ಲೋಕಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ: ಮೂವರ ಹೆಸರು ಪರಿಶೀಲನೆ- ನಳಿನ್ ಕುಮಾರ್, ಅರುಣ್ ಶ್ಯಾಮ್, ಬ್ರಿಜೇಶ್ ಚೌಟರಲ್ಲಿ ಫೈನಲ್ ಯಾರು?:ಆರ್.ಎಸ್.ಎಸ್. ಅಂತಿಮ ಮುದ್ರೆಗೆ ಕಾಯುತ್ತಿರುವ ಹೈಕಮಾಂಡ್

0

ಪುತ್ತೂರು: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಉತ್ತರಪ್ರದೇಶದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಜನವರಿ 22ರಂದು ನಡೆಯುವ ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಹವಾ ದೇಶಾದ್ಯಂತ ಜಾರಿಯಲ್ಲಿರುವಂತೆಯೇ ಹಿಂದುತ್ವದ ಅಜೆಂಡಾದೊಂದಿಗೆ ಚುನಾವಣಾ ಅಖಾಡಕ್ಕಿಳಿಯಲು ಭಾರತೀಯ ಜನತಾಪಾರ್ಟಿ ಸಿದ್ಧತೆ ಆರಂಭಿಸಿದೆ. ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆಯಬೇಕಿದೆಯಾದರೂ ಅದಕ್ಕಿಂತ ಮುಂಚಿತವಾಗಿ ಚುನಾವಣೆ ಘೋಷಣೆಯಾದರೂ ಅಚ್ಚರಿ ಏನಿಲ್ಲ ಎಂಬ ವಾತಾವರಣ ಇದೆ. ಇದರೊಂದಿಗೆ ರಾಷ್ಟ್ರಾದ್ಯಂತ ಲೋಕಸಭಾ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ಬಿಜೆಪಿ ಕಸರತ್ತು ನಡೆಸುತ್ತಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲು ಹೈಕಮಾಂಡ್ ತಯಾರಿ ನಡೆಸಿದೆ. ಕರ್ನಾಟಕದ ಕರಾವಳಿ ಭಾಗದ ಬಿಜೆಪಿ ಅಭ್ಯರ್ಥಿಗಳ ಹೆಸರಿಗೆ ಆರ್.ಎಸ್.ಎಸ್. ನಾಯಕರು ಅಂತಿಮ ಮುದ್ರೆ ಒತ್ತುವ ಸಂಪ್ರದಾಯ ಇರುವುದರಿಂದ ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರು ಘೋಷಿಸಲು ಪಕ್ಷದ ನಾಯಕರು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.

ಮೂವರಲ್ಲಿ ಯಾರು ಹಿತವರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ. ಮೂರನೇ ಬಾರಿ ಲೋಕಸಭೆಯಲ್ಲಿ ದಕ್ಷಿಣ ಕನ್ನಡವನ್ನು ಪ್ರತಿನಿಧಿಸುತ್ತಿರುವ ಬಿಜೆಪಿಯ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಸರಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿದ್ದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಪುತ್ತೂರು ಮತ್ತು ಇತ್ತೀಚೆಗಷ್ಟೇ ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಮಂಗಳೂರು ಕಂಬಳದ ರೂವಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟರವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಈ ಮೂವರ ಹೆಸರು ಬಿಜೆಪಿ ಹೈಕಮಾಂಡ್ ಪರಿಶೀಲನೆಯಲ್ಲಿದೆ. ನಳಿನ್ ಕುಮಾರ್ ಕಟೀಲ್, ಅರುಣ್ ಶ್ಯಾಮ್ ಮತ್ತು ಬ್ರಿಜೇಶ್ ಚೌಟ ಪೈಕಿ ಯಾರಿಗೆ ಆರ್.ಎಸ್.ಎಸ್. ನಾಯಕರ ಆಶೀರ್ವಾದ ಸಿಗಲಿದೆಯೋ ಅವರು ಅಖಾಡಕ್ಕೆ ಇಳಿಯಲಿದ್ದಾರೆ.

