ಪುತ್ತೂರು: ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಗ್ರಾಮದ ಕುಳದಪಾರೆಯ ಕುಳ ತರವಾಡು ಮನೆಯಲ್ಲಿ ಜನವರಿ 26, 27 ಮತ್ತು 28ರಂದು ಮಹಾದೈವ ಶ್ರೀ ವಿಷ್ಣುಮೂರ್ತಿ, ಧರ್ಮದೈವ ಪ್ಲಾವಡ್ಕತ್ತಾಯ, ಶ್ರೀ ಹುಲಿಭೂತ, ವರ್ಣರ ಪಂಜುರ್ಲಿ, ಮುಕಾಂಬಿಕಾ ಗುಳಿಗ, ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ದೈವಂಕೆಟ್ಟ್ ಮಹೋತ್ಸವ ನಡೆಯಲಿದೆ.
ಸುಮಾರು 75 ವರ್ಷಗಳ ಹಿಂದೆ ದೈವಂಕೆಟ್ಟ್ ಮಹೋತ್ಸವ ನೆರವೇರಿಸಲಾಗಿದ್ದು ಇದೀಗ ಇಂದಿನ ಕುಟುಂಬಸ್ಥರು ಶ್ರೀ ದೈವಗಳ ದೈವಂಕೆಟ್ಟ್ ಮಹೋತ್ಸವವನ್ನು ದೈವ ಸಂಕಲ್ಪದಂತೆ ನೆರವೇರಿಸಲು ತೀರ್ಮಾನಿಸಿದ್ದಾರೆ. ಜ.26ರಂದು ಗಣಪತಿ ಹೋಮ, ದೈವಸ್ಥಾನದಲ್ಲಿ ಶುದ್ಧಿಕಲಶ, ನಾಗತಂಬಿಲ, ಕುರವನ್ ದೈವದ ಕೋಲ, ಶ್ರೀ ವೆಂಕಟರಮಣ ದೇವರ ಹರಿಸೇವೆ, ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಶ್ರೀ ಹುಲಿಭೂತದ ಭಂಡಾರ ಆಗಮನ, ಶ್ರೀ ದೈವಗಳ ತೊಡಂಙಲ್, ಕೊರತ್ತಿಯಮ್ಮನ ಕೋಲ, ಮುಕಾಂಬಿಕಾ ಗುಳಿಗ ಕೋಲ, ವರ್ಣರಪಂಜುರ್ಲಿ ಕೋಲ, ಜ.27ರಂದು ಬೆಳಗ್ಗೆ ಶ್ರೀ ಹುಲಿಭೂತದ ಕೋಲ, ಧರ್ಮದೈವ ಪ್ಲಾವಡ್ಕತ್ತಾಯ ಕೋಲ, ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶ್ರೀ ಹುಲಿಭೂತದ ಭಂಡಾರ ನಿರ್ಗಮನ, ದೈವಗಳ ತೊಡಂಙಲ್, ಪೊಟ್ಟ ದೈವದ ಕೋಲ, ಜ.28ರಂದು ರಕ್ತೇಶ್ವರಿ ದೈವದ ಕೋಲ, ಮಹಾದೈವ ವಿಷ್ಣುಮೂರ್ತಿ ಕೋಲ, ಶ್ರೀ ಗುಳಿಗ ದೈವದ ಕೋಲ ನಡೆಯಲಿದೆ. ಇತಿಹಾಸ ಪ್ರಸಿದ್ಧ ಕುಳದಪಾರೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವ ಎಪ್ರಿಲ್ 21 ಮತ್ತು 22ರಂದು ನಡೆಯಲಿದೆ. ಕುಳದ ದೈವಸ್ಥಾನದ ಪರಿಸರದಲ್ಲಿ ಜರಗುವ ಈ ಮಹತ್ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಕುಳ ತರವಾಡು ಮನೆಯ ಮುಖ್ಯಸ್ಥ ಎನ್. ಎ. ದಾಮೋದರ್ ಕುಳ, ಯಮುನ ಮತ್ತು ಬಾಲಕೃಷ್ಣ ಮಣಿಯಾಣಿ ಹಾಗೂ ಕುಟುಂಬಸ್ಥರು ವಿನಂತಿಸಿದ್ದಾರೆ.
