ಮಿಶನ್‌ಮೂಲೆ ಚಾಮುಂಡೇಶ್ವರಿ ದೇವಸ್ಥಾನದ ವತಿಯಿಂದ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ರೈಯವರ ಶ್ರದ್ಧಾಂಜಲಿ ಸಭೆ

0

*ಮಿಶನ್‌ಮೂಲೆ ಶ್ರೀದೇವಿ ಕ್ಷೇತ್ರ ಬೆಳಗಿಸಬೇಕೆನ್ನುವ ಆಶಯ ಹೊಂದಿದ್ದರು-ಉದಯನಾರಾಯಣ ಕಲ್ಲೂರಾಯ
*ಭಕ್ತರಿಗೆ ಪ್ರಾರ್ಥಿಸಲು ಶ್ರೀದೇವಿಯ ಪೂಜಾ ಸಾನಿಧ್ಯವನ್ನು ಒದಗಿಸಿಕೊಟ್ಟಿರುತ್ತಾರೆ-ಲಕ್ಷ್ಮೀಶ ಪುತ್ತೂರಾಯ
*ಶ್ರೀ ಕ್ಷೇತ್ರ ರಾಜಕಿಯೇತರ ಕ್ಷೇತ್ರವಾಗಿದೆ-ದಿಲೀಪ್ ಕುಮಾರ್

ಪುತ್ತೂರು: ಪ್ರಗತಿಪರ ಕೃಷಿಕ, ನಿವೃತ್ತ ಕೆಎಸ್‌ಆರ್‌ಟಿಸಿ ಉದ್ಯೋಗಿ, ಮೊಟ್ಟೆತ್ತಡ್ಕ ಮಿಶನ್‌ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದು, ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಮಿಶನ್‌ಮೂಲೆ ಮೋಹನ್ ರೈಯವರ ಶ್ರದ್ಧಾಂಜಲಿ ಸಭೆಯು ಮಿಶನ್‌ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ವತಿಯಿಂದ ಜ.3ರಂದು ದೇವಸ್ಥಾನದಲ್ಲಿ ನೆರವೇರಿತು.

ಮಿಶನ್‌ಮೂಲೆ ಶ್ರೀದೇವಿಯ ಕ್ಷೇತ್ರ ಬೆಳಗಿಸಬೇಕೆನ್ನುವ ಆಶಯ ಹೊಂದಿದ್ದರು-ಉದಯನಾರಾಯಣ ಕಲ್ಲೂರಾಯ:
ಶ್ರೀ ಕ್ಷೇತ್ರದ ಅರ್ಚಕರಾದ ಉದಯನಾರಾಯಣ ಕಲ್ಲೂರಾಯ ಮಾತನಾಡಿ, ನಮಗೆ ಯಾವುದೇ ಹೆಸರು ಬೇಡ. ಮಿಶನ್‌ಮೂಲೆ ಶ್ರೀದೇವಿಯ ಕ್ಷೇತ್ರ ಬೆಳಗಿಸಬೇಕು ಎನ್ನುವ ಆಶಯವನ್ನು ಹೊಂದಿದವರು ಮೋಹನ್ ರೈಯವರು. ಅಗಲಿದ ಮೋಹನ್ ರೈಯವರ ಜೀವ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆತ್ಮ ಮಾತ್ರ ಶ್ರೀಕ್ಷೇತ್ರದಲ್ಲಿದ್ದು ಅವರ ಆಶೀರ್ವಾದದಿಂದ ಶ್ರೀ ಕ್ಷೇತ್ರವು ಮತ್ತಷ್ಟು ಅಭಿವೃದ್ಧಿಯತ್ತ ಸಾಗುವುದು ನಿಶ್ಚಿತವಾಗಿದೆ. ಆದ್ದರಿಂದ ಅಗಲಿದ ಮೋಹನ್ ರೈಯವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ನಮ್ಮೆಲ್ಲರ ಪ್ರಾರ್ಥನೆಯಾಗಿದ್ದು, ಅವರ ಅಗಲಿಕೆಯ ದುಃಖವನ್ನು ಅವರ ಕುಟುಂಬಕ್ಕೆ ಭರಿಸಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ ಎಂದರು.



ಭಕ್ತರಿಗೆ ಪ್ರಾರ್ಥಿಸಲು ಶ್ರೀದೇವಿಯ ಪೂಜಾ ಸಾನಿಧ್ಯವನ್ನು ಒದಗಿಸಿಕೊಟ್ಟಿರುತ್ತಾರೆ-ಲಕ್ಷ್ಮೀಶ ಪುತ್ತೂರಾಯ:
ತಂತ್ರಿವರ್ಯರಾದ ಲಕ್ಷ್ಮೀಶ ಪುತ್ತೂರಾಯ ಮಾತನಾಡಿ, ಶ್ರೀ ಕ್ಷೇತ್ರದ ಭಗವದ್ಭಕ್ತರ ಪ್ರೀತಿಗೆ ಮೋಹನ್ ರೈಯವರು ನಿಜಕ್ಕೂ ಪಾತ್ರರಾಗಿದ್ದಾರೆ. ಅವರು ೪೫ ವರುಷದ ಹಿಂದೆ ಶ್ರೀ ಕ್ಷೇತ್ರದಲ್ಲಿ ಭಗವದ್ಭಕ್ತರಿಗೆ ಪ್ರಾರ್ಥಿಸಲು ಶ್ರೀದೇವಿಯ ಪೂಜಾ ಸಾನಿಧ್ಯವನ್ನು ಒದಗಿಸಿಕೊಟ್ಟಿರುವುದು ನಿಜಕ್ಕೂ ಮೋಹನ್ ರೈಯವರಿಗೆ ಇದ್ದಂತಹ ಧಾರ್ಮಿಕತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಜೊತೆಗೆ ತಮ್ಮ ಮಕ್ಕಳನ್ನು ಮೋಹನ್ ರೈಯವರು ಸುಸಂಸ್ಕೃತರನ್ನಾಗಿ ಬೆಳೆಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿ ಮಹಾವಿಷ್ಣು ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.

