*ಕೃತಕ ಕಾಲುಗಳ ಜೋಡಣೆ ಕಾರ್ಯ ಸಮಾಜಕ್ಕೆ ಮಾದರಿ-ಅರಿಯಡ್ಕ ಚಿಕ್ಕಪ್ಪ ನಾೖಕ್
*ರೋಟರಿ ಪುತ್ತೂರು ಆರೋಗ್ಯ ಕ್ಷೇತ್ರದಲ್ಲಿ ಅನೇಕ ಕೊಡುಗೆಗಳನ್ನು ನೀಡಿದೆ-ಜೈರಾಜ್ ಭಂಡಾರಿ
*ಚೆನ್ನೈನ ಫ್ರೀಡಂ ಟ್ರಸ್ಟ್ರವರ ಸೇವಾ ಕೈಂಕರ್ಯ ಶ್ಲಾಘನೀಯ-ಡಾ.ಶ್ರೀಪ್ರಕಾಶ್ ಬಿ
ಪುತ್ತೂರು: ಮೊಣಗಂಟಿನಿಂದ ಕೆಳಗೆ ಅಥವಾ ಎರಡೂ ಕಾಲುಗಳನ್ನು ಕಳಕೊಂಡವರಿಗೆ ಉಚಿತವಾಗಿ ಕೃತಕ ಕಾಲು ಜೋಡಣೆ ಶಿಬಿರ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಜ.3ರಂದು ಕಾಲು ಕಳೆದುಕೊಂಡವರಿಗೆ ಕೃತಕ ಕಾಲು ಜೋಡಣೆಗೆ ಅಳತೆ ಮಾಡುವ ತಪಾಸಣಾ ಶಿಬಿರವು ರೋಟರಿ ಪುತ್ತೂರು ಹಾಗೂ ಪ್ರೀಡಂ ಟ್ರಸ್ಟ್ ಚೆನ್ನೈ ಇವರ ಜಂಟಿ ಆಶ್ರಯದಲ್ಲಿ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ನಡೆಯಿತು.
ಕೃತಕ ಕಾಲುಗಳ ಜೋಡಣೆ ಕಾರ್ಯ ಸಮಾಜಕ್ಕೆ ಮಾದರಿ-ಅರಿಯಡ್ಕ ಚಿಕ್ಕಪ್ಪ ನಾೖಕ್:
ರೋಟರಿ ಕ್ಲಬ್ ಪುತ್ತೂರು ಹಿರಿಯ ಸದಸ್ಯ ಅರಿಯಡ್ಕ ಚಿಕ್ಕಪ್ಪ ನಾಕ್ರವರು ತಪಾಸಣಾ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಫಲಾನುಭವಿಗಳಿಗೆ ಕೃತಕ ಕಾಲುಗಳನ್ನು ಜೋಡಿಸುವ ಕಾರ್ಯ ನಿಜಕ್ಕೂ ಸಮಾಜಕ್ಕೆ ಮಾದರಿ ಎನಿಸಿದೆ. ಕೃತಕ ಕಾಲು ಜೋಡಣೆಯಿಂದ ಫಲಾನುಭವಿಗಳ ನಿತ್ಯ ಜೀವನದಲ್ಲಿ ಸ್ವಲ್ಪವಾದರೂ ಪ್ರಯೋಜನವಾದೀತು ಹಾಗೂ ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಜೀವನ ಸುಧಾರಿಸುವ ಕಾಯಕ ಮುಂದುವರೆಯಲಿ ಎಂದರು.
ರೋಟರಿ ಪುತ್ತೂರು ಆರೋಗ್ಯ ಕ್ಷೇತ್ರದಲ್ಲಿ ಅನೇಕ ಕೊಡುಗೆಗಳನ್ನು ನೀಡಿದೆ-ಜೈರಾಜ್ ಭಂಡಾರಿ:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿರವರು ಸ್ವಾಗತಿಸಿ, ಮಾತನಾಡಿ, ರೋಟರಿ ಪುತ್ತೂರು ಸಮುದಾಯ ವಿಭಾಗವು ಆರೋಗ್ಯ ಕ್ಷೇತ್ರದಲ್ಲಿ ಅನೇಕ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಇದಕ್ಕೆ ಉತ್ತಮ ಉದಾಹರಣೆ ಕೃತಕ ಕಾಲುಗಳ ಜೋಡಣಾ ಕಾರ್ಯ. ಮೇಜರ್ ಡೋನರ್ ಡಾ.ಶ್ರೀಪ್ರಕಾಶ್ರವರ ನೇತೃತ್ವದಲ್ಲಿ ಕಳೆದ ಆರು ವರ್ಷಗಳಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಇದು ವೈಯಕ್ತಿಕ ಲಾಭಕ್ಕೆ ಅಲ್ಲ, ಬದಲಾಗಿ ನಿರ್ಮಲ ಹೃದಯದಿಂದ ಜನರಿಗೆ ಏನು ಅವಶ್ಯಕತೆ ಬೇಕು ಅದನ್ನು ಪೂರೈಸುತ್ತಿರುವುದು ನಿಜಕ್ಕೂ ದೇವರ ಕೆಲಸ ಎಂದರು.