ನಳಿನ್, ಚೌಟ ಚಟುವಟಿಕೆ ಬಿರುಸು: ನಳಿನ್ ಕುಮಾರ್ ಕಟೀಲ್ ಮತ್ತು ಬ್ರಿಜೇಶ್ ಚೌಟ ಅವರು ದ.ಕ. ಕ್ಷೇತ್ರಾದ್ಯಂತ ಚಟುವಟಿಕೆ ಬಿರುಸುಗೊಳಿಸಿದ್ದಾರೆ. ಸಂಘ ಪರಿವಾರದಲ್ಲಿ ಪ್ರಭಾವಿ ಆಗಿರುವ ಅರುಣ್ ಶ್ಯಾಮ್ ಅವರು ರಾಜಕೀಯವಾಗಿ ಗುರುತಿಸಿಕೊಂಡಿಲ್ಲವಾದ್ದರಿಂದ ಪಕ್ಷದ ಚಟುವಟಿಕೆಯಲ್ಲಿ ಅವರು ಸಕ್ರಿಯವಾಗಿಲ್ಲ. ಆದರೆ, ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಜತೆಗಿನ ಒಡನಾಟ ಅವರ ಹೆಸರನ್ನು ಚಾಲ್ತಿಗೆ ಬರುವಂತೆ ಮಾಡಿದೆ.

ನಳಿನ್ ಮತ್ತೆ ಮುನ್ನಲೆಗೆ : ಸತತ ಮೂರನೇ ಅವಧಿಯಲ್ಲಿ ಲೋಕಸಭಾ ಸದಸ್ಯರಾಗಿರುವ ನಳಿನ್ ಕುಮಾರ್ ಕಟೀಲ್ ಹೆಸರು ಮತ್ತೆ ಮುನ್ನಲೆಯಲ್ಲಿ ಕಾಣಿಸಿಕೊಂಡಿದೆ. ಜತೆಗೆ ಎಂದಿನಂತೆ ಕಾರ್ಯಕರ್ತರ ವಲಯದಲ್ಲಿ ವಿರೋಧವೂ ವ್ಯಕ್ತವಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಅವಧಿಯಲ್ಲಿ ನಳಿನ್ ಕುಮಾರ್ ಕ್ಷೇತ್ರದಲ್ಲಿ ಸಕ್ರಿಯವಾಗಿರಲಿಲ್ಲ. ಅಧ್ಯಕ್ಷ ಅವಧಿ ಮುಕ್ತಾಯವಾದ ಕೂಡಲೇ ಅವರು ಚುರುಕಾಗಿದ್ದಾರೆ. ಕ್ಷೇತ್ರಾದ್ಯಂತ ಬಿರುಸಿನ ಓಡಾಟ ನಡೆಸುತ್ತಿದ್ದಾರೆ. ಕಾರ್ಯಕರ್ತರಿಗೆ ಮತ್ತೆ ಹತ್ತಿರವಾಗುತ್ತಿದ್ದಾರೆ. ಮಾಧ್ಯಮದವರನ್ನೂ ಸೆಳೆಯುತ್ತಿದ್ದಾರೆ. ಬಹುತೇಕ ನಳಿನ್ ಕುಮಾರ್ ಅವರೇ ಮತ್ತೆ ಅಭ್ಯರ್ಥಿ ಆಗುತ್ತಾರೆ ಎಂಬ ಟ್ರೆಂಡ್ ಸೃಷ್ಠಿಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಂಗಳೂರುಗೆ ಇತ್ತೀಚೆಗೆ ಭೇಟಿ ನೀಡಿದ್ದಾಗ ನಳಿನ್ ಕುಮಾರ್ ಅವರನ್ನು ಮತ್ತೆ ಗೆಲ್ಲಿಸಿ ಕಳುಹಿಸಿ ಎಂದು ಹೇಳಿರುವುದು ನಳಿನ್ ಅವರಿಗೆ ಬಲ ನೀಡಿದಂತಾಗಿದೆ. ಆರ್.ಎಸ್.ಎಸ್. ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಮತ್ತೆ ನಳಿನ್ ಕುಮಾರ್ ಅವರನ್ನು ಅಪ್ಪಿಕೊಂಡಿದ್ದಾರೆ, ಒಪ್ಪಿಕೊಂಡಿದ್ದಾರೆ ಎಂಬ ವಿಚಾರವೂ ನಳಿನ್ ಅವರಿಗೆ ಆನೆ ಬಲ ನೀಡಿದಂತಾಗಿದೆ.

