ಕಾವು ಸರಕಾರಿ ಮಾದರಿ ಉನ್ನತೀಕರಿಸಿದ ಹಿ.ಪ್ರಾ.ಶಾಲಾ ವಾರ್ಷಿಕೋತ್ಸವ

0

ಕಾವುನಲ್ಲಿ ಪ್ರೌಢ ಶಾಲೆ ಆಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ: ಕಾವು ಹೇಮನಾಥ ಶೆಟ್ಟಿ

ಪುತ್ತೂರು: ಜಿಲ್ಲೆಯಲ್ಲೇ ಸುಮಾರು 110 ವರ್ಷಗಳ ಇತಿಹಾಸದ ಸ್ಥಾನಮಾನ ಇರುವ ನಮ್ಮ ಕಾವು ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಜಿಲ್ಲೆಗೆ ಒಂದು ಮಾದರಿ ಶಾಲೆಯಾಗಿ ರೂಪುಗೊಂಡಿದೆ. ಸುಮಾರು 400 ಕ್ಕೂ ಅಧಿಕ ವಿದ್ಯಾರ್ಥಿಗಳ ಸಂಖ್ಯೆ ಇರುವ ತಾಲೂಕಿನಲ್ಲಿಯೇ 2ನೇ ಗರಿಷ್ಠ ವಿದ್ಯಾರ್ಥಿಗಳ ದಾಖಲಾತಿ ಇರುವ ಶಾಲೆ ಎಂಬ ಹೆಗ್ಗಳಿಕೆ ಇದೆ. ನಮ್ಮ ಮುಂದಿನ ಬೇಡಿಕೆಯಾಗಿ ಇಲ್ಲಿ ಪ್ರೌಢ ಶಾಲಾ ವಿಭಾಗ ಆರಂಭವಾಗಬೇಕು, ಈ ಬಗ್ಗೆ ಪ್ರಯತ್ನ ಮಾಡುತ್ತಲೇ ಬಂದಿದ್ದೇವೆ ಎಂದು ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕರು, ಕಾವು ಶಾಲೆಯನ್ನು ದತ್ತು ಸ್ವೀಕರಿಸಿದ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಅವರು ದ.28ರಂದು ಕಾವು ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಧ್ವಜಾರೋಹಣ ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾವು ಶಾಲೆ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಹೊಂದಿದ್ದು, ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಬೆಳೆದು ಬಂದಿದೆ ಎಂದ ಅವರು, ನಾನು ಈ ಶಾಲೆಯನ್ನು ದತ್ತು ಸ್ವೀಕರಿಸಿದ ಬಳಿಕ ಬಡವರ ಮಕ್ಕಳು ಕೂಡ ಆಂಗ್ಲ ಮಾಧ್ಯಮ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಶಾಲೆಯಲ್ಲಿ ಎಲ್‌ಕೆಜಿ, ಯು.ಕೆ.ಜಿ ತರಗತಿಗಳನ್ನು ಆರಂಭ ಮಾಡಿದೆ. ಪ್ರಥಮ ವರ್ಷದಲ್ಲೇ ಸುಮಾರು 86 ವಿದ್ಯಾರ್ಥಿಗಳು ಸೇರ್ಪಡೆಗೊಂಡರು. ಪ್ರಸಕ್ತ ವರ್ಷದಲ್ಲೂ ಸುಮಾರು 69 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 12 ಮಂದಿಯ ಶಿಕ್ಷಕ ವೃಂದ ಇದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಕ್ರೀಡೆ, ಕಲಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ಉತ್ತಮ ಶಿಕ್ಷಣವನ್ನು ಇಲ್ಲಿಯ ಶಿಕ್ಷಕರು ನೀಡುತ್ತಿದ್ದಾರೆ ಎಂದು ಕಾವು ಹೇಮನಾಥ ಶೆಟ್ಟಿ ಹೇಳಿದರು. ಶಾಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕು ಎಂಬ ಕನಸು ಇದ್ದು ಅದರೊಂದಿಗೆ ಪ್ರೌಢ ಶಾಲಾ ವಿಭಾಗ ಆಗಬೇಕು ಎಂಬುದು ನಮ್ಮ ದೊಡ್ಡ ಕನಸು ಆಗಿದೆ. ಈ ಬಗ್ಗೆ ಶಾಸಕರೊಂದಿಗೆ ಮಾತುಕತೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಪ್ರೌಢ ಶಾಲಾ ವಿಭಾಗ ಆರಂಭವಾಗುತ್ತದೆ ಎಂಬ ಭರವಸೆ ನಮಗಿದೆ. ಇದಕ್ಕೆ ಸರ್ವರ ಸಹಕಾರ ಅಗತ್ಯ ಎಂದರು.

