ಆಲಂಕಾರು ಗ್ರಾಮ ಸಮಿತಿ ಸಮಗ್ರ ಚಾಂಪಿಯನ್, ಹಳೆನೇರೆಂಕಿ ದ್ವಿತೀಯ
ಕಡಬ: ಒಕ್ಕಲಿಗ ಗೌಡ ಸೇವಾ ಸಂಘ ಆಲಂಕಾರು ಗ್ರಾಮ ಸಮಿತಿ ಆತಿಥ್ಯದಲ್ಲಿ ಆಲಂಕಾರು ಶ್ರೀ ದುರ್ಗಾಂಬಾ ಮೈದಾನದಲ್ಲಿ ನಡೆದ ಒಕ್ಕಲಿಗ ಗೌಡ ಸೇವಾ ಸಂಘ ಆಲಂಕಾರು ವಲಯ ಇದರ ‘ಕ್ರೀಡಾಸಂಭ್ರಮ 2023-24’ ಇದರ ಸಮಾರೋಪ ಸಮಾರಂಭ ಜ.7ರಂದು ಸಂಜೆ ನಡೆಯಿತು.
ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಸುರುಳಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿದ್ದ ಯುವ ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕು ಅಧ್ಯಕ್ಷ ಪೂರ್ಣೇಶ್ ಬಲ್ಯ, ಶ್ರೀ ಕ್ಷೇತ್ರ ಶರವೂರು ಇಲ್ಲಿನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ದಾಮೋದರ ಗೌಡ ಕಕ್ವೆ, ಪ್ರಗತಿಪರ ಕೃಷಿಕ ಪ್ರವೀಣ್ ಕುಂಟ್ಯಾನ, ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸಂಘದ ಗೌರವಾಧ್ಯಕ್ಷ ಚಕ್ರಪಾಣಿ ಬಾಕಿಲ, ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆದ್ದೊಟ್ಟೆ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ಕಡಬ ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯದರ್ಶಿ ಸುದೀಶ್ ಪಟ್ಟೆ, ಆಲಂಕಾರು ವಲಯ ಮಹಿಳಾ ಸಮಿತಿ ಅಧ್ಯಕ್ಷೆ ಜಯಶ್ರೀ ಅಶೋಕ ಗೌಡ ಪಜ್ಜಡ್ಕ, ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕು ಸಮಿತಿ ಉಪಾಧ್ಯಕ್ಷ ದಯಾನಂದ ಗೌಡ ಆಲಡ್ಕ, ಆಲಂಕಾರು ಗ್ರಾ.ಪಂ.ಅಧ್ಯಕ್ಷೆ ಸುಶೀಲ ಶೀನಪ್ಪ ಗೌಡ ಕೊಂಡಾಡಿ, ರಾಮಕುಂಜ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಶಾಂತ್ ಆರ್.ಕೆ.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ರಾಮಣ್ಣ ಗೌಡ ದೋಳ ಸ್ವಾಗತಿಸಿ, ಕೋಶಾಧಿಕಾರಿ ಆನಂದ ಗೌಡ ಪಜ್ಜಡ್ಕ ವಂದಿಸಿದರು. ಶಿಕ್ಷಕ ಪ್ರದೀಪ್ ಬಾಕಿಲ ಕಾರ್ಯಕ್ರಮ ನಿರೂಪಿಸಿದರು.
ಆಲಂಕಾರು ಪ್ರಥಮ, ಹಳೆನೇರೆಂಕಿ ದ್ವಿತೀಯ:
ಕ್ರೀಡಾ ಸಂಭ್ರಮದಲ್ಲಿ ಆಲಂಕಾರು ವಲಯದ ಆಲಂಕಾರು, ಕೊಯಿಲ, ರಾಮಕುಂಜ, ಹಳೆನೇರೆಂಕಿ, ಕುಂತೂರು, ಪೆರಾಬೆ ಗ್ರಾಮ ಸಮಿತಿಯ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಅತಿಥೇಯ ಆಲಂಕಾರು ಗ್ರಾಮ ಸಮಿತಿ ಸಮಗ್ರ ಚಾಂಪಿಯನ್ ಶಿಪ್ ಪಡೆದುಕೊಂಡಿದೆ. ಹಳೆನೇರೆಂಕಿ ಗ್ರಾಮ ಸಮಿತಿ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದೆ. ಕ್ರೀಡಾಕೂಟದಲ್ಲಿ 6 ವರ್ಷದ ಕೆಳಗಿನ ಅಂಗನವಾಡಿಯ ಮಕ್ಕಳಿಗೆ ಕಪ್ಪೆ ಜಿಗಿತ, ಕಲರ್ ಬಾಕ್ಸ್ ಹೆಕ್ಕುವುದು, 1ರಿಂದ 4ನೇ ತರಗತಿಯ ಮಕ್ಕಳಿಗೆ 100 ಮೀ.ಓಟ ಮತ್ತು ಬಕೆಟ್‌ಗೆ ಬಾಲ್ ಹಾಕುವುದು, 5ರಿಂದ 7ನೇ ತರಗತಿಯ ಮಕ್ಕಳಿಗೆ 200 ಮೀ.ಓಟ ಮತ್ತು ಶಟಲ್ ರಿಲೆ(4ಜನ), 8ರಿಂದ 10ನೇ ತರಗತಿ ಮಕ್ಕಳಿಗೆ 100 ಮೀ. ಹಾಗೂ 200 ಮೀ.ಓಟ ಸ್ಪರ್ಧೆ ಹುಡುಗರು ಹಾಗೂ ಹುಡುಗಿಯರಿಗೆ ಪ್ರತ್ಯೇಕವಾಗಿ ನಡೆಯಿತು. ಮಹಿಳೆಯರಿಗೆ ಹಗ್ಗಜಗ್ಗಾಟ, ತ್ರೋಬಾಲ್, ಕಬಡ್ಡಿ, ಪುರುಷರಿಗೆ ಹಗ್ಗಜಗ್ಗಾಟ, ವಾಲಿಬಾಲ್, ಕಬಡ್ಡಿ ಪಂದ್ಯಾಟ, 45 ರಿಂದ 60ವರ್ಷದ ಪುರುಷರಿಗೆ ಮತ್ತು ಮಹಿಳೆಯರಿಗೆ ವೇಗದ ನಡಿಗೆ, ಗುಂಡು ಎಸೆತ, ೬೦ವರ್ಷ ಮೇಲ್ಪಟ್ಟ ಪುರುಷರಿಗೆ ಮತ್ತು ಮಹಿಳೆಯರಿಗೆ ವೇಗದ ನಡಿಗೆ, ಗುಂಡು ಎಸೆತ ಸ್ಪರ್ಧೆ ನಡೆಯಿತು.