ಟಿ.ಸಿ ಅಳವಡಿಕೆ, ತಂತಿ ಬದಲಾವಣೆ, ತಂತಿಮೇಲೆರಗಿದ ಅಪಾಯದ ಮರಗಳ ತೆರವು ಸಹಿತ 24 ಪೋನ್ ಮೂಲಕ ಮತ್ತು ಸಭೆಗೆ ಆಗಮಿಸಿದವರಿಂದ 2 ಸೇರಿ ಒಟ್ಟು 26 ದೂರುಗಳು ಪುತ್ತೂರು ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಗ್ರಾಹಕರಿಂದ ಬಂದಿದೆ.
ಮಂಗಳುರು ವಿದ್ಯುತ್ ಸರಬರಾಜು ಕಂಪೆನಿ(ಮೆಸ್ಕಾಂ) ವತಿಯಿಂದ ಜ.11ರಂದು ಬನ್ನೂರು ಮೆಸ್ಕಾಂ ಕಚೇರಿಯಲ್ಲಿ ಸಾರ್ವಜನಿಕ ಜನಸಂಪರ್ಕ ಸಭೆಯು ಮೆಸ್ಕಾಂ ಕಾರ್ಯಪಾಲಕ ಅಭಿಯಂತರ ರಾಮಚಂದ್ರ ಎಂ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮೇಲಾಧಿಕಾರಿಗಳು ವಿ.ಸಿ ಮೂಲಕ ಸಭೆಯನ್ನು ಆಲಿಸುತ್ತಿದ್ದು, ಬಹುತೇಕ ಗ್ರಾಹಕರು ಪೋನ್ ಮೂಲಕವೇ ತಮ್ಮ ಭಾಗದ ವಿದ್ಯುತ್ ಸಮಸ್ಯೆಗಳನ್ನು ತಿಳಿಸಿದರು. ಕಲಿಯುಗ ಸೇವಾ ಸಮಿತಿಯ ಸಂಪತ್ ಕುಮಾರ್ ಜೈನ್ ಮತ್ತು ಸುರೇಂದ್ರ ಅವರು ಸಭೆಗೆ ಆಗಮಿಸಿ ಚಿಕ್ಕಮುಡ್ನೂರು ಗ್ರಾಮದ ಮೂಡಾಯೂರಿನಲ್ಲಿ ವಿದ್ಯುತ್ ತಂತಿಗಳಿಗೆ ತಾಗುವ ಗೆಲ್ಲುಗಳನ್ನು ತೆರವು ಮಾಡಿದರೂ ಗೆಲ್ಲನ್ನು ರಸ್ತೆಯಲ್ಲೇ ಬಿಟ್ಟು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಚಿಕ್ಕಮುಡ್ನೂರು ಗ್ರಾಮದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬದಲಾವಣೆ ಮಾಡುವ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಈ ಹಿಂದೆ ದೂರು ನೀಡಿದ್ದೇನೆ. ಆದರೆ ಅಲ್ಲಿ ಕಂಬ ಅಳವಡಿಸಲಾಗಿದೆ ಎಂದು ಪ್ರಸ್ತಾಪಿಸಿದರು. ಉತ್ತರಿಸಿದ ಮೆಸ್ಕಾಂ ಅಧಿಕಾರಿಗಳು ಕಂಬ ಹಾಕಿದ್ದು ಮೆಸ್ಕಾಂನಿಂದಲ್ಲ ಮತ್ತು ಆ ಕಂಬಕ್ಕೆ ಲಿಂಕ್ ಕೂಡ ನಾವು ಕೊಡುವುದಿಲ್ಲ ಎಂದರು. ಕೆರೆಮೂಲೆ ಅಪಾಯಕಾರಿ ಮರ ತೆರವು ಕುರಿತ ದೂರಿಗೆ ಸಂಬಂಧಿಸಿ ಅರಣ್ಯ ಇಲಾಖೆಗೆ ತಿಳಿಸುತ್ತೇವೆ ಎಂದರು. ಈ ನಡುವೆ ಅರಿಯಡ್ಕ, ನರಿಮೊಗರು ಕಡೆಗಳಿಂದ ದೂರವಾಣಿ ಮೂಲಕ ದೂರುಗಳು ಬರುತ್ತಿದ್ದು, ಅರಿಯಡ್ಕದಿಂದ ಹೆಚ್ಚುವರಿ ಟಿ.ಸಿ ಅಳವಡಿಕೆಗೆ ದೂರವಾಣಿ ಮೂಲಕ ಗ್ರಾಹಕರೊಬ್ಬರು ಮನವಿ ಮಾಡಿದರು. ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ, ಗ್ರಾಮಾಂತರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಶಂಕರ, ಸವಣೂರು ಶಾಖೆಯ ರಾಜೇಶ್ ಕುಮಾರ್ ಕೆ.ವಿ, ಈಶ್ವರಮಂಗಲ ಶಾಖೆಯ ರಮೇಶ್ ಕೆ, ಬೆಟ್ಟಂಪಾಡಿ ಶಾಖೆಯ ಪುತ್ತು ಜೆ, ಕುಂಬ್ರ ಶಾಖೆಯ ರವೀಂದ್ರ, ಪುತ್ತೂರು ಶಾಖೆಯ ರಾಜೇಶ್ ಕೆ, ಬನ್ನೂರು ಶಾಖೆಯ ವೀರನಾಯ್ಕ ಡಿ, ಪುತ್ತೂರು ಶಾಖೆಯ ಗುರುದೇವಿ ಮುತ್ತಣ್ಣವರ, ಸಹಾಯಕ ಲೆಕ್ಕಾಧಿಕಾರಿ ಸುಷ್ಮಾ ಕೆ ಸಭೆಯಲ್ಲಿ ಉಪಸ್ಥಿತರಿದ್ದು, ಗ್ರಾಹಕರ ದೂರುಗಳನ್ನು ಸ್ವೀಕರಿಸಿ ಮಾಹಿತಿ ನೀಡಿದರು.