ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಿಟಿ ವತಿಯಿಂದ ರೋಟರಿ ಮನೀಷಾ ಸಭಾಂಗಣದಲ್ಲಿ ಜ.2 ರಂದು ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯನ್ನು ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ಮಾತನಾಡಿ, ವಿವಿಧ ಜಾತಿ-ಧರ್ಮದಲ್ಲಿ ಬದುಕುತ್ತಿರುವ ನಾವೆಲ್ಲ ಸಮಾಜದಲ್ಲಿ ಜೀವಿಸುವಾಗ ಪರಸ್ಪರ ಸಮಾನತೆ, ಶಾಂತಿ, ಪ್ರೀತಿ, ಸಹಬಾಳ್ವೆಯ ಜೀವನ ನಮ್ಮದಾಗಬೇಕು. ಇದುವೇ ನಮಗೆ ಪ್ರಭು ಯೇಸುಕ್ರಿಸ್ತರು ಬೋಧಿಸಿದ ಆದರ್ಶಗಳಾಗಿವೆ ಎಂದರು.
ಕ್ಲಬ್ ಮಾಜಿ ಅಧ್ಯಕ್ಷ ಪ್ರಸ್ತುತ ರೋಟರಿ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಆಗಿರುವ ಲಾರೆನ್ಸ್ ಗೊನ್ಸಾಲ್ವಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ಅಧ್ಯಕ್ಷೆ ಶ್ರೀಮತಿ ಗ್ರೇಸಿ ಗೊನ್ಸಾಲ್ವಿಸ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ಯಾಮಲಾ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
25 ಕುರ್ಚಿ ಹಸ್ತಾಂತರ/ಸನ್ಮಾನ:
ರೋಟರಿ ಜಿಲ್ಲಾ ಯೋಜನೆಯಾದ ಅಂಗನವಾಡಿ ಪುನಶ್ಚೇತನ ಕಾರ್ಯಕ್ರಮದಡಿ ಪರ್ಲಡ್ಕ ಅಂಗನವಾಡಿ ಕೇಂದ್ರಕ್ಕೆ ಕ್ಲಬ್ ಸದಸ್ಯ ದಯಾನಂದ ಕೆ.ಎಸ್ ದಂಪತಿ ಪ್ರಾಯೋಜಕತ್ವದಲ್ಲಿ 25 ಕುರ್ಚಿಗಳನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು. ಕ್ಲಬ್ ವೊಕೇಶನಲ್ ಸರ್ವಿಸ್ ನಡಿಯಲ್ಲಿ ಲೆಸ್ಟರ್ ಕೆಟರರ್ಸ್ ಮಾಲಕ ಓಸ್ವಾಲ್ಡ್ ಲೂವಿಸ್ ಹಾಗೂ ಅವರ ಪತ್ನಿ ರೋಟರಿ ಸದಸ್ಯೆಯೂ ಆಗಿರುವ ಲೀನಾ ಪಾಯಿಸ್ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕ್ಲಬ್ ಮಾಜಿ ಅಧ್ಯಕ್ಷ ಜ್ಯೋ ಡಿ’ಸೋಜರವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಮೂಡಬಿದ್ರೆ, ಬಂಟ್ವಾಳ, ಲೊರೆಟ್ಟೊ ಹಿಲ್ಸ್, ಮೊಡಂಕಾಪ್, ವಿಟ್ಲ, ಉಪ್ಪಿನಂಗಡಿ ಸದಸ್ಯರು ಉಪಸ್ಥಿತರಿದ್ದರು.
ಪ್ರಮುಖ ಆಕರ್ಷಣೆ…
ಕ್ರಿಸ್ಮಸ್ ಹಬ್ಬದ ಪ್ರತೀಕವಾಗಿರುವ ಕ್ರಿಸ್ಮಸ್ ಕ್ಯಾರಲ್ಸ್ ಸಮೂಹ ಗೀತೆಗಳನ್ನು ಕೊಂಕಣಿ, ಕನ್ನಡ, ತುಳು, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ರೋಟರಿ ಕ್ರೈಸ್ತ ಸದಸ್ಯರು ಹಾಡಿ ಮನರಂಜಿಸಿದರು. ಕ್ರಿಸ್ಮಸ್ ಅಜ್ಜ ಸಾಂತಾಕ್ಲಾಸ್ ಆಗಮಿಸಿ ಮಕ್ಕಳಿಗೆ ವಿವಿಧ ಉಡುಗೊರೆಗಳನ್ನು ನೀಡಿ, ಸಿಹಿತಿಂಡಿಯನ್ನು ಹಂಚಿ ಸಂದೇಶ ನೀಡಿದರು.