ಮಕ್ಕಳಿಗೆ ಬೇಡವಾದ ಅಮ್ಮ ಅನಾಥಶ್ರಮದಲ್ಲಿ ನಿಧನ

0

ಉಪ್ಪಿನಂಗಡಿ: ಏಳು ಮಕ್ಕಳನ್ನು ಹೆತ್ತು- ಹೊತ್ತು, ಸಾಕಿ ಸಲಹಿದರೂ, ಕೊನೆಗೂ ಮಕ್ಕಳಿಗೆ ಬೇಡವಾಗಿ ಅನಾಥಾಶ್ರಮ ಸೇರಿದ್ದ 90ರ ಆಸುಪಾಸಿನ ವೃದ್ಧೆಯೋರ್ವರು ಆದಿತ್ಯವಾರದಂದು ನಿಧನರಾಗಿದ್ದು, ಹೆತ್ತಮ್ಮನ ಪ್ರಾರ್ಥಿವ ಶರೀರವನ್ನು ಅಂತ್ಯಸಂಸ್ಕಾರಕ್ಕೆ ಒಳಪಡಿಸಲಾದರೂ ಮಕ್ಕಳು ಆಗಮಿಸಬಹುದೆಂಬ ನಿರೀಕ್ಷೆಯೂ ಸುಳ್ಳಾದಾಗ ಅನಾಥಾಶ್ರಮದವರೇ ಇವರ ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ನಡೆದಿದೆ.


ಇವರು ಲಕ್ಷ್ಮೀ ಹೆಗ್ಡೆ. ಉಪ್ಪಿನಂಗಡಿ ಸಮೀಪದ ಇಳಂತಿಲದಲ್ಲಿ ಸ್ವಂತ ಮನೆಯನ್ನು ಹೊಂದಿದ್ದರು. ವೃದ್ದಾಪ್ಯದಲ್ಲಿ ಜನ್ಮಪಡೆದ ಮಕ್ಕಳಿಗೆ ಬೇಡವಾಗಿ ಅಸಹಾಯಕತೆಗೆ ಸಿಲುಕಿದ ಈಕೆ ನ್ಯಾಯ ಬಯಸಿ ಅಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಮಕ್ಕಳನ್ನು ಕರೆದು ಹೆತ್ತಮ್ಮನ ರಕ್ಷಣೆಯ ಕರ್ತವ್ಯ ನಿರ್ವಹಿಸಿ ಎಂದು ಮಕ್ಕಳಿಗೆ ಸೂಚಿಸಿದಾಗ ಮಕ್ಕಳಿಂದ ಅಸಹಕಾರ ವ್ಯಕ್ತವಾಗಿತ್ತು. ಠಾಣೆಯಲ್ಲಿ ಕಣ್ಣೀರು ಸುರಿಸಿ ಆಸರೆಗಾಗಿ ಯಾಚಿಸುತ್ತಿದ್ದ ವೃದ್ದೆಯನ್ನು ಕಂಡು ಅಂದಿನ ಠಾಣಾಧಿಕಾರಿ ನಂದ ಕುಮಾರ್ ವೃದ್ಧೆಯನ್ನು ಕನ್ಯಾನದ ಭಾರತ್ ಸೇವಾಶ್ರಮಕ್ಕೆ ಸೇರಿಸಿದ್ದರು. ವೃದ್ದೆಗೆ ಮಗನ ಸ್ಥಾನದಲ್ಲಿ ನಿಂತು ಅನುಕೂಲವಾದಾಗಲೆಲ್ಲಾ ಆಶ್ರಮಕ್ಕೆ ಭೇಟಿ ಕೊಟ್ಟು ಯೋಗಕ್ಷೇಮ ವಿಚಾರಿಸುತ್ತಿದ್ದರು.
ಕನ್ಯಾನದ ಆಶ್ರಮದಲ್ಲಿ ಒದಗಿಸಲಾದ ಉಪಚಾರದಿಂದ ಚೆನ್ನಾಗಿಯೇ ಇದ್ದ ಲಕ್ಷ್ಮೀ ಹೆಗ್ಡೆರವರು ಆದಿತ್ಯವಾರ ಹೃದಯಾಘಾತಕ್ಕೀಡಾಗಿ ನಿಧನರಾದರು. ಎಂದಿನಂತೆಯೇ ಆಶ್ರಮಕ್ಕೆ ಸೇರಿದಾಗ ನೀಡಲಾದ ಸಂಬಂಧಿಕರ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಶವದ ಅಂತ್ಯವಿಧಿ ನೆರವೇರಿಸಲು ಬನ್ನಿ ಅಥವಾ ಶವವನ್ನು ತೆಗೆದುಕೊಂಡು ಹೋಗಿ ಎಂಬ ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದನೆ ದೊರೆಯದೇ ಇದ್ದಾಗ ಅವರ ಬಗ್ಗೆ ಕಾಳಜಿ ವಹಿಸಿದ್ದ ಪೊಲೀಸ್ ಅಧಿಕಾರಿಯವರನ್ನು ಸಂಪರ್ಕಿಸಲಾಯಿತು. ದುರಾದೃಷ್ಠಾವಶಾತ್ ಕರ್ತವ್ಯದ ಕಾರಣಕ್ಕೆ ದೂರದಲ್ಲಿದ್ದ ನಂದಕುಮಾರ್ ರವರಿಗೆ ಸಕಾಲದಲ್ಲಿ ಆಗಮಿಸಲು ಅಸಾಧ್ಯವಾಗಿತ್ತು. ಈ ಮಧ್ಯೆ ಆಶ್ರಮದ ಕ್ರಮದಂತೆ ಮೃತರ ಅಂತ್ಯವಿಧಿಯನ್ನು ಅಲ್ಲಿಯೇ ನೆರವೇರಿಸಲಾಯಿತು.


