ಪುತ್ತೂರು : ಕೆ ಎಸ್ ಆರ್ ಟಿ ಸಿ ಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಬಸ್ಸು ಚಾಲಕರಿಗೆ ಕೆಲಸ ನಿಲ್ಲಿಸುವಂತೆ ಅವರನ್ನು ನೇಮಕ ಮಾಡಿದ ಸಂಸ್ಥೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅತಂತ್ರವಾಗಿರುವ ಬಸ್ ಚಾಲಕರು ತಮ್ಮ ಉದ್ಯೋಗ ಭದ್ರತೆಗಾಗಿ ಸ್ಪಷ್ಟ ಆದೇಶ ನೀಡಬೇಕೆಂದು ಆಗ್ರಹಿಸಿ ಕೆಲಸ ನಿಲ್ಲಿಸಿದ್ದು, ತಾಲೂಕಿನ ಗ್ರಾಮೀಣ ಬಸ್ ರೂಟ್ ಗಳು ಸ್ಥಗಿತಗೊಂಡು ಜನರು ಸಂಕಷ್ಟಕ್ಕೆ ಒಳಗಾಗುವ ಸಂದರ್ಭ ಬಂದಿದೆ.
ಗ್ರಾಮೀಣ ಭಾಗದಲ್ಲಿ ಓಡಾಡುವ ಬಸ್ ರೂಟ್ ಗಳಿಗೆ ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ನೇಮಕ ಮಾಡಲಾಗಿದೆ. ಈ ನೇಮಕದ ಅವಧಿ ಎರಡು ವರ್ಷ ಇರುತ್ತದೆ. ಈ ನೇಮಕಾತಿಯ ಜವಾಬ್ದಾರಿಯನ್ನು ಮೈಸೂರಿನ ಪನ್ನಗ ಎಂಬ ಸಂಸ್ಥೆಗೆ ನೀಡಲಾಗಿತ್ತು.
ದ. 30 ರಂದು ರಾತ್ರಿ ಅವರಿಗೆಲ್ಲ ಪನ್ನಗ ಸಂಸ್ಥೆ ಮೆಸೇಜ್ ಮಾಡಿ ಜನವರಿ ಒಂದರಿಂದ ಕೆಲಸ ನಿಲ್ಲಿಸುವಂತೆ ತಿಳಿಸಿತು. ಈ ಚಾಲಕರಲ್ಲಿ ನಾಲ್ಕು ತಿಂಗಳು, ಆರು ತಿಂಗಳು ಮಾತ್ರ ಆದ ಚಾಲಕರೂ ಇದ್ದಾರೆ. ಇದು ಚಾಲಕರಲ್ಲಿ ಅತಂತ್ರ ಭಾವನೆ ಮೂಡಿಸಿದೆ.