ನಿಡ್ಪಳ್ಳಿ: ಇಲ್ಲಿಯ ಕುಕ್ಕುಪುಣಿಯಿಂದ ಶ್ರೀ ಶಾಂತದುರ್ಗಾ ದೇವಸ್ಥಾನಕ್ಕೆ ಹೋಗುವ ಲೋಕೋಪಯೋಗಿ ರಸ್ತೆಯ ಬದಿ ಹುಲ್ಲು ಮುಳ್ಳು ಗಿಡಗಂಟಿ ಬೆಳೆದು ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದ್ದು, ಇದನ್ನು ತೆರವುಗೊಳಿಸಿ ದುರಸ್ತಿ ಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಸ್ತೆ ನಿರ್ಮಾಣ ಆದ ನಂತರ ಇದರ ನಿರ್ವಹಣೆ ಕೂಡ ಸಂಬಂಧಿಸಿದ ಇಲಾಖೆ ಮಾಡುತ್ತಿಲ್ಲ. ಪ್ರತಿ ವರ್ಷ ಇಲ್ಲಿ ಸಾರ್ವಜನಿಕರು ಗಿಡಗಂಟಿ ತೆಗೆದು ರಸ್ತೆ ಬದಿ ಸ್ವಚ್ಚಗೊಳಿಸುತ್ತಿರುವುದು ಬಿಟ್ಟರೆ ಇಲಾಖೆ, ಅಧಿಕಾರಿಗಳು ಈ ಕಡೆ ತಲೆ ಹಾಕುತ್ತಿಲ್ಲ. ವಾಹನ ಚಲಿಸುತ್ತಿರುವಾಗ ಬದಿಯಲ್ಲಿ ಪಾದಾಚಾರಿಗಳಿಗೆ, ವಿದ್ಯಾರ್ಥಿಗಳಿಗೆ ನಡೆದಾಡಲು ಸಮಸ್ಯೆಯಾಗಿದೆ. ರಸ್ತೆಯ ತಿರುವಿನಲ್ಲಿ ಎದುರಿನಿಂದ ವಾಹನ ಬರುವುದು ಕಾಣದೆ ಅಪಾಯ ಬರಬಹುದು. ರಸ್ತೆ ಬದಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ನೀರು, ಕೆಸರು ರಸ್ತೆ ಮೇಲೆಯೇ ಹರಿಯುತ್ತಿರುತ್ತದೆ. ಪಟ್ಟೆ ಎಂಬಲ್ಲಿ ರಸ್ತೆ ಬದಿ ಮಳೆಗಾಲದಲ್ಲಿ ಕುಸಿದು ಬೀಳುತ್ತಿದ್ದು ಗುಡ್ಡದ ಅಂಚಿನಲ್ಲಿ ಮರವೊಂದು ರಸ್ತೆಗೆ ಬಾಗಿ ನಿಂತಿದ್ದು ಅಪಾಯವನ್ನು ಅಹ್ವಾನಿಸುತ್ತಿದ್ದರೂ ಅದರ ತೆರವು ಮಾಡದೆ ಅಸಡ್ಡೆ ತೋರುತ್ತಿದ್ದಾರೆ.ಆದುದರಿಂದ ತಕ್ಷಣ ಸಂಬಂಧಿಸಿದ ಇಲಾಖೆ ಈ ಕಡೆ ಗಮನ ಹರಿಸಿ ತೆರವು ಗೊಳಿಸುವಂತೆ ಸಾರ್ವಜನಿಕರು ಅಗ್ರಹಿಸುತ್ತಿದ್ದಾರೆ.
ನವರಾತ್ರಿ ಮತ್ತು ಗ್ರಾಮದ ದೈವಗಳ ವಾರ್ಷಿಕ ಜಾತ್ರೆ ಸಮಯದಲ್ಲಿ ಗ್ರಾಮಸ್ಥರು ದುರಸ್ತಿ ಗೊಳಿಸುವುದು ಬಿಟ್ಟರೆ ಇಲಾಖೆ ಮಾಡುತ್ತಿಲ್ಲ.ಕಳೆದ ನವರಾತ್ರಿ ಸಮಯದಲ್ಲಿ ಒಬ್ಬ ಗ್ರಾಮಸ್ಥರು ಕಿಲೋ ಮೀಟರ್ ದೂರ ರಸ್ತೆ ಬದಿಯನ್ನು ದುರಸ್ತಿ ಮಾಡಿದ್ದಾರೆ. ಜನವರಿ ತಿಂಗಳ 19ರಿಂದ ದೈವಗಳ ಜಾತ್ರೆ ನಡೆಯಲಿದ್ದು ಅದಕ್ಕೆ ಮೊದಲು ಇಲಾಖೆ ಇದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಲಿ.