ಕುಂಬ್ರ: ಅಪ್ಪ ಮಗನ ಜಂಗೀ ಕುಸ್ತಿಯಲ್ಲಿ 35 ಅಡಿಕೆ ಗಿಡಗಳು ಡಮಾರ್….!

0

ಪುತ್ತೂರು: ತಂದೆ ಮತ್ತು ಮಗನ ಜಂಗೀ ಕುಸ್ತಿಗೆ 35 ಅಡಿಕೆ ಗಿಡಗಳು ಡಮಾರ್ ಆದ ಘಟನೆ ಕುಂಬ್ರದಲ್ಲಿ ನಡೆದಿದೆ.
ಕುಂಬ್ರದ ಉಜಿರೋಡಿ‌ ನಿವಾಸಿಯೊಬ್ಬರಿಗೆ ಸೇರಿದ ಜಾಗ ಮಗನ ಹೆಸರಿಗೆ ಅಕ್ರಮ ಸಕ್ರಮದಲ್ಲಿ‌ ಮಂಜೂರಾಗಿದ್ದೇ ಇವರೊಳಗಿನ ಕುಸ್ತಿಗೆ ಕಾರಣವಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಜಮೀನು ಮಾಲಕರು ಮಗನ ಜೊತೆ ವಾಸ್ತವ್ಯವಿದ್ದರು. ಒಟ್ಟಿಗೆ ಸಾರಣೆ ಕೆಲಸಕ್ಕೂ ಹೋಗುತ್ತಿದ್ದರು. ತನ್ನ ಪ್ರೀತಿಯ ಏಕೈಕ ಪುತ್ರಗೆ ತನ್ನ ವರ್ಗ ಜಾಗದ ಸ್ವಾಧೀನದಲ್ಲಿದ್ದ ಸರಕಾರಿ ಜಾಗವನ್ನು ಅಕ್ರಮ ಸಕ್ರಮದಡಿ ಅರ್ಜಿ ಹಾಕುವಂತೆ ಮಗನಲ್ಲಿ ತಿಳಿಸಿದ್ದರು. ಅಪ್ಪನ ಒಪ್ಪಿಗೆ ಮೇರೆಗೆ ಮಗ ಅರ್ಜಿ ಹಾಕಿದ್ದ ಕಳೆದ ವರ್ಷ ಅರ್ಜಿ‌ ಮಂಜೂರಾಗಿತ್ತು.


ಅರ್ಜಿ ಮಂಜೂರಾದ ಬಳಿಕ ಅಪ್ಪ‌ಮತ್ತು ಮಗನ ನಡುವೆ ಮುನಿಸು ಹುಟ್ಟಿಕೊಂಡಿದೆ. ತನ್ನ ಮಗನ ಜೊತೆ ಇರಲಾರೆ ಎಂದು ಅಲ್ಲೇ ಪಕ್ಕದಲ್ಲಿರುವ ಮಗಳ ಮನೆಯಲ್ಲಿ ವಾಸ್ತವ್ಯ ಇದ್ದಾರೆ. ಮಗನ ಮೇಲೇ ಇದ್ದ ಹಿಂದಿನ ಪ್ರೀತಿ ಈಗ ಇಲ್ಲ ಈ ಕಾರಣಕ್ಕೆ ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಾಗವನ್ನು ಮಗನಿಗೆ ಕೊಡಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಲು ಪುತ್ತೂರಿಗೆ ತೆರಳಿದ್ದಾರೆ. ಜೊತೆಗೆ ಪುತ್ರಿಯೂ ತೆರಳಿದ್ದಾಳೆ. ಹಕ್ಕು ಪತ್ರ ಮಗನಿಗೆ ನೀಡಲು ಅಧಿಕಾರಿಗಳು‌ ಮುಂದಾದಾಗ ತಂದೆ ಆಕ್ಷೇಪ ಮಾಡಿದ್ದರಿಂದ ಹಕ್ಕು ಪತ್ರವನ್ನು ಮಗನಿಗೆ ನೀಡಲಿಲ್ಲ. ಆ ಬಳಿಕ ತಂದೆ ಮತ್ತು ಮಗ ಮನೆಗೆ ಹಿಂದಿರುಗಿದ್ದಾರೆ. ಆದರೆ ಮನೆಯ ಬಳಿ ನೆಡಲಾಗಿದ್ದ 35 ಅಡಿಕೆ ಗಿಡಗಳನ್ನು ಕಡಿದು ಹಾಕಿರುವುದು ಬೆಳಕಿಗೆ ಬಂದಿದೆ. ಯಾರು ಕಡಿದಿದ್ದಾರೆ ಎಂಬುದು ಗೊತ್ತಾಗಿಲ್ಲ.‌ಮಗನೇ ಕಡಿದದ್ದು ಎಂದು ತಂದೆ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಅಡಿಕೆ ಗಿಡ ಕಡಿಯುವಷ್ಡು ದುಷ್ಟ ನಾನಲ್ಲ ಎಂದು ಮಗ ಪೊಲೀಸರಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಇಬ್ಬರ ಜಗಳದಿಂದ ಅಡಿಕೆ ಗಿಡ ನಾಶವಾಗಿದ್ದಂತೂ ವಿಪರ್ಯಾಸವೇ ಸರಿ.

LEAVE A REPLY

Please enter your comment!
Please enter your name here