ಆರ್.ಎಸ್.ಎಸ್. ಪ್ರಚಾರಕರಾಗಿದ್ದರೂ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರೂ ಅಷ್ಟಾಗಿ ಪ್ರಚಾರದಲ್ಲಿ ಇರದಿದ್ದ ನಳಿನ್ ಕುಮಾರ್ ಕಟೀಲ್ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಅಚ್ಚರಿಯ ಅಭ್ಯರ್ಥಿಯಾಗಲು ಪ್ರಭಾಕರ ಭಟ್ ಅವರೇ ಕಾರಣಕರ್ತರಾಗಿದ್ದರು. ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸತತವಾಗಿ ಜಯಿಸಿ ಕೇಂದ್ರ ಸಚಿವರಾಗಿದ್ದ ವಿ. ಧನಂಜಯ ಕುಮಾರ್ ಅವರಿಗೆ ಖೊಕ್ ನೀಡಿ ಅವರ ಸ್ಥಾನಕ್ಕೆ ಪುತ್ತೂರು ಶಾಸಕರಾಗಿದ್ದ ಡಿ.ವಿ.ಸದಾನಂದ ಗೌಡರವರನ್ನು ತಂದ ಮಾದರಿಯಲ್ಲಿಯೇ ಸದಾನಂದ ಗೌಡರವರನ್ನು ಉಡುಪಿಗೆ ಶಿಫ್ಟ್ ಮಾಡಿ ನಳಿನ್ ಕುಮಾರ್ ಅವರನ್ನು ದ.ಕ. ಸಂಸದರನ್ನಾಗಿಸುವಲ್ಲಿ ಪ್ರಭಾಕರ ಭಟ್ಟರ ಪ್ರಭಾವ ಕೆಲಸ ಮಾಡಿತ್ತು. ನಳಿನ್ ಅವರು ಪ್ರಥಮ ಬಾರಿ ಸಂಸದರಾದಾಗ ಪ್ರಭಾಕರ ಭಟ್ಟರ ಪಟ್ಟದ ಶಿಷ್ಯನಂತಿದ್ದರೂ ನಂತರ ನಳಿನ್ ಕುಮಾರ್ ಅವರು ಆರ್.ಎಸ್.ಎಸ್. ಹಾಗೂ ಬಿಜೆಪಿಯ ಪ್ರಭಾವಿ ಮುಖಂಡ ಬಿ.ಎಲ್. ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಪ್ರಭಾಕರ ಭಟ್ ಮತ್ತು ನಳಿನ್ ಕುಮಾರ್ ಪರಸ್ಪರ ಮುನಿಸಿಕೊಂಡಂತಿದ್ದರು. ಆದರೆ, ಇದೀಗ ಮತ್ತೆ ಗುರು ಶಿಷ್ಯರ ಜೋಡಿ ಒಂದಾಗಿದೆ. ಪ್ರಭಾಕರ ಭಟ್ರು ಹತ್ತಿರ ಆಗಿರುವುದರಿಂದ ನಳಿನ್ ಅವರ ಅದೃಷ್ಟ ಮತ್ತೊಮ್ಮೆ ಖುಲಾಯಿಸುತ್ತದಾ ಕಾದು ನೋಡಬೇಕಿದೆ.

ಪ್ರಮೋಷನ್ ಪಡೆದ ಚೌಟ: ದ.ಕ. ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನಿವೃತ್ತ ಯೋಧ ಬ್ರಿಜೇಶ್ ಚೌಟ ಅವರು ಮಂಗಳೂರು ಕಂಬಳದ ಮೂಲಕ ಪ್ರಸಿದ್ಧರಾದವರು. ಕಳೆದ ಲೋಕಸಭಾ ಚುನಾವಣೆಯ ವೇಳೆಯೂ ನಳಿನ್ ಕುಮಾರ್ ಬದಲು ಬ್ರಿಜೇಶ್ ಚೌಟರನ್ನು ಬಿಜೆಪಿ ಕಣಕ್ಕಳಿಸಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಹೈಕಮಾಂಡ್ ನಳಿನ್ ಅವರಿಗೆ ಮಣೆ ಹಾಕಿತ್ತು. ಇದೀಗ ನಳಿನ್ ಅವರಿಗೆ ಕೆಲವೆಡೆ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಳಿನ್ ಹಠಾವೋ ಚಳುವಳಿ ನಡೆಯುತ್ತಿದೆ. ಅದೇ ಅಭಿಯಾನ ಮುಂದುವರಿದು ಅಭ್ಯರ್ಥಿ ಬದಲಾವಣೆ ಅನಿವಾರ್ಯ ಎಂದಾದರೆ ಬ್ರಿಜೇಶ್ ಚೌಟರ ಹೆಸರು ಅಂತಿಮಗೊಳಿಸಲು ತಂತ್ರ ರೂಪಿಸಲಾಗಿದೆ. ಅದಕ್ಕಾಗಿಯೇ ರಾಜ್ಯ ಬಿಜೆಪಿ ಕಾರ್ಯದರ್ಶಿ ಸ್ಥಾನಕ್ಕೆ ಚೌಟರನ್ನು ನೇಮಕ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೂ ನಳಿನ್ ಕುಮಾರ್ ಅವರಿಗೂ ಅಷ್ಟೇನೂ ಆತ್ಮೀಯತೆ ಇಲ್ಲ. ಅವರಿಬ್ಬರೂ ಪರಸ್ಪರ ದೂರ ದೂರವೇ ಇರುವವರು. ಹಾಗಾಗಿ ಯಡಿಯೂರಪ್ಪರ ಪುತ್ರ ವಿಜಯೇಂದ್ರರ ಬಿಜೆಪಿ ಟೀಂನಲ್ಲಿ ಬ್ರಿಜೇಶ್ ಚೌಟರಿಗೆ ಪ್ರಮೋಶನ್ ನೀಡಿ ನಳಿನ್ ಸ್ಥಾನಕ್ಕೆ ಕರೆ ತರಲು ತೆರೆಮರೆಯ ಪ್ರಯತ್ನ ನಡೆದಿದೆ ಎಂಬ ಮಾತು ಕೇಳಿ ಬರುತ್ತಿದೆ.

ಅರುಣ್ ಶ್ಯಾಮ್ ಅವರಿಗೆ ಸಂಘದ ನಾಯಕರ ಆಶೀರ್ವಾದವೇ ಬಲ : ರಾಜ್ಯ ಸರಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿದ್ದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಪುತ್ತೂರು ಅವರಿಗೆ ಆರ್.ಎಸ್.ಎಸ್. ನಾಯಕರ ಆಶೀರ್ವಾದದ ಬಲ ಇದೆ. ಎಬಿವಿಪಿಯಲ್ಲಿ ಗುರುತಿಸಿಕೊಂಡಿದ್ದ ಅರುಣ್ ಶ್ಯಾಮ್ ಅವರು ಸಂಘ ಪರಿವಾರದಲ್ಲಿ ಸಕ್ರಿಯರಾಗಿದ್ದರೂ ಬಿಜೆಪಿಯಲ್ಲಿ ಅಷ್ಟಾಗಿ ಗುರುತಿಸಿಕೊಂಡವರಲ್ಲ. ಆದರೆ, ಬಿಜೆಪಿ ಅಭ್ಯರ್ಥಿ ಸ್ಥಾನಕ್ಕೆ ಅರುಣ್ ಶ್ಯಾಮ್ ಹೆಸರು ಪ್ರಬಲವಾಗಿ ಕೇಳಿ ಬರಲಾರಂಭಿಸಿದೆ. ಇದಕ್ಕೆ ರಾಜ್ಯದ ಪ್ರಮುಖ ಮಠಗಳ ಸ್ವಾಮೀಜಿಗಳ ಮತ್ತು ಕಲ್ಲಡ್ಕ ಪ್ರಭಾಕರ ಭಟ್, ಬಿ.ಎಲ್.ಸಂತೋಷ್ ಸಹಿತ ಆರ್.ಎಸ್.ಎಸ್. ನಾಯಕರ ಜತೆಗೆ ಅರುಣ್ ಶ್ಯಾಮ್ ಅವರಿಗೆ ಇರುವ ಒಡನಾಟವೂ ಕಾರಣವಾಗಿದೆ.