ಶ್ರೀ ಕ್ಷೇತ್ರ ರಾಜಕಿಯೇತರ ಕ್ಷೇತ್ರವಾಗಿದೆ-ದಿಲೀಪ್ ಕುಮಾರ್:
ಸ್ಥಳೀಯರಾದ ದಿಲೀಪ್ ಕುಮಾರ್ ಮೊಟ್ಟೆತ್ತಡ್ಕ ಮಾತನಾಡಿ, ಊರಿನ ಹಿರಿಯರೂ ಆಗಿರುವ ಮೋಹನ್ ರೈಯವರು ಎಂದಿಗೂ ಯಾರಿಗೂ ನೋವನ್ನುಂಟು ಮಾಡದೆ ಎಲ್ಲರನ್ನೂ ಸಮನಾಗಿ ನೋಡಿದವರಾಗಿದ್ದಾರೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ನಾಣ್ಣುಡಿಯಂತೆ ತನ್ನ ಜಾಗದಲ್ಲಿ ದೇವರ ಸಾನಿಧ್ಯವನ್ನು ನಿರ್ಮಿಸಿ ಆ ಮೂಲಕ ಶ್ರೀ ಕ್ಷೇತ್ರವು ಕಾರಣಿಕ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಶ್ರೀ ಕ್ಷೇತ್ರವು ರಾಜಕೀಯೇತರ ಕ್ಷೇತ್ರವಾಗಿ ಮೂಡಿ ಬಂದಿದ್ದು, ಇಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕತೆಗೆ ಮಾತ್ರ ಒತ್ತು ನೀಡುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿ ಅಗಲಿದ ಮೋಹನ್ ರೈಯವರ ಆತ್ಮಕ್ಕೆ ಚಿರಶಾಂತಿ ಅರ್ಪಿಸಿ ನುಡಿನಮನ ಸಲ್ಲಿಸಿದರು.

ಅಗಲಿದ ಮಿಶನ್‌ಮೂಲೆ ಮೋಹನ್ ರೈಯವರ ಪತ್ನಿ ಸಂಪಾವತಿ ಎಂ.ರೈ, ಪುತ್ರರಾದ ಕೆಎಸ್‌ಆರ್‌ಟಿಸಿ ಉದ್ಯೋಗಿ ರಮೇಶ್ ರೈ, ಆರ್ಯಾಪು ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಸತೀಶ್ ರೈ ಸಹಿತ ಕುಟುಂಬಿಕರು, ದೇವಸ್ಥಾನದ ಅಧ್ಯಕ್ಷ ರಾಮ ಶೆಟ್ಟಿ, ಉಪಾಧ್ಯಕ್ಷರುಗಳಾದ ಸಂತೋಷ್ ಕುಮಾರ್ ಕೆ, ಸತೀಶ್ ಎಂ, ಕಾರ್ಯದರ್ಶಿ ಕೆ.ಬಿ ಶೇಖರ, ಜೊತೆ ಕಾರ್ಯದರ್ಶಿಗಳಾದ ಲಕ್ಷ್ಮಣ ಶೆಟ್ಟಿ, ಸಂತೋಷ್ ರೈ, ಸುಂದರ ಕೆ, ಲೆಕ್ಕಪರಿಶೋಧಕ ವಿಶ್ವನಾಥ ರೈ, ಕೋಶಾಧಿಕಾರಿ ಮೋಹನ್ ಕುಮಾರ್ ಸಹಿತ ಭಕ್ತ ವೃಂದ, ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ, ಕೆಎಸ್‌ಆರ್‌ಟಿಸಿ ಡಿಸಿ ಜಯಕರ ಶೆಟ್ಟಿ ಹಾಗೂ ನೌಕರ ವೃಂದ, ಆರ್ಯಾಪು ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ಅಧ್ಯಕ್ಷ ರವಿಚಂದ್ರ ಆಚಾರ್ಯ ಸಹಿತ ಹಲವರು ಉಪಸ್ಥಿತರಿದ್ದರು. ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ಮೌನ ಪ್ರಾರ್ಥನೆ, ಪುಷ್ಪಾರ್ಚನೆ..
ಅಗಲಿದ ಮಿಶನ್‌ಮೂಲೆ ಮೋಹನ್ ರೈಯವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಲೆಂದು ಭಗವಂತನಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಬಳಿಕ ಅಗಲಿದ ಮಿಶನ್‌ಮೂಲೆ ಮೋಹನ್ ರೈಯವರ ಭಾವಚಿತ್ರಕ್ಕೆ ಪುಷ್ಪಾರ್ಚಣೆಗೈಯುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

LEAVE A REPLY

Please enter your comment!
Please enter your name here