ಕಡಬ: ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಿಂದ ಹಿರಿಯ ನಾಗರಿಕರೋರ್ವರನ್ನು ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಮಾರ್ಗ ಮಧ್ಯೆ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಡಬ ಪೊಲೀಸರು ಸಂತ್ರಸ್ತ ಹಿರಿಯ ನಾಗರಿಕನ ಮನೆಗೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಕಡಬ ತಾಲೂಕಿನ ಕಲ್ಲುಗುಡ್ಡೆಯಿಂದ ಕಾಂಚನಕ್ಕೆ ತೆರಳಲು ಶನಿವಾರ ಕೆಎಸ್‌ಆರ್‌ಟಿಸಿ ಬಸ್ ಏರಿದ್ದ ನೂಜಿಬಾಳ್ತಿಲದ ಬಾಬು ಗೌಡ ಎಂಬವರು ಟಿಕೆಟ್ ಪಡೆದುಕೊಳ್ಳಲೆಂದು 200 ರೂ. ನೋಟು ನೀಡಿದ್ದು, ಈ ವೇಳೆ ಚಿಲ್ಲರೆ ಇಲ್ಲ ಎಂದು ಬಸ್ ನಿರ್ವಾಹಕ ಗೋಳಿಯಡ್ಕ ಎಂಬಲ್ಲಿ ಬಾಬು ಗೌಡರನ್ನು ಬಸ್‌ನಿಂದ ಕೆಳಗಿಳಿಸಿದ್ದರೆಂದು ಆರೋಪ ವ್ಯಕ್ತವಾಗಿತ್ತು. ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಘಟನೆಗೆ ಸಂಬಂಧಿಸಿ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಈ ಹಿನ್ನಲೆಯಲ್ಲಿ ಕಡಬ ಪೊಲೀಸ್ ಠಾಣಾ ತನಿಖಾ ಉಪನಿರೀಕ್ಷಕ ಅಕ್ಷಯ ಡವಗಿ, ಸಿಬ್ಬಂದಿಗಳಾದ ಭವಿತ್ ರೈ, ವಿನೋದ್ ಅವರು ಬಾಬು ಗೌಡರ ಮನೆಗೆ ಭೇಟಿ ನೀಡಿ ಘಟನೆಯ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.
ಘಟನೆಯ ಬಗ್ಗೆ ಬಾಬು ಗೌಡ ಅವರು ಈಗಾಗಲೇ ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದು, ಅಲ್ಲಿಂದ ಕೆಎಸ್‌ಆರ್‌ಟಿಸಿಗೆ ದೂರು ಸಲ್ಲಿಕೆಯಾಗಲಿದೆ ಎನ್ನಲಾಗಿದೆ. ಪೊಲೀಸರು ಕೂಡ ಪಡೆದ ಮಾಹಿತಿಯನ್ನು ಕೆಎಸ್‌ಆರ್‌ಟಿಸಿಗೆ ಸಲ್ಲಿಸುವುದಾಗಿ ಮಾಹಿತಿ ನೀಡಿದ್ದಾರೆ. ಚಿಲ್ಲರೆ ಇಲ್ಲ ಎಂಬ ಕಾರಣಕ್ಕಾಗಿ ಬಸ್ ನಿರ್ವಾಹಕ ತನ್ನನ್ನು ಬಸ್‌ನಿಂದ ಅರ್ಧದಲ್ಲಿ ಇಳಿಸಿದ್ದ ಎಂದು ಬಾಬು ಗೌಡ ಅವರು ಅಧಿಕಾರಿಗಳ ಮುಂದೆ ಆರೋಪಿಸಿದ್ದಾರೆ.