ಪ್ರೀತಿ,ಕ್ಷಮಾಗುಣ,ಶಾಂತಿ,ಸಹಬಾಳ್ವೆಯ ಜೀವನ ನಮ್ಮದಾಗಲಿ-ವಂ|ರೂಪೇಶ್ ತಾವ್ರೋ
ಪುತ್ತೂರು; ಪ್ರಭು ಯೇಸುಕ್ರಿಸ್ತರು ಬಡವರಲ್ಲಿ ಬಡವರಾಗಿ, ಕನಿಷ್ಟರಲ್ಲಿ ಕನಿಷ್ಟರಾಗಿ ಧರೆಯಲ್ಲಿ ಬದುಕಿದವರು. ಯೇಸುಕ್ರಿಸ್ತರು ಪ್ರೀತಿಯ, ಕ್ಷಮಾಗುಣದ, ಶಾಂತಿಯ, ಸಹಬಾಳ್ವೆಯ, ಪರಸ್ಪರ ಹಂಚಿಕೊಳ್ಳುವ ಆದರ್ಶವನ್ನು ತೋರಿಸಿಕೊಟ್ಟವರು ಆದ್ದರಿಂದ ನಾವು ಯೇಸುಕ್ರಿಸ್ತರ ಆದರ್ಶಗಳ ಚಿಂತನೆ ಹಾಗೂ ಮನೋಭಾವನೆಯ ಜೀವನವನ್ನು ಅಳವಡಿಸಿಕೊಳ್ಳೋಣ ಎಂದು ಸಂತ ಫಿಲೋಮಿನಾ ಕಾಲೇಜಿನ ವಸತಿನಿಲಯದ ವಾರ್ಡನ್ ವಂ|ರೂಪೇಶ್ ತಾವ್ರೋ ಹೇಳಿದರು.
ಜ.2 ರಂದು ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಆಶ್ರಯದಲ್ಲಿ, ಕ್ಲಬ್ ಸದಸ್ಯರಾದ ವಿಜಯ್ ಡಿ’ಸೋಜ ಹಾಗೂ ದೀಪಕ್ ಮಿನೇಜಸ್ ರವರ ಪ್ರಾಯೋಜಕತ್ವದಲ್ಲಿ ವಿಜಯ್ ಡಿ’ಸೋಜರವರ ನಿವಾಸವಾದ ಮುರ ಇಲ್ಲಿ ನಡೆದ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಬ್ಬಾಚರಣೆ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕ್ರಿಸ್ಮಸ್ ಬಗ್ಗೆ ಸಂದೇಶ ನುಡಿದರು.
ಆರೋಗ್ಯಪೂರ್ಣ ಸಮಾಜಕ್ಕೆ ನಮ್ಮಲ್ಲಿ ಸೇವಾ ಮನೋಭಾವನೆ, ಜಾಗತಿಕ ಶಾಂತಿ ನಿರ್ಮಾಣಗೊಳ್ಳಬೇಕು-ಪುರಂದರ ರೈ:
ರೋಟರಿ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಮಾತನಾಡಿ, ಮನುಷ್ಯ ನೀರಿನಲ್ಲಿ ಈಜಾಡಬಲ್ಲ, ಆಕಾಶದಲ್ಲಿ ಹಾರಾಡಬಲ್ಲ ಹೀಗೆ ಜಗತ್ತು ವೇಗವಾಗಿ ಬೆಳೆಯುತ್ತಿದೆ. ಆರೋಗ್ಯಪೂರ್ಣ ಸಮಾಜ ಬೆಳೆಯಬೇಕಾದರೆ ನಮ್ಮಲ್ಲಿ ಸೇವಾ ಮನೋಭಾವನೆ ಬೆಳೆಯಬೇಕು, ಜಾಗತಿಕ ಶಾಂತಿ ನಿರ್ಮಾಣಗೊಳ್ಳಬೇಕು. ರೋಟರಿ ಸದಸ್ಯರು ತಾವು ಗಳಿಸಿದ ಆದಾಯದಲ್ಲಿ ಒಂದಂಶವನ್ನು ಸಮಾಜದ ಏಳಿಗೆಗೆ ವಿನಿಯೋಗಿಸುವುದು ದೇವರ ಕೆಲಸ ಎಂದರು.
ಕ್ಲಬ್ ಜಿ.ಎಸ್.ಆರ್ ಚಿದಾನಂದ ಬೈಲಾಡಿ, ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಸೂರ್ಯನಾಥ ಆಳ್ವ, ರೋಟರಿ ಮೈಸೂರು ಜಿಲ್ಲೆಯ ಆನಂದ್, ರಾಬರ್ಟ್, ಕ್ಲಬ್ ನಿಯೋಜಿತ ಅಧ್ಯಕ್ಷ ಸುರೇಶ್ ಪಿ, ನಿಕಟಪೂರ್ವ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ, ಮಾಜಿ ಅಧ್ಯಕ್ಷ ಮಹಾಬಲ ಗೌಡ, ಕಾರ್ಯದರ್ಶಿ ಯಶವಂತ ಗೌಡ ಕಾಂತಿಲ, ಸದಸ್ಯ ಸುಭಾಶ್ ರೈ ಬೆಳ್ಳಿಪ್ಪಾಡಿ, ರೋಟರಿ ಸೆಂಟ್ರಲಿನ ಸದಸ್ಯರಾದ ಸನತ್ ರೈ ಹಾಗೂ ಭಾರತಿ ಎಸ್.ರೈ ದಂಪತಿ, ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
ನಂದನ ಗೋವಿಯಸ್ ಬಳಗ ಪ್ರಾರ್ಥಿಸಿದರು. ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ ಸದಸ್ಯ ವಿಜಯ್ ಡಿ’ಸೋಜ ಸ್ವಾಗತಿಸಿ, ಸದಸ್ಯ ದೀಪಕ್ ಮಿನೇಜಸ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಕ್ಲಬ್ ಮಾಜಿ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ವಂದಿಸಿದರು. ಕ್ಲಬ್ ಮಾಜಿ ಕಾರ್ಯದರ್ಶಿ ಆಶಾ ರೆಬೆಲ್ಲೋರವರು ಅತಿಥಿಗಳ ಪರಿಚಯ ಮಾಡಿದರು. ಸುಶ್ಮಾ ವಿಜಯ್ ಡಿ’ಸೋಜ ಕಾರ್ಯಕ್ರಮ ನಿರ್ವಹಿಸಿದರು.
ಕ್ರಿಸ್ಮಸ್ ಟ್ರೀ ಬೆಳಗಿಸಿ ಉದ್ಘಾಟನೆ…
ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುಂದರ ರೈ ಬಲ್ಕಾಡಿರವರು ಕ್ರಿಸ್ಮಸ್ ಟ್ರೀಯನ್ನು ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಕ್ರಿಸ್ಮಸ್ ಕ್ಯಾರಲ್ಸ್, ಸಾಂತಾಕ್ಲಾಸ್..
ಮಾಯಿದೆ ದೇವುಸ್ ಚರ್ಚ್ ನ ಐಸಿವೈಎಂ ಸದಸ್ಯರು ಕ್ಯಾರಲ್ಸ್ ಗೀತೆಗಳನ್ನಾಡಿದರು. ಕ್ರಿಸ್ಮಸ್ ಪ್ರತೀಕವಾದ ಸಾಂತಾಕ್ಲಾಸ್ ವೇಷಧಾರಿ ಆಗಮಿಸುವ ಮೂಲಕ ನೆರೆದವರನ್ನು ರಂಜಿಸಿದರು.