ಕಾಣಿಯೂರು: ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಬೀರೋಳಿಕೆ ಎಂಬಲ್ಲಿ ವ್ಯಕ್ತಿಯೋರ್ವರಿಗೆ ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಂಧಿತ ವ್ಯಕ್ತಿಯನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶಿಸಿದೆ.
ಬೀರೊಳಿಕೆ ನಿವಾಸಿ ಮನೋಹರ ಎಂಬವರು ಈ ಕುರಿತು ದೂರು ನೀಡಿದ್ದರು. ಡಿ. 17ರಂದು ತಾನು ಮನೆಯಲ್ಲಿರುವಾಗ ಮನೆಯಂಗಳಕ್ಕೆ ಬಂದ ಗಣೇಶ್ ಉದನಡ್ಕ, ರಾಧಾಕೃಷ್ಣ ಮುದ್ವ, ಅಖೀಲ್ ಬೊಮ್ಮೊಳಿಕೆ, ಉಮೇಶ್ ಬೀರೋಳಿಕೆ, ಯಶೋಧರ ಬೀರೊಳಿಕೆ ಹಾಗೂ ಇತರರು ಸೇರಿ ಅವಾಚ್ಯ ಪದಗಳಿಂದ ಬೈದು, ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಕಡಬ ಪೋಲೀಸರು ಆರೋಪಿ ಅಖೀಲ್ ಬೊಮ್ಮೊಳಿಕೆ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಅಖೀಲ್ಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇತರ ಆರೋಪಿಗಳು ತಲೆಮರೆಸಿಕೊಂಡಿದ್ದರು. ಈ ಪೈಕಿ ಐದು ದಿನಗಳ ಹಿಂದೆ ಗಣೇಶ್ ಉದನಡ್ಕ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ದೊರೆತಿದೆ. ಇದೀಗ ಆರೋಪಿ ಅಖಿಲ್ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರವಾಗಿ ನ್ಯಾಯವಾದಿ ಮಹೇಶ್ ಕಜೆ ಅವರು ವಾದ ಮಾಡಿದ್ದರು.