ಪುತ್ತೂರು: ಈಶ ಎಜ್ಯುಕೇಶನಲ್ ಆಂಡ್ ಸೋಶಿಯಲ್ ಸರ್ವೀಸ್ ಟ್ರಸ್ಟ್ ಆಡಳಿತದಲ್ಲಿ ನಡೆಸಲ್ಪಡುವ ಈಶ ವಿದ್ಯಾಲಯದ 24ನೇ ವರ್ಷದ “ಈಶ ಸಂಭ್ರಮ” ಕಾರ್ಯಕ್ರಮ ಜೈನಭವನದಲ್ಲಿ ನಡೆಯಿತು.
ಯಾವುದೇ ದುಶ್ಚಟಗಳಿಗೆ ಬಲಿಯಾಗಬೇಡಿ-ಚಂದ್ರಶೇಖರ ಎಸ್.:
ಈಶ ಎಜ್ಯುಕೇಶನಲ್ ಆಂಡ್ ಸೋಶಿಯಲ್ ಸರ್ವೀಸ್ ಟ್ರಸ್ಟ್‌ನ ನಿರ್ದೇಶಕ, ನಂದನ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಎಸ್.ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಸ್ಟೂಡೆಂಟ್ ಲೈಫ್ ಗೋಲ್ಡನ್ ಲೈಫ್ ಎನ್ನುಂತೆ ವಿದ್ಯಾರ್ಥಿಗಳು ಈ ಸಮಯದಲ್ಲಿ ಯಾವುದೇ ದುಶ್ಚಟಗಳಿಗೆ ಬಲಿಯಾಗಬೇಡಿ. ವಿದ್ಯಾರ್ಥಿ ಜೀವನದ ಪ್ರತೀ ಹೆಜ್ಜೆಯೂ ಮುಂದಿನ ಜೀವನದ ಸಾಧನೆಗೆ ಹೆಗ್ಗುರುತಾಗುತ್ತದೆ. ಮೊಬೈಲ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ತಂದೆ ತಾಯಿಗೆ ಒಳ್ಳೆಯ ಹೆಸರನ್ನು ತನ್ನಿ ಎಂದು ಹೇಳಿ ಇಲ್ಲಿನ ವಿದ್ಯಾರ್ಥಿಗಳು ಉತ್ತಮವಾಗಿ ಕಲಿತು ಜೀವನದಲ್ಲಿ ಉನ್ನತ ಸ್ಥಾನಕ್ಕೇರಲಿ ಎಂದು ಶುಭಹಾರೈಸಿದರು.
ಕಮರ್ಷಿಯಲ್ ಸೆಂಟರ್ ಮಾಡದೆ ನೈತಿಕತೆಯ ದೇಗುಲವನ್ನಾಗಿಸಿದರು-ಡಾ|ಅರುಣ್ ಪ್ರಕಾಶ್:
ಮುಖ್ಯ ಅತಿಥಿಯಾದ ನೆಹರುನಗರ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಅರುಣ್ ಪ್ರಕಾಶ್ ಮಾತನಾಡಿ ಗೋಪಾಲಕೃಷ್ಣರವರು ಸಾಮಾನ್ಯ ಉಪನ್ಯಾಸಕನಾಗಿ, ಶ್ರಮಜೀವಿಯಾಗಿ, ಕಲೆಯ ಉಪಾಸಕನಾಗಿಯೂ ಈಶ ಸಂಸ್ಥೆಯನ್ನು ಹುಟ್ಟುಹಾಕಿದರು. ಶಿಕ್ಷಣದಿಂದ ವಂಚಿತರಾದವರಿಗೆ, ಫೇಲಾದವರಿಗೆ ಆಶ್ರಯವಾದ ಸಂಸ್ಥೆ. ಇದನ್ನು