ಚೆನ್ನೈನ ಫ್ರೀಡಂ ಟ್ರಸ್ಟ್ರವರ ಸೇವಾ ಕೈಂಕರ್ಯ ಶ್ಲಾಘನೀಯ – ಡಾ.ಶ್ರೀಪ್ರಕಾಶ್ ಬಿ:
ಶಿಬಿರದ ಸಂಯೋಜಕರಾದ ರೋಟರಿ ಪುತ್ತೂರು ಸಂಘ ಸೇವಾ ವಿಭಾಗದ ನಿರ್ದೇಶಕ ಡಾ.ಶ್ರೀಪ್ರಕಾಶ್ ಬಿ.ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಚೆನ್ನೈನ ಫ್ರೀಡಂ ಟ್ರಸ್ಟ್ ಇವರು 26ನೇ ವರ್ಷವನ್ನು ಆಚರಿಸುತ್ತಿದ್ದು, ಈ ಸಂಸ್ಥೆ ವಾಕ್ ಇಂಡಿಯಾ ಯೋಜನೆಯಡಿಯಲ್ಲಿ ಭಾರತ ದೇಶದ ಬೇರೆ ಬೇರೆ ರಾಷ್ಟ್ರದಲ್ಲಿ ಸುಮಾರು 30 ಸಾವಿರಕ್ಕೂ ಮಿಕ್ಕಿ ಫಲಾನುಭವಿಗಳಿಗೆ ಕೃತಕ ಕಾಲುಗಳನ್ನು ಜೋಡಿಸುವ ಮೂಲಕ ಜೀವನಕ್ಕೆ ವ್ಯವಸ್ಥೆ ಕೊಡುವ ನಿಟ್ಟಿನಲ್ಲಿ ಮಾಡುತ್ತಿರುವ ಅವರ ಸೇವಾ ಕೈಂಕರ್ಯ ನಿಜಕ್ಕೂ ಶ್ಲಾಘನೀಯ. ಫಲಾನುಭವಿಗಳು ತಮ್ಮ ಬದುಕಿನ ಸಮಯವನ್ನು ಉಪಯುಕ್ತ ರೀತಿಯಲ್ಲಿ ನಡೆಸುವುದಕ್ಕೆ ಇದೊಂದು ವೇದಿಕೆಯಾಗಿದ್ದು ಇದರ ಸದ್ವಿನಿಯೋಗವಾಗಲಿ ಎಂದರು.
ಪ್ರೊ|ದತ್ತಾತ್ರೇಯ ರಾವ್ ಪ್ರಾರ್ಥಿಸಿದರು. ರೋಟರಿ ಸದಸ್ಯ ದಾಮೋದರ್ ವಂದಿಸಿದರು. ರೋಟರಿ ಕಾರ್ಯದರ್ಶಿ ಸುಜಿತ್ ಡಿ.ರೈ, ಸದಸ್ಯರುಗಳಾದ ಎ.ಜೆ ರೈ, ಶ್ರೀಧರ್ ಆಚಾರ್ಯ, ಸತೀಶ್ ನಾಯಕ್, ಪ್ರೀತಾ ಹೆಗ್ಡೆ, ಪರಮೇಶ್ವರ್ ಗೌಡ, ಪುತ್ತೂರು ಸಿಟಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಷ್ಣುಕಿರಣ್ ಉಪಸ್ಥಿತರಿದ್ದರು. ಡಾ.ಶ್ರೀಪ್ರಕಾಶ್ರವರ ಪ್ರಕಾಶ್ ಡೆಂಟಲ್ ಕ್ಲಿನಿಕ್ನ ಸಿಬ್ಬಂದಿಗಳಾದ ತವಿತಾ ಹಾಗೂ ರೇಶ್ಮಾ, ಪುತ್ತೂರು ಸಿಟಿ ಆಸ್ಪತ್ರೆ ಸಿಬ್ಬಂದಿಗಳು ಸಹಕರಿಸಿದರು.
31 ಫಲಾನುಭವಿಗಳು, ರೂ.4.5 ಲಕ್ಷ ವೆಚ್ಚ…
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ತಪಾಸಣಾ ಶಿಬಿರದಲ್ಲಿ ಫ್ರೀಡಂ ಟ್ರಸ್ಟ್ನ ಫೀಲ್ಡ್ ಆಫೀಸರ್ ಅಭಿಲಾಷ್, ತಾಂತ್ರಿಕ ಸಿಬ್ಬಂದಿಗಳಾದ ಜಯವೇಲು, ರಾಯನ್ ಮೋನ್ರವರಿಂದ ಕಾಲು ಕಳೆದುಕೊಂಡ ಫಲಾನುಭವಿಗಳಿಗೆ ಕೃತಕ ಕಾಲು ಜೋಡಣಾ ತಪಾಸಣಾ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕಡಬ ತಾಲೂಕಿನ ಹಾಗೂ ಕೊಡಗು ಜಿಲ್ಲೆ ಸುಮಾರು 30 ಮಂದಿ ಫಲಾನುಭವಿ ಕಾಲು ಕಳೆದುಕೊಂಡವರ ಕಾಲಿನ ಅಳತೆಯನ್ನು ಮಾಡಲಾಯಿತು. ಕೃತಕ ಕಾಲು ಜೋಡಣೆಗೆ ಓರ್ವರಿಗೆ ಅಂದಾಜು ರೂ.10 ಸಾವಿರ ತಗಲುತ್ತಿದ್ದು, 31 ಮಂದಿ ಫಲಾನುಭವಿಗಳಿಗೆ ಇತರ ಖರ್ಚು ಸೇರಿ ಸುಮಾರು ರೂ.4.5 ಲಕ್ಷ ವೆಚ್ಚವಾಗಲಿದೆ. ಈ ವೆಚ್ಚವನ್ನು ರೋಟರಿ ಕೆನಡ, ರೋಟರಿ ಚಿಲ್ಪಾಕಮ್(ತಮಿಳ್ನಾಡು) ಹಾಗೂ ರೋಟರಿ ಪುತ್ತೂರು ಭರಿಸುತ್ತಿದ್ದಾರೆ.
ಸತತ 6ನೇ ಬಾರಿ..
ರೋಟರಿ ಪುತ್ತೂರು ಹಾಗೂ ಡಾ.ಎಸ್ ಸುಂದರ್ ನೇತೃತ್ವದ ಫ್ರೀಡಂ ಟ್ರಸ್ಟ್ ಚೆನ್ನೈ ಸಹಯೋಗದಲ್ಲಿ ಕಾಲು ಕಳೆದುಕೊಂಡವರಿಗೆ ಕೃತಕ ಕಾಲುಗಳನ್ನು ಜೋಡಿಸುವ ಕಾರ್ಯ ಸತತ ಆರನೇ ಬಾರಿ ನಡೆಯುತ್ತಿದೆ. ಈ ಕೃತಕ ಕಾಲುಗಳು ಯಾವುದೇ ರೆಡಿಮೇಡ್ ಅಲ್ಲ, ಬದಲಾಗಿ ಫಲಾನುಭವಿಗಳ ಕಾಲಿನ ಅಳತೆಯನ್ನು ತೆಗೆದುಕೊಂಡು ಮಾಡಿದುದಾಗಿದೆ. ಇದನ್ನು ಮತ್ತೊಬ್ಬ ವ್ಯಕ್ತಿಗೆ ಧರಿಸಲು ಸಾಧ್ಯವಾಗುವುದಿಲ್ಲ. ಫಲಾನುಭವಿಗಳ ಕೃತಕ ಕಾಲು ಜೋಡಣೆ ಕಾರ್ಯಕ್ರಮದ ದಿನಾಂಕವನ್ನು ಮುಂದಿನ 25 ದಿನಗಳ ಬಳಿಕ ತಿಳಿಸಲಾಗುವುದು ಎಂದು ಸಂಯೋಜಕರಾದ ಡಾ.ಶ್ರೀಪ್ರಕಾಶ್ ಬಿ.ರವರು ತಿಳಿಸಿರುತ್ತಾರೆ.