ಸಂಘ ಪರಿವಾರ ಹಾಗೂ ಬಿಜೆಪಿಯ ನಾಯಕರ ಮತ್ತು ಕಾರ್ಯಕರ್ತರ ವಿರುದ್ಧ ಕೇಸುಗಳಾದಾಗ ಕಾನೂನು ಹೋರಾಟ ನಡೆಸುವವರು ಅರುಣ್ ಶ್ಯಾಮ್ ಅವರು. ಮಠಾಧಿಪತಿಗಳ ವಿರುದ್ಧ ದೂರು ದಾಖಲಾದಾಗಲೂ ಅರುಣ್ ಶ್ಯಾಮ್ ಅವರು ಮುಂಚೂಣಿಯ ನ್ಯಾಯವಾದಿ ಆಗಿರುತ್ತಾರೆ. ಕಾರ್ಯಕರ್ತರ ಜತೆಗೆ ನಿಕಟ ಸಂಪರ್ಕದಲ್ಲಿರುತ್ತಾರೆ. ಪ್ರಮುಖ ಪತ್ರಿಕೆಗಳ ಅಂಕಣಗಾರರೂ ಆಗಿರುವ ಅರುಣ್ ಶ್ಯಾಮ್ ಅವರು ಟಿ.ವಿ. ಮಾಧ್ಯಮಗಳಲ್ಲಿಯೂ ರಾಷ್ಟ್ರೀಯ ವಿಚಾರಧಾರೆಗಳನ್ನು ಸಮರ್ಪಕವಾಗಿ ಮಂಡಿಸುತ್ತಾರೆ. ಅಲ್ಲದೆ ಯುವಕರಾಗಿರುವ ಅರುಣ್ ಶ್ಯಾಮ್ ವೈಯುಕ್ತಿಕ ವರ್ಚಸ್ಸು ಉಳ್ಳವರಾಗಿದ್ದಾರೆ. ವಿಧಾನಸಭೆಯ ಚುನಾವಣೆಯಂತೆ ಲೋಕಸಭಾ ಚುನಾವಣೆಯಲ್ಲಿಯೂ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ವಿರುದ್ಧ ಬ್ಯಾಟ್ ಬೀಸಲು ಮುಂದಾದರೆ ಅದನ್ನು ತಡೆಯಲು ಅರುಣ್ ಶ್ಯಾಮ್ ಸಮರ್ಥರು ಎಂಬ ಅಭಿಪ್ರಾಯ ಪಕ್ಷದಲ್ಲಿ ವ್ಯಕ್ತವಾಗಿದೆ. ಒಟ್ಟಾಗಿ ನಳಿನ್ ಕುಮಾರ್ ಕಟೀಲ್, ಬ್ರಿಜೇಶ್ ಚೌಟ ಮತ್ತು ಅರುಣ್ ಶ್ಯಾಮ್ ಅವರ ಹೆಸರು ಲೋಕಸಭಾ ಚುನಾವಣೆಗೆ ಕೇಳಿ ಬರುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಅಂತಿಮ ಹೆಸರು ಘೋಷಣೆಯಾಗಲಿದೆ. ಈ ಮೂವರಲ್ಲದೆ ನಾಲ್ಕನೇ ವ್ಯಕ್ತಿ ಅಚ್ಚರಿಯ ಅಭ್ಯರ್ಥಿಯಾಗಿ ಆಯ್ಕೆಯಾದರೂ ಆಶ್ಚರ್ಯವೇನಿಲ್ಲ.

ಸಂಚಲನ ಸೃಷ್ಠಿಸಿದ ಡಾ| ಅರುಣ್ ಶ್ಯಾಮ್‌ ಪರ ಡಾಕ್ಟರ್ ಲೆಟರ್!
ಇತ್ತೀಚೆಗಷ್ಟೇ ಪಿ.ಎಚ್.ಡಿ. ಮಾಡಿ ಡಾಕ್ಟರೇಟ್ ಪದವಿ ಪಡೆದಿರುವ ವಕೀಲ ಅರುಣ್ ಶ್ಯಾಮ್ ಪುತ್ತೂರು ಅವರ ಪರ ಪುತ್ತೂರಿನ ಖ್ಯಾತ ಡಾಕ್ಟರ್ ಓರ್ವರು ಹೈಕಮಾಂಡ್ ಗೆ ಲೆಟರ್ ಬರೆದು ಸಂಚಲನ ಸೃಷ್ಠಿಸಿದ್ದಾರೆ!. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಶಾಸಕ ಸಂಜೀವ ಮಠಂದೂರು ಅವರಿಗೆ ಬಿಜೆಪಿ ಟಿಕೆಟ್ ನೀಡಬಾರದು ಎಂದು ಪಕ್ಷದ ಪ್ರಮುಖ ನಾಯಕರಿಗೆ ಪತ್ರ ಬರೆದಿದ್ದ ಡಾ. ಎಂ.ಕೆ.ಪ್ರಸಾದ್ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅರುಣ್ ಶ್ಯಾಮ್ ಅವರಿಗೆ ಅವಕಾಶ ನೀಡುವಂತೆ ಪತ್ರ ಬರೆದಿದ್ದಾರೆ. ಕಟ್ಟರ್ ಹಿಂದುತ್ವವಾದಿಯಾಗಿರುವ ಮತ್ತು ಪಕ್ಷದ ತತ್ವ, ಸಿದ್ಧಾಂತದ ಶಿಸ್ತಿನ ಸಿಪಾಯಿ ಆಗಿರುವ ಡಾ. ಎಂ.ಕೆ. ಪ್ರಸಾದ್ ಅವರು ಶಾಸಕ ಸಂಜೀವ ಮಠಂದೂರು ವಿರುದ್ಧ ಪತ್ರ ಸಮರ ಸಾರಿದ್ದರು. ಕಾರ್ಯಕರ್ತರ ಜತೆ ಬೆರೆಯದವರಿಗೆ ಅವಕಾಶ ನೀಡಬಾರದು ಎಂದು ಡಾ. ಎಂ.ಕೆ. ಪ್ರಸಾದ್ ಅವರು ವರಿಷ್ಠರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು.

ಡಾ. ಪ್ರಸಾದ್ ಅವರ ಪತ್ರದ ಪ್ರಭಾವವೋ ಅಥವಾ ಬೇರೆ ಇತರ ಕಾರಣವೋ ಎಂಬುದು ಇದುವರೆಗೆ ಬಹಿರಂಗ ಆಗಿಲ್ಲವಾದರೂ ಸಂಜೀವ ಮಠಂದೂರು ಅವರಿಗೆ ಟಿಕೆಟ್ ತಪ್ಪಿತ್ತು. ಮಠಂದೂರು ಬದಲು ಜಿ.ಪಂ. ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪರಿಗೆ ಪಕ್ಷ ಅವಕಾಶ ಕಲ್ಪಿಸಿತ್ತು. ಸದಾ ಯುವಕರ ಪರ ನಿಲ್ಲುವ ಡಾ. ಎಂ.ಕೆ. ಪ್ರಸಾದ್ ಅವರು ಆಶಾ ತಿಮ್ಮಪ್ಪ ಪರ ಪ್ರಬಲವಾಗಿ ನಿಂತಿದ್ದರು. ಗೆಲುವಿಗಾಗಿ ಪ್ರಯತ್ನಿಸಿದ್ದರು. ಆದರೆ ಪುತ್ತೂರಿನಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಸೋಲನ್ನು ಸಮಚಿತ್ತದಿಂದ ಸ್ವೀಕರಿಸಿದ್ದ ಡಾ. ಪ್ರಸಾದ್ ಅವರು ಜನರ ತೀರ್ಪಿಗೆ ತಲೆ ಬಾಗುವುದಾಗಿ ಹೇಳಿಕೆ ನೀಡಿ ಮಾದರಿಯಾಗಿದ್ದರು. ಮುಂದೆ ಯುವಕರು ಪಕ್ಷ ಕಟ್ಟಬೇಕು ಎಂದು ಹೇಳಿ ಆದರ್ಶವಾಗಿದ್ದರು. ಅದರಂತೆ ಇದೀಗ ಯುವಕರಿಗೆ ಅವಕಾಶ ನೀಡಬೇಕು, ಅದರಲ್ಲಿಯೂ ಯುವಕರು ಕಷ್ಟದಲ್ಲಿ ಸಿಲುಕಿದಾಗ ಅವರ ಬೆಂಬಲಕ್ಕೆ ನಿಲ್ಲುವವರಿಗೆ ಅವಕಾಶ ನೀಡಬೇಕು. ಹಾಗಾಗಿ ಅರುಣ್ ಶ್ಯಾಮ್ ಅವರಿಗೆ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಡಾ. ಎಂ.ಕೆ.ಪ್ರಸಾದ್ ಅವರು ವರಿಷ್ಠರಿಗೆ ಪತ್ರ ಬರೆದಿರುವುದಾಗಿ ಮಾಹಿತಿ ಲಭ್ಯವಾಗಿದೆ. ಈ ಮಧ್ಯೆ ಲೋಕಸಭಾ ಚುನಾವಣೆಗೆ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ ಮಾಡಬೇಕೇ ಬೇಡವೇ ಎಂದು ಕೆಲವೇ ದಿನದಲ್ಲಿ ಪುತ್ತಿಲ ಪರಿವಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here