ಕಮರ್ಷಿಯಲ್ ಸೆಂಟರ್ ಮಾಡದೆ ನೈತಿಕತೆಯ ದೇಗುಲವನ್ನಾಗಿಸಿದರು. ಮಕ್ಕಳಿಗೆ ವಿದ್ಯಾಭ್ಯಾಸ ಕೊಟ್ಟು ಬದುಕನ್ನು ಕಟ್ಟಿಕೊಡಲು ನೆರವಾವಾಗಿದ್ದಾರೆ ಎಂದರು. ಇಂದು ವಿದ್ಯಾವಂತರು ತುಂಬಾ ಮಂದಿ ಇದ್ದಾರೆ ಆದರೆ ಹೃದಯವಂತರು ಕಡಿಮೆ ಆಗಿದ್ದಾರೆ. ನಿಮಗೆ ಜ್ಞಾನದ ಹಸಿವು ಇದ್ದರೆ ಆಗ ನೀಚು ಎತ್ತರಕ್ಕೇರುತ್ತೀರಿ. ಜೀವನದಲ್ಲಿ ಮಲ್ಯಗಳನ್ನು ಅಳವಡಿಸಬೇಕು. ತಂದೆ ತಾಯಿಯನ್ನು, ಗುರುವನ್ನು, ಸಮಾಜವನ್ನು ದಿನನಿತ್ಯ ಪ್ರಾರ್ಥಿಸಿ ಗೌರವಿಸಿ ಎಂದರು.
ಮಕ್ಕಳ ಭವಿಷ್ಯ ಪ್ರಕಾಶಿಸಿದ ನಿಮ್ಮ ಸಂಸ್ಥೆಯು ಪ್ರಕಾಶಿಸಲಿ- ಬಿ.ಕೆ ಅಬ್ದುಲ್ ಲತೀಫ್:
ಮೆಲ್ಕಾರ್ ಮಾರ್ನಬೈಲು ಮಹಿಳಾ ಕಾಲೇಜು ಪ್ರಾಂಶುಪಾಲ ಬಿ.ಕೆ ಅಬ್ದುಲ್ ಲತೀಫ್ ಮಾತನಾಡಿ ವಕ್ತಿಯ ವ್ಯಕ್ತಿತ್ವ ಪರಿಪೂರ್ಣವಾಗಬೇಕಾದರೆ ಸಂಸ್ಕಾರಯುತ ಶಿಕ್ಷಣ ಪಡೆಯಬೇಕು. ಇಂದು ಶಿಕ್ಷಣ ಪಡೆಯಲು ಪೂರಕವಾದ ವ್ಯವಸ್ಥೆಗಳು ಇದೆ. ವಿದ್ಯಾಭ್ಯಾಸವು ನಿಮ್ಮನ್ನು ಜೀವನದ ಸಾರ್ಥಕತೆಗೆ ಕೊಂಡೊಯ್ಯುತ್ತದೆ. ಜೀವನದಲ್ಲಿ ಸಕರಾತ್ಮಕವಾದ ಮಾರ್ಗಗಳನ್ನು ಆಯ್ಕೆ ಮಾಡಿ ಎಂದರು. ಗೋಪಾಲಕೃಷ್ಣರವರು ನನಗೆ ಉಪನ್ಯಾಸಕರಾಗಿದ್ದವರು. ನಾನು ಈ ಹಂತಕ್ಕೆ ಬರಲು ಅವರೇ ಕಾರಣ. ಪಾದರಸದ ಚುರುಕು ವ್ಯಕ್ತಿತ್ವದ ಅವರು ಈ ಸಂಸ್ಥೆಯನ್ನು ಕಟ್ಟಲು ಶ್ರಮಪಟ್ಟಿದ್ದಾರೆ ಎಂದರು. ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ಜೀವನದ ಕೊನೆಯ ಉಸಿರು ಇರುವವರೆಗೂ ಕಲಿಕೆಯ ಅವಕಾಶಗಳು ಇರುತ್ತದೆ ಎಂದು ಹೇಳಿ ಮಕ್ಕಳ ಭವಿಷ್ಯ ಪ್ರಕಾಶಿಸಿದ ನಿಮ್ಮ ಸಂಸ್ಥೆಯು ಪ್ರಕಾಶಿಸಲಿ ಎಂದರು.
