ಪುತ್ತೂರು: ಆರಂಭದ ಒಂದು ಮಳೆಗೇ ಕೊಡೆ ಹರಿದಂತೆ ಎಂಬ ಗಾದೆ ಮಾತಿನಂತೆ ಶಾಸಕರಾಗಿ ಮೊದಲ ಅರ್ಧ ವರ್ಷದಲ್ಲಿಯೇ, ಈ ಹಿಂದಿನ ಶಾಸಕರು ತಂದಿರುವ ಅನುದಾನದ ಕಾಮಗಾರಿಗಳಿಗೆ ಶಿಲಾನ್ಯಾಸವಾಗಿ ಕೆಲಸ ಪ್ರಗತಿಯಲ್ಲಿರುವಾಗಲೇ ಹಾಲಿ ಶಾಸಕರು ಮತ್ತೊಮ್ಮೆ ಶಂಕುಸ್ಥಾಪನೆ ಮಾಡುತ್ತಾ ನಗೆಪಾಟಲಿಗೀಡಾಗಿರುವುದಲ್ಲದೆ, ಸುಳ್ಳು ಮಾಹಿತಿ ನೀಡುವುದು ಶಾಸಕರ ಘನತೆಗೆ ತಕ್ಕುದಲ್ಲ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಹೇಳಿದರು.
ಪುತ್ತೂರು ಬಿಜೆಪಿ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತಾನಾಡಿದರು. ಉಪ್ಪಿನಂಗಡಿಯ ದ್ವಿಪಥ ರಸ್ತೆಯಾಗಿರಲಿ, ಬೆಳಿಯೂರುಕಟ್ಟೆ-ಸಾಜ-ಕುದ್ದುಪದವು ರಸ್ತೆಯ ಕಾಮಗಾರಿಯಾಗಿರಲಿ ಪ್ರಸ್ತುತ ಕ್ಷೇತ್ರದಾದ್ಯಂತ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳೆಲ್ಲವೂ ಹಿಂದಿನ ಬಿಜೆಪಿ ಸರಕಾರ ಇರುವಾಗ ಬಂದಿರುವ ಅನುದಾನದಲ್ಲಿ ನಡೆಯುತ್ತಿರುವುದು. ಆದರೂ ಹಾಲಿ ಶಾಸಕರು ಹೋದಲ್ಲೆಲ್ಲ ಮಾಜಿ ಶಾಸಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು, ಮತ್ತು ಜನರಿಗೆ ಸುಳ್ಳು ಮಾಹಿತಿಯನ್ನು ನೀಡುವುದು, ನಿಮ್ಮ ಘನತೆಗೆ ತಕ್ಕುದಲ್ಲ ಎಂದು ಹೇಳಿದರು. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯಂಗವಾಗಿ ಜನವರಿ 14ರಿಂದ 21ರ ವರೆಗೆ ದೇವಸ್ಥಾನ, ದೈವಸ್ಥಾನ, ಮಠ ಮಂದಿರಗಳ ಸ್ವಚ್ಛತೆಯಲ್ಲಿ ಕಾರ್ಯಕರ್ತರು,ಪದಾಧಿಕಾರಿಗಳು ಭಾಗವಹಿಸಬೇಕು ಎಂದು ಸಾಜ ಕರೆ ನೀಡಿದರು. ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಬಿ.ಎಲ್.ಎ ಹರೀಶ್ ಬಿಜತ್ರೆ, ಪದಾಧಿಕಾರಿಗಳಾದ ಮುಕುಂದ ಬಜತ್ತೂರು, ಅರುಣ್ ವಿಟ್ಲ, ಮೀನಾಕ್ಷಿ ಮಂಜುನಾಥ್, ಉಷಾ ಮುಳಿಯ, ವಿಜಯ ಕೋರಂಗ, ರಮೇಶ್ ಭಟ್, ರಮಣಿ ಗಾಣಿಗ, ಲೋಹಿತ್ ಅಮ್ಚಿನಡ್ಕ, ವಿವಿಧ ಮೋರ್ಚಾಗಳ ಅಧ್ಯಕ್ಷ ಕಾರ್ಯದರ್ಶಿಗಳಾದ ಯಶಸ್ವಿನಿ ಶಾಸಿ, ಯಶೋಧ ಗೌಡ, ಸುರೇಶ್ ಕಣ್ಣರಾಯ, ಪುನೀತ್ ಮಾಡತ್ತಾರು, ನವೀನ್ ಪಡ್ನೂರು, ಸುನೀಲ್ ದಡ್ಡು, ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿಗಳಾದ ಸುರೇಶ್ ಅತ್ರಮಜಲು, ದಯಾನಂದ ಶೆಟ್ಟಿ ಉಜ್ರೆಮಾರು ಮೊದಲಾದವರು ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮಂಗ್ಲಿಮನೆ ವಂದಸಿದರು.