ಮಂಗಳೂರು: ಸರಕಾರಿ ಜಾಗದಲ್ಲಿ ಅಥವಾ ಬೇರೆ ಯಾವುದೇ ಜಾಗದಲ್ಲಿ ಮನೆ ಮಾಡಿಕೊಂಡು ವಾಸ್ತವ್ಯ ಇರುವ ಕುಟುಂಬಗಳಿಗೆ ಮನೆ ದಾಖಲೆ ಇಲ್ಲ ಎಂದು ಗ್ರಾಪಂ ಗಳು ಕುಡಿಯುವ ನೀರಿನ ಸಂಪರ್ಕ ನೀಡುತ್ತಿಲ್ಲ. ಇದು ತಪ್ಪು ಕುಡಿಯುವ ನೀರು ಎಲ್ಲರಿಗೂ ಕೊಡಬೇಕು, ಕುಡಿಯುವ ನೀರಿಗೆ ದಾಖಲೆ ಕೇಳಬಾರದು ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ಜಿಲ್ಲಾ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಆಗ್ರಹಿಸಿದ್ದಾರೆ.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕರು ಮನೆಗೆ ಡೋರ್ ನಂಬರ್ ಇಲ್ಲದಿದ್ರೆ ಕುಡಿಯುವ ನೀರು ಕೊಡಲು ಸಾಧ್ಯವಿಲ್ಲ ಎಂದು ಗ್ರಾಪಂ ಪಿಡಿಒಗಳು ಹೇಳುತ್ತಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲೂ ಈ ರೀತಿ ಅನೇಕ ಪ್ರಕರಣಗಳಿವೆ. 94ಸಿ ಮತ್ತು 94ಸಿಸಿಗೆ ಅರ್ಜಿ ಹಾಕಿದ ಅನೇಕ ಕುಟುಂಬಗಳಿಗೆ ಈ ಸಮಸ್ಯೆ ಇದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ದಾಖಲೆ ಕೇಳಬಾರದು. ಕುಡಿಯುವ ನೀರು ಮೂಲಭೂತ ಸೌಕರ್ಯಗಳಲ್ಲಿ ಸೇರಿಕೊಂಡಿದೆ. ಕುಡಿಯುವ ನೀರಿಲ್ಲದೆ ಜನ ಬದುಕಲು ಸಾಧ್ಯವಿಲ್ಲ. ನೀರಿನ ಬೇಡಿಕೆಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಕುಡಿಯುವ ನೀರು ಕೊಡಲೇ ಬೇಕು ಎಂದು ಶಾಸಕರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅನಧಿಕೃತ ಮನೆಗಳಿಗೆ ಅಥವಾ ದಾಖಲೆ ಇಲ್ಲದ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ನೀಡುವ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದು ಕುಡಿಯುವ ನೀರು ಎಲ್ಲರಿಗೂ ನೀಡುವಂತೆ ಕಾನೂನು ಮಾರ್ಪಾಟು ಮಾಡಬೇಕಾಗಿದೆ ಎಂದು ಹೇಳಿದರು.