ನೆಲ್ಯಾಡಿ: ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ’ ನಿಮ್ಮ ಸಂಕಲ್ಪ ವಿಕಸಿತ ಭಾರತ’ಯಾತ್ರೆ ಡಿ.23ರಂದು ಮಧ್ಯಾಹ್ನ ಗೋಳಿತ್ತೊಟ್ಟು ಗ್ರಾ.ಪಂ.ಗೆ ಆಗಮಿಸಿತು.
ನೆಲ್ಯಾಡಿ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಅಲೋಕ್ ಮೌರ್ಯ ಅವರು ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕ ಜನರಿಗೆ ಸಿಗುವ ಕೇಂದ್ರ ಸರಕಾರದ ವಿವಿಧ ಸಾಲ ಯೋಜನೆಗಳ ಮಾಹಿತಿ ನೀಡಿ, ಜನರು ಇದರ ಸದುಪಯೋಗ ಪಡೆದುಕೊಂಡು ಸ್ವಾವಲಂಭಿಗಳಾಗಿ ಜೀವನ ಸಾಗಿಸುವಂತಾಗಬೇಕೆಂದು ಹೇಳಿದರು. ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ ಆಲಂತಾಯ ಅವರು ವಿಕಸಿತ ಭಾರತ ಸಂಕಲ್ಪ ಯಾತ್ರೆಯ 2023-24ರ ಪ್ರತಿಜ್ಞಾ ವಿಧಿ ಬೋಧಿಸಿದರು. ಗ್ರಾ.ಪಂ.ಕಾರ್ಯದರ್ಶಿ ಚಂದ್ರಾವತಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ.ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ ಸ್ವಾಗತಿಸಿದರು. ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ.ಅವರು ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಗ್ರಾ.ಪಂ.ಸದಸ್ಯರು, ಅಂಗನವಾಡಿ ಮೇಲ್ವಿಚಾರಕಿ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಗ್ಯಾಸ್ ಏಜೆನ್ಸಿಯವರಿಂದ ಇ ಕೆವೈಸಿ ನೋಂದಾವಣೆಯೂ ಈ ಸಂದರ್ಭದಲ್ಲಿ ನಡೆಯಿತು.
ಮೂವರಿಗೆ ಗೌರವಾರ್ಪಣೆ:
ಕೇಂದ್ರ ಸರಕಾರದ ಮುದ್ರಾ ಯೋಜನೆಯಡಿ ಸಾಲ ಪಡೆದು ಸ್ವ ಉದ್ಯೋಗ ಆರಂಭಿಸಿರುವ ಹರಿಣಾಕ್ಷಿ ಪ್ರಸಾದ್ ಕೆ.ಪಿ., ಪ್ರಗತಿಪರ ಕೃಷಿಕ ರವೀಶ್ ಬಿ.ಜಿ.,ಹಾಗೂ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.ಶಾಲೆಯ 7ನೇ ತರಗತಿ ವಿದ್ಯಾರ್ಥಿ ಜಯೇಶ್ ಶಿವಾರು ಅವರಿಗೆ ಯೂನಿಯನ್ ಬ್ಯಾಂಕ್ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. 10 ಮಂದಿಗೆ ಉಜ್ವಲ್ ಗ್ಯಾಸ್ ಯೋಜನೆಯಡಿ ಸಿಲಿಂಡರ್ ವಿತರಿಸಲಾಯಿತು.