ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯಗುರು ಜಯಂತ್ ವೈ ವರದಿ ವಾಚಿಸಿದರು. ಶಾಲಾ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ದಿವಾಕರ ಕುಂಬಾರ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೋದ್ ಕುಮಾರ್ ಕೊಂಡಾಡಿಕೊಪ್ಪ ವಂದಿಸಿದರು. ಕಾಣಿಯೂರು ಶಾಲಾ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಕುದ್ಮಾರು, ಕಾಣಿಯೂರು ಕ್ಲಸ್ಟರ್ ಸಿ.ಆರ್.ಪಿ ಯಶೋದ ಕಾರ್ಯಕ್ರಮ ನಿರೂಪಿಸಿದರು.


ಶಾಸಕರಿಗೆ ಮನವಿ:
ಕೊಂಡಾಡಿಕೊಪ್ಪ ಶಾಲೆಗೆ ನೂತನ ರಂಗಮಂದಿರ ನಿರ್ಮಾಣ ಮತ್ತು ಶಾಲಾ ಆವರಣಕ್ಕೆ ತಡೆಗೋಡೆ ನಿರ್ಮಾಣದ ಬೇಡಿಕೆಯ ಮನವಿಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಅಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ ಮೂಲಕ ಶಾಲಾಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಸಲ್ಲಿಸಲಾಯಿತು.


ಬಹುಮಾನ ವಿತರಣೆ:
ಬೆಳಿಗ್ಗೆ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ಮಾತನಾಡಿದ ನಿವೃತ್ತ ಪ್ರದಾನ ಅಂಚೆ ಪಾಲಕರಾದ ಸೀತಾರಾಮ ಗೌಡ ಮುಂಡಾಳರವರು, ಈ ಶಾಲೆಯ ಮುಖ್ಯಗುರು ಜಯಂತ್ ವೈ ಅವರು ತಾನು ಸೇವೆ ಸಲ್ಲಿಸಿದ ಎಲ್ಲಾ ಶಾಲೆಗಳಲ್ಲಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರ ಮನ ಗೆದ್ದಿದ್ದಾರೆ. ಇಂತಹ ಶಿಕ್ಷಕರಿಂದಲೇ ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಳವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲಂಕಾರು ದುಗಾಂಬಾ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ದಯಾನಂದ ರೈ ಮನವಳಿಕೆ ವಹಿಸಿದ್ದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ವಿಮಲ್ ಕುಮಾರ್ ನೆಲ್ಯಾಡಿ ಮಾತನಾಡಿ, ಈ ಶಾಲೆಯ ಮುಖ್ಯಗುರು ಜಯಂತ್ ವೈ ಅವರು ಕೊಂಡಾಡಿಕೊಪ್ಪ ಶಾಲೆಗೆ ಮಾತ್ರ ಸೀಮಿತ ಅಲ್ಲ. ಜಿಲ್ಲಾ ಪ್ರಶಸ್ತಿ ಪುರಸ್ಕೃತರಾಗಿರುವ ಅವರು ರಾಜ್ಯ ಮಟ್ಟದದಲ್ಲಿ ಗುರುತಿಸಲ್ಪಡುವ ಸಂಪನ್ಮೂಲ ವ್ಯಕ್ತಿ ಎಂದು ಹೇಳಿದರು. ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪೂರ್ವಾಧ್ಯಕ್ಷ ದಾಮೋದರ ಗೌಡ ಕಕ್ವೆ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಉಮೇಶ್ ದೇವಾಡಿಗ, ಶಾಲಾ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ದಿವಾಕರ ಕುಂಬಾರ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೋದ್ ಕುಮಾರ್ ಕೊಂಡಾಡಿಕೊಪ್ಪ, ಶಾಲಾ ನಾಯಕ ಯಶಸ್ ಉಪಸ್ಥಿತರಿದ್ದರು. ಅಲಂಕಾರು ಗ್ರಾ.ಪಂ.ಉಪಾಧ್ಯಕ್ಷ ರವಿ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯಗುರು ಜಯಂತ್ ವೈ ಸ್ವಾಗತಿಸಿ, ಎಸ್‌ಡಿಎಂಸಿ ಅಧ್ಯಕ್ಷ ಮೋಹನ್ ಕಮಿತ್ತಿಲು ವಂದಿಸಿದರು. ಶಾಲಾ ಶಿಕ್ಷಕಿ ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಹರೀಶ ಗೌಡ ಏಂತಡ್ಕ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಹಶಿಕ್ಷಕಿ ಸುನೀತಾ ಸಹಕರಿಸಿದರು.

ಕೊಂಡಾಡಿಕೊಪ್ಪ ಸ.ಕಿ.ಪ್ರಾ.ಶಾಲಾ ಮುಖ್ಯಗುರು ಜಯಂತ್ ವೈ ಶಾಲಾ ವರದಿ ವಾಚಿಸಿ, ಕೊಂಡಾಡಿಕೊಪ್ಪ ಶಾಲೆ ಪ್ರಾರಂಭವಾಗಿ ೨೩ ವರ್ಷ ಆದ ಬಳಿಕ ಪ್ರಪ್ರಥಮ ಬಾರಿಗೆ ಶಾಲೆಯ ವಾರ್ಷಿಕೋತ್ಸವ ನಡೆದಿದೆ. ಶಾಲೆಯು ಕೆಲವೇ ವರ್ಷಗಳಲ್ಲಿ ಬೆಳ್ಳಿಹಬ್ಬವನ್ನು ಆಚರಿಸಲಿದೆ. ಶಾಲೆಗೆ ನೂತನ ರಂಗಮಂದಿರ ನಿರ್ಮಾಣ, ಶಾಲಾ ಆವರಣಕ್ಕೆ ತಡೆಗೋಡೆ ನಿರ್ಮಾಣದ ಅಗತ್ಯವಿದೆ ಎಂದರು.

LEAVE A REPLY

Please enter your comment!
Please enter your name here