ಪಾಳುಬಾವಿಗೆ ಎಂಡೋ ಸುರಿದ ಪ್ರಕರಣಕ್ಕೆ ಮರುಜೀವ- ಮಿಂಚಿಪದವು: ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ತಂಡ ಭೇಟಿ

0

ಮಣ್ಣು ಮತ್ತು ನೀರಿನ ಸ್ಯಾಂಪಲ್ ಸಂಗ್ರಹ

ಪುತ್ತೂರು: ಕೇರಳ ಕರ್ನಾಟಕ ಗಡಿ ಪ್ರದೇಶವಾದ ಮಿಂಚಿಪದವಿನ ಪಾಳು ಬಾವಿಯಲ್ಲಿ ಕೇರಳ ಪ್ಲಾಂಟೇಶನ್ ಕಾರ್ಪೊರೇಶನ್ ಗೋದಾಮಿನಲ್ಲಿ ಉಳಿದ ಎಂಡೋಸಲ್ಪಾನ್ ಹೂತಿರುವ ವಿಚಾರದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ಪೀಠದ ನೋಟೀಸ್ ಜಾರಿಗೊಳಿಸಿದ ಹಿನ್ನಲೆಯಲ್ಲಿ ಕರ್ನಾಟಕ ಹಾಗೂ ಕೇರಳ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಽಕಾರಿಗಳು ಡಿ.28ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ:
ಅಧಿಕಾರಿಗಳು ಪ್ರಥಮವಾಗಿ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈಯವರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಮಿಂಚಿಪದವುಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಕೇರಳ ಪ್ಲಾಂಟೇಶನ್ ಕಾರ್ಪೊರೇಶನ್ ಕಛೇರಿಗೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಗೋದಾಮಿ ನಲ್ಲಿದ್ದ ಎಂಡೋಸಲ್ಪಾನ್ ಡಬ್ಬಗಳಿಂದ ಮಾದರಿ ಸಂಗ್ರಹ, ಪಕ್ಕದ ಬಾವಿಯಿಂದ ನೀರಿನ ಸ್ಯಾಂಪಲ್ ಪಡೆದುಕೊಂಡಿದ್ದಾರೆ.
ಎಂಡೋ ಸಲ್ಪಾನ್ ಹಾಕಲಾಗಿದೆ ಎನ್ನುವ ಬಾವಿಯ ಪರಿಶೀಲನೆ ನಡೆಸಿ, ಮೇಲ್ಪದರದ ಒಂದು ಅಡಿ ಆಳದಿಂದ ಮಣ್ಣನ್ನು ಸಂಗ್ರಹಿಸಿದರು. ಅಲ್ಲಿಯೇ ಸಮೀಪ ಇರುವ ಕೆರೆಗಳ ನೀರನ್ನು ಪರೀಕ್ಷಾರ್ಥವಾಗಿ ಸಂಗ್ರಹಿಸಿಕೊಂಡರು. ಮಿಂಚಿಪದವು ಸಮೀಪದಲ್ಲಿರುವ ಕೇರಳದ ಭಾಗದ ಆರೋಗ್ಯ ಕೇಂದ್ರಕ್ಕೆ ಭೇಟಿ ಮಾಡಿ ಅಧಿಕಾರಿಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿಕೊಂಡಿದ್ದಾರೆ. ಗ್ರಾಮದ ಕೆಲವು ಪ್ರಮುಖರು ತಮ್ಮಲ್ಲಿರುವ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿದರು.


ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಪ್ರಾದೇಶಿಕ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಬಾಬು, ಪ್ರಯೋಗಾಲಯ ಸಹಾಯಕ ನಿಖಿಲ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಡಾ. ರವಿ ಡಿ. ಆರ್, ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಅಧಿಕ್ಷಕ ಆದರ್ಶ ಟಿ.ವಿ ತಂಡದಲ್ಲಿದ್ದರು.
ನೆ.ಮುಡ್ನೂರು ಗ್ರಾ.ಪಂ ಸದಸ್ಯ ಶ್ರೀರಾಮ್ ಪಕ್ಕಳ, ಮಾಜಿ ಅಧ್ಯಕ್ಷ ಕುಮಾರ್‌ನಾಥ ರೈ, ಮಾಜಿ ಸದಸ್ಯ ಅಬ್ದುಲ್ ಖಾದರ್, ಅಶ್ರಫ್, ರಾಮಚಂದ್ರ ಮತ್ತಿತರ ಹಲವು ಮಂದಿ ಗ್ರಾಮಸ್ಥರು ಈ ಸಂದರ್ಭ ಉಪಸ್ಥಿತರಿದ್ದರು.

ಮೇಲ್ಮೈ ಮಣ್ಣು ಸಂಗ್ರಹಕ್ಕೆ ಆಕ್ಷೇಪ
ಅಧಿಕಾರಿಗಳ ಉಪಸ್ಥಿತಿಯಲ್ಲಿ ಹೂತು ಹಾಕಿದ ಎಂಡೋ ಬಾವಿಯ ಮೇಲ್ಮೈಯ ಮಣ್ಣನ್ನು ಪರೀಕ್ಷೆಗೆಂದು ಸಂಗ್ರಹಿಸುತ್ತಿದ್ದ ವೇಳೆಯಲ್ಲಿ ಅಲ್ಲಿದ್ದ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ಪರೀಕ್ಷೆಗೆ ಮೇಲ್ಮೈ ಮಣ್ಣನ್ನು ತೆಗೆಯದೆ ಸುಮಾರು 60 ಅಡಿ ಬಾವಿಯ ಮಣ್ಣನ್ನು ತೆಗೆಯಬೇಕೆಂದು ಆಗ್ರಹಿಸಿದರು. ಆದರೆ ಅಧಿಕಾರಿಗಳು ಇದಕ್ಕೊಪ್ಪದೆ ಮೇಲ್ಮೈ ಮಣ್ಣನ್ನು ಸಂಗ್ರಹಿಸಿ ಪ್ಲಾಸ್ಟಿಕ್ ಡಬ್ಬಕ್ಕೆ ಹಾಕಿದರು. ಯಂತ್ರದ ಮೂಲಕ ಮಣ್ಣನ್ನು ತೆಗೆದು ನಂತರ ಮಣ್ಣನ್ನು ಪರೀಕ್ಷೆಗೆ ಒಳಪಡಿಸುವಂತೆ ಅಲ್ಲಿದ್ದ ಸಾರ್ವಜನಿಕರು ಒತ್ತಾಯಿಸಿದರು. ಈ ವೇಳೆ ತುಸು ವಾಕ್ಸಮರವೂ ನಡೆಯಿತು.

ಎಂಡೋಸಲಾನ್ ಪೀಡಿತರ ಸಂಖ್ಯೆ ಮತ್ತು ವಿವರಗಳನ್ನು ಅಧಿಕಾರಿಗಳು ನಮ್ಮಿಂದ ಪಡೆದುಕೊಂಡಿದ್ದಾರೆ. ಮಿಂಚಿಪದವು ಪ್ರಕರಣ ಕೇರಳ ರಾಜ್ಯಕ್ಕೆ ಒಳಪಡುವುದರಿಂದ ಅದರ ಬಗ್ಗೆ ನಮ್ಮಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಂಡಿಲ್ಲ.
-ಡಾ.ನಿಖಿಲ್ ಕೆಮ್ಮಿಂಜೆ, ವೈದ್ಯಾಧಿಕಾರಿ ಪ್ರಾ.ಆ.ಕೇಂದ್ರ ಈಶ್ವರಮಂಗಲ

ಡಾ|ರವೀಂದ್ರ ಶ್ಯಾನುಭಾಗ್ ದೂರು
ರಾಷ್ಟ್ರೀಯ ಹಸಿರು ಪೀಠದಿಂದ ನೋಟೀಸ್

ಕೇರಳ ರಾಜ್ಯದ ಗಡಿ ಪ್ರದೇಶವಾದ ಮಿಂಚಿಪದವು ಗುಡ್ಡ ಪ್ರದೇಶದಲ್ಲಿ ಹೂಳಲಾಗಿದೆಯೆನ್ನಲಾದ ಎಂಡೋಸಲ್ಫಾನ್ ಸಮಸ್ಯೆಗಳನ್ನು ಅಧ್ಯಯನ ನಡೆಸಿದ್ದ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ|ರವೀಂದ್ರ ಶ್ಯಾನುಭಾಗ್ ಅವರು ಈ ಬಗ್ಗೆ ರಾಷ್ಟ್ರೀಯ ಹಸಿರು ಪೀಠಕ್ಕೆ ದೂರು ನೀಡಿದ್ದರು.ಈ ದೂರಿನಂತೆ, ಎಂಡೋಸಲ್ಫಾನ್ ತೆರವಿಗೆ ಕೈಗೊಂಡ ಕ್ರಮಗಳ ಬಗ್ಗೆ 4 ವಾರಗಳಲ್ಲಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದ ರಾಷ್ಟ್ರೀಯ ಹಸಿರು ಪೀಠ ಈ ಕುರಿತು ಕರ್ನಾಟಕ ಮತ್ತು ಕೇರಳ ಸರ್ಕಾರ ಮತ್ತು ಪರಿಸರ ಇಲಾಖೆಗಳಿಗೆ ನೋಟೀಸ್ ಜಾರಿ ಮಾಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here