ಹೆಡ್ ಕಾನ್‌ಸ್ಟೇಬಲ್ ದಿನೇಶ್ ಕಡಮಜಲು ಮಾತನಾಡಿ ಶುಭಹಾರೈಸಿದರು. ಈಶ ವಿದ್ಯಾಲಯದ ಪ್ರಾಂಶುಪಾಲ ಯಂ. ಗೋಪಾಲಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈಶ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರೊನಾಲ್ಡ್ ಲೋಬೋ, ಸಾವಿತ್ರಿ ಪಾಟಾಳಿ, ಸುಬ್ಬಪ್ಪ ಪಾಟಾಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈಶ ಸಂಭ್ರಮದ ಪ್ರಯುಕ್ತ ನಡೆಸಿದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳಾದ ಶರತ್, ರಾಯಲ್ ಲೋಬೋ, ಶ್ವೇತಾ, ಸುಷ್ಮಾ, ನಿಯಾಜ್, ರಶ್ಮಿತಾ, ಉಪನ್ಯಾಸಕಿ ಪೂರ್ಣಿಮಾ ಅತಿಥಿಗಳನ್ನು ಗೌರವಿಸಿದರು. ಪ್ರಾಂಶುಪಾಲ ಯಂ. ಗೋಪಾಲಕೃಷ್ಣ ವರದಿ ವಾಚಿಸಿದರು. ಪೂರ್ಣಿಮಾ ಸನ್ಮಾನ ಪತ್ರ ವಾಚಿಸಿದರು. ಪೂರ್ಣಿಮಾ, ಸ್ವಾತಿ, ಉಷಾ.ಬಿ, ರಕ್ಷಾ, ಉಷಾ. ಜೆ., ಕಲೈವಾನಿ ಬಹುಮಾನಿತರ ಪಟ್ಟಿ ವಾಚಿಸಿದರು. ಸ್ವಾತಿ ಸ್ವಾಗತಿಸಿದರು. ಕಲೈವಾನಿ ವಂದಿಸಿದರು. ಉಪಪ್ರಾಂಶುಪಾಲೆ ಶಾರದಾ, ಕಲೈವಾಣಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಹಿರಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಶಿಕ್ಷಕ ವೃಂದದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
“ಈಶ ಪ್ರಶಸ್ತಿ” ಪ್ರದಾನ
ಸಮಾಜ ಸೇವಕ, ಪಡೀಲ್ ಚೈತನ್ಯ ಮಿತ್ರವೃಂದದ ಮಾಜಿ ಅಧ್ಯಕ್ಷ,50ಕ್ಕೂ ಮಿಕ್ಕಿ ರಕ್ತದಾನ ಮಾಡಿದ ಅರುಣ್ ಕುಮಾರ್‌ರವರಿಗೆ 2024ರ “ಈಶ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿದ್ದ ಗಣ್ಯರು ಶಾಲು, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅರುಣ್ ಕುಮಾರ್‌ರವರು ನನಗೆ ನೀಡಿದ ಪ್ರಶಸ್ತಿಯನ್ನು ನನ್ನ ಗುರು, ತಾಯಿ ಹಾಗೂ ಚೈತನ್ಯ ಮಿತ್ರವೃಂದಕ್ಕೆ ಅರ್ಪಿಸುತ್ತೇನೆ. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ನಿಶ್ಚಯಿಸಿ ಮುಂದುವರೆಯಿರಿ. ಮೊಬೈಲ್ ಬಳಕೆ ಕಡಿಮೆ ಮಾಡಿ. ಒಳ್ಳೆಯ ಸಂಸ್ಕೃತಿ, ಸಂಸ್ಕಾರ ಪಡೆಯಿರಿ ಎಂದರು.