ಶ್ರೀಮಂತಿಕೆ ನಮ್ಮಲ್ಲಿದ್ದರೆ ಸಾಲದು ಅದು ಸಮಾಜಕ್ಕೂ ಉಪಯೋಗವಾಗಬೇಕು
ಕಾವು ಶಾಲೆಯು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಕಾಣಬೇಕಾದರೆ ಅದಕ್ಕೆ ಮಕ್ಕಳ ಪೋಷಕರ, ಶಿಕ್ಷಣ ಪ್ರೇಮಿಗಳ, ದಾನಿಗಳ, ವಿವಿಧ ಸಂಘ ಸಂಸ್ಥೆಗಳ ಹಾಗೂ ಶಿಕ್ಷಕ ವೃಂದದವರ ಸಹಕಾರದಿಂದ ಸಾಧ್ಯವಾಗಿದೆ ಎಂದ ಕಾವು ಹೇಮನಾಥ ಶೆಟ್ಟಿಯವರು, ಶ್ರೀಮಂತಿಕೆ ನಮ್ಮಲ್ಲಿದ್ದರೆ ಸಾಲದು ಅದು ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲೂ ಇರಬೇಕು ಎಂದರು.ಕಾವಿನ ಸರಸ್ವತಿ ಅಮ್ಮನವರ ನೆನಪಲ್ಲಿ ಅವರ ಸಹೋದರಿ ಸಹೋದರರು ನಮಗೆ ಬೆಳಗ್ಗಿನ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಿದ್ದಾರೆ. ಇದೇ ರೀತಿ ಹಲವು ಮಂದಿ ಸಹಕಾರ ನೀಡಿದ್ದಾರೆ. ಇದೆಲ್ಲಾ ಅವರ ಹೃದಯಶ್ರೀಮಂತಿಕೆ ಆಗಿದೆ ಎಂದು ಹೇಳಿ ಶುಭ ಹಾರೈಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಪುತ್ತೂರು ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ, ಅರಿಯಡ್ಕ ಗ್ರಾಪಂ ಸದಸ್ಯ ಕಾವು ದಿವ್ಯನಾಥ ಶೆಟ್ಟಿಯವರು ಮಾತನಾಡಿ, ಕಾವು ಸರಕಾರಿ ಶಾಲೆಯು ಜಿಲ್ಲೆಯಲ್ಲೇ ಒಂದು ಮಾದರಿ ಶಾಲೆಯಾಗಿ ರೂಪುಗೊಂಡಿದ್ದು ಖಾಸಗಿ ಶಾಲೆಗಿಂತ ಯಾವ ವಿಧದಲ್ಲೂ ಕಡಿಮೆ ಇಲ್ಲದಂತೆ ಇಲ್ಲಿ ಎಲ್ಲಾ ವ್ಯವಸ್ಥೆ ಇದೆ. ಇಲ್ಲಿನ ಶಿಕ್ಷಕ ವೃಂದದವರು ಉತ್ತಮ ರೀತಿಯಲ್ಲಿ ಶಿಕ್ಷಣವನ್ನು ನೀಡುವ ಜೊತೆಯಲ್ಲಿ ಮಕ್ಕಳ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಶಾಲೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭ ಹಾರೈಸಿದರು. ಧ್ವಜಾರೋಹಣ ನೆರವೇರಿಸಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಯತೀಶ್ ಪೂಜಾರಿಯವರು ಎಲ್ಲರ ಸಹಕಾರ ಕೋರಿ ಶುಭ ಹಾರೈಸಿದರು. ಅರಿಯಡ್ಕ ಗ್ರಾಪಂ ಉಪಾಧ್ಯಕ್ಷೆ ಜಯಂತಿ, ಸದಸ್ಯ ಅಬ್ದುಲ್ ರಹಿಮಾನ್ ಬಿ.ಕೆರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಅರಿಯಡ್ಕ ಗ್ರಾಪಂ ಸದಸ್ಯ ಜಯಂತಿ ಪಟ್ಟುಮೂಲೆ, ಕಾವು ಕ್ಲಸ್ಟರ್ ಮುಖ್ಯಸ್ಥ ಕೆ.ವಿ.ಎಲ್.ಎನ್.ಪ್ರಸಾದ್, ಪುತ್ತೂರು ಕಾವು ಲಯನ್ಸ್ ಕ್ಲಬ್ ಕಾರ್ಯದರ್ಶಿ ದೇವಣ್ಣ ರೈ ಮುದರ್ಪಳ್ಳ, ಪುತ್ತೂರು ಕಾವು ಲಯನ್ಸ್ ಕ್ಲಬ್ ಕೋಶಾಧಿಕಾರಿ ಕೆ.ಕೆ.ಇಬ್ರಾಹಿಂ, ಕಾವು ಆಳ್ವಾಸ್ ಕಾಂಪ್ಲೆಕ್ಸ್ ಮಾಲಕ ವಿಠಲ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ಶಾಲಾ ಪ್ರಭಾರ ಮುಖ್ಯಗುರು ಸವಿತಾ ಕುಮಾರಿ ಸ್ವಾಗತಿಸಿದರು. ಶಿಕ್ಷಕ ಸಂತೋಷ್ ಎಂ.ಎಸ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಕುಂಜತ್ತಾಯ, ಎಸ್‌ಡಿಎಂಸಿ ಉಪಾಧ್ಯಕ್ಷೆ ಗೀತಾ ಮಾಣಿಯಡ್ಕ,ಸದಸ್ಯರುಗಳಾದ ಚಿದಾನಂದ ಆಚಾರ್ಯ, ಹೇಮನಾಥ ಕೆರೆಮಾರು, ತಿಮ್ಮಯ್ಯ ಉಜ್ರುಗುಳಿ, ಯೂಸುಫ್ ಕಮಲಡ್ಕ, ಸುಮಿತ್ರಾ ಸಸ್ಪೇಟಿ, ಗಂಗಾಧರ ತೋಟದಮೂಲೆ, ಮುಹಮ್ಮದ್, ಸುಮಯ್ಯ ಕಾವು, ಶಾಲಿನಿ ಮದ್ಲ, ಗೀತಾ ಉಜ್ರುಗುಳಿ, ಶಿಕ್ಷಕರಾದ ಭಾಸ್ಕರ್ ಎನ್, ವಸಂತಿ ಕೆ, ಪ್ರಮೀಳಾ, ಪ್ರತಿಮಾ ಎಚ್, ಶಮೀಮ, ಮಲ್ಲಿಕಾ, ಅನಿತಾ ಡಿ’ಸೋಜಾ, ದೀಪಿಕಾ, ವನಿತಾ, ವಂದಿತಾ, ಅರ್ಚನಾ, ಎಲ್‌ಕೆಜಿ ಸಹಾಯಕಿ ಶಾಲಿನಿ, ಶಾಲಾ ನಾಯಕ ಮಹಮ್ಮದ್ ಮುಬಶೀರ್ ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳ ಪೋಷಕರು, ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here