ಒಟ್ಟು ವಿದ್ಯಾಮಾನವು ಕರುಣಾಜಕವಾಗಿದ್ದು, ಲಕ್ಷ್ಮಿ ಹೆಗ್ಡೆ ಯವರ ಸ್ಥಿತಿ ಯಾವ ವ್ಯಕ್ತಿಗೂ ಬಾರದಿರಲಿ. ಪ್ರಕರಣದಲ್ಲಿ ಮಕ್ಕಳ ಕರ್ತವ್ಯ ಲೋಪ ಪ್ರಮುಖವಾಗಿ ಗೋಚರಿಸುತ್ತಿದ್ದರೂ, ತಾನೇ ಜನ್ಮವಿತ್ತ ಮಕ್ಕಳಿಗೂ ತಾನು ಬೇಡವಾಗುವಂತೆ ಹಿರಿಯರು ವರ್ತಿಸಬಾರದೆನ್ನುವ ಸತ್ಯವೂ ಇದರೊಳಗೆ ಅಡಕವಾಗಿದೆ. ಇಳಿ ವಯಸ್ಸಿನಲ್ಲಿ ತಾರುಣ್ಯದ ರೀತಿ ಅಧಿಕಾರ ಚಲಾಯಿಸುವ ಹಂಬಲವನ್ನು ಕೈಬಿಟ್ಟು , ಮನೆ ಮಕ್ಕಳ ಮಾತು ಕೇಳುತ್ತಾ ಹಿತ ನುಡಿಗಳನ್ನಾಡುತ್ತಾ ಮನೆ ಮಕ್ಕಳಿಗೆ ಇವರು ನಮ್ಮವರೆಂಬ ಭಾವ ಮೂಡುವಂತೆ ನಮ್ಮ ವರ್ತನೆ ಇರಬೇಕು. ಅಂತೆಯೇ ಹೆತ್ತವರ ಅಥವಾ ಹಿರಿ ಜೀವಗಳ ರಕ್ಷಣೆ ಪೋಷಣೆಯಲ್ಲೇ ದೇವರನ್ನು ಕಾಣುವ ಭಾರತೀಯ ಜೀವನ ಸಂಸ್ಕಾರವನ್ನು ಮೈಗೂಡಿಸಿಕೊಂಡು, ಇಳಿ ವಯಸ್ಸಿನಲ್ಲಿ ಹಿರಿಯರ ಮನಸ್ಸಗಳು ಮಕ್ಕಳಂತಿರುವುದು ಎಂಬ ಸತ್ಯವನ್ನರಿತು ಹಿರಿಯರನ್ನು ಸಹಿಸಿಕೊಳ್ಳುವ ಗುಣ ಹಾಗೂ ನಾವೆಲ್ಲರೂ ಇಳಿ ವಯಸ್ಸಿಗೆ ಕಾಲಿಡಲಿದ್ದೇವೆ ಎನ್ನುವ ಸತ್ಯ ಅರಿತುಕೊಳ್ಳುವ ಅಗತ್ಯತೆ ಲಕ್ಷ್ಮೀ ಹೆಗ್ಡೆ ಪ್ರಕರಣದಿಂದ ಅನಾವರಣವಾಗಿದೆ.

LEAVE A REPLY

Please enter your comment!
Please enter your name here