ಕ್ಷೇತ್ರದ ಇತಿಹಾಸ:
ಶ್ರೀ ಮಹಾವಿಷ್ಣುಮೂರ್ತಿ ದೈವ ತೆಕ್ಕ್‌ನ್ನ್-ವಡಕ್ಕೋಟ್ ಎಂಬ ಸಂಕಲ್ಪದೊಂದಿಗೆ ಚೇರಿಪ್ಪಾಡಿಯಿಂದ ಅಲ್ಲಿನ ಕೋಲಾನ್ ಮನೆತನದ ಅಣ್ಣ, ತಂಗಿ ಮತ್ತು ಚೆರ್ವತ್ತೂರು ವಣ್ಣಾತ ಮನೆತನದ ಓರ್ವರೊಂದಿಗೆ ವಲಸೆ ಹೊರಟು ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ತಲುಪಿ ದೇವರ ಒಪ್ಪಿಗೆ ಪಡೆದು ಅಲ್ಲಿ ವಿಶ್ರಮಿಸುತ್ತಿರುವಾಗ ಶ್ರೀ ದೇವರ ಸನ್ನಿಧಿಯಲ್ಲಿ ಆಶ್ರಯ ಪಡೆದಿರುವ ರಾಜನ್ ದೈವ ಹುಲಿಭೂತ ಸಹಿಸದೆ ಆಕ್ಷೇಪಿಸಿದಾಗ ಶ್ರೀ ದೇವರು ಉಭಯ ದೈವಗಳನ್ನು ಸಮಾಧಾನಗೊಳಿಸಿ ವಿಷ್ಣುಮೂರ್ತಿ ದೈವಕ್ಕೆ ತುಸು ದೂರದಲ್ಲಿ ತೋರಿಸಿದ ಸ್ಥಳ ಕುಳಕ್ಕುತ್ತಪಾರ (ಕುಳದಪಾರೆ)ಕ್ಕೆ ದೈವ ತಲುಪಿ ಸೂಕ್ತ ಸ್ಥಳವೆಂದು ಸಂತಸಪಟ್ಟು ಆ ಪ್ರದೇಶದಲ್ಲಿ ಸುತ್ತಾಡುತ್ತಾ ಕೂಗಳತೆ ದೂರದಲ್ಲಿರುವ ಕುಳಕ್ಕೆ ಬಂದು ಸ್ಥಿರವಾಗಿ ನೆಲೆಸಲು ಆ ಸ್ಥಳವನ್ನು ಆಯ್ಕೆಮಾಡಿ ಅಲ್ಲಿ ವಾಸಿಸುತ್ತಿದ್ದ ಕೊಳತ್ತಾಯ ಕುಟುಂಬ ಅತೀ ಶೀಘ್ರದಲ್ಲಿ ನಿಸ್ಸಂತತಿಯಾಗುವುದೆಂದು ತಿಳಿದು ಆ ಮನೆಯಲ್ಲಿ ಅಣ್ಣ ತಂಗಿಯೊಂದಿಗೆ ನೆಲೆಸಿತೆಂಬ ವಿಷಯ ಜನಜನಿತವೂ ಅಷ್ಟಮಂಗಲ ಚಿಂತನೆಯಲ್ಲಿ ಕಂಡು ಬಂದ ಸತ್ಯವೂ ಆಗಿದೆ. ಕ್ರಿಸ್ತಶಕ 1850ರಲ್ಲಿ ಕುಳದ ತರವಾಡು ಮನೆ ಮತ್ತು ಮನೆಯ ಬಲಭಾಗದ ಎತ್ತರದ ಸ್ಥಳದಲ್ಲಿ ಶ್ರೀ ದೈವಗಳಿಗೆ ದೈವಸ್ಥಾನ ಬಲು ಆಕರ್ಷಕವಾಗಿ ನಿರ್ಮಾಣಗೊಂಡು ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿಯೊಂದಿಗೆ ಸಮಕಾಲೀನ ಮತ್ತು ಸಮಶಕ್ತಿಯ ಕಾರಣಿಕ ದೈವಗಳಾದ ಧರ್ಮದೈವ ಪ್ಲಾವಡ್ಕತ್ತಾಯ, ಶ್ರೀ ಹುಲಿಭೂತ, ರಕ್ತೇಶ್ವರಿ ಹಾಗೂ ಪರಿವಾರ ದೈವಗಳನ್ನು ಪ್ರತಿಷ್ಠೆಗೊಳಿಸಲಾಯಿತು.
ಈ ದೈವಗಳಿಗೆ ವಿಷುಕಣಿಯ ದಿವಸ ಭಕ್ತಜನರು ಸೇರಿ ಕಣಿತೋರಿಸಿ ಮಧ್ಯಾಹ್ನ ಹೊತ್ತಿಗೆ ಸೀಯಾಳ ಸಮರ್ಪಣೆ ಮಾಡುವ ಕ್ರಮವಿದೆ. ಪ್ರತೀ ದಿನ ದೈವಗಳಿಗೆ ರಾತ್ರಿ ಹೊತ್ತು ಹೊರಗಿನಿಂದ ದೀಪವಿಡುವ ಪದ್ಧತಿಯೂ ಮಂಗಳವಾರ ಮತ್ತು ಶುಕ್ರವಾರಗಳಂದು ದೈವಗಳ ಕೊಠಡಿಯ ಬಾಗಿಲು ತೆರೆದು ದೀಪಾರಾಧನೆ ಮಾಡುವ ಪರಿಪಾಠವಿದೆ. ಇತ್ತೀಚೆಗಿನ ಪುನಃಪ್ರತಿಷ್ಠಾ ಕಾರ್ಯದಲ್ಲಿ ಹೊಸತಾಗಿ ದೈವಸ್ಥಾನದ ಕೊಠಡಿಯಲ್ಲಿ ವರ್ಣರ ಪಂಜುರ್ಲಿಯನ್ನು, ಮಂಟಪದಲ್ಲಿ ಪೊಟ್ಟ ದೈವವನ್ನು ಮತ್ತು ಹೊರಭಾಗದಲ್ಲಿ ಮುಕಾಂಬಿಕಾ ಗುಳಿಗ ಮತ್ತು ಗುಳಿಗ ದೈವಗಳನ್ನು ಪ್ರತಿಷ್ಠಾಪಿಸಿ ಉಳಿದ ದೈವಗಳಂತೆ ಈ ದೈವಗಳನ್ನೂ ಆರಾಧಿಸಲಾಯಿತು. ಮೇಷ ಮಾಸದ 8 ಮತ್ತು 9ರಂದು ಕುಳದಪಾರೆ ಬಯಲಾಲಯದಲ್ಲಿ ವರ್ಷಂಪ್ರತಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವವನ್ನು ಅಗ್ನಿಸಾಕ್ಷಿಯಾಗಿ ವಿಜ್ರಂಭಣೆಯಿಂದ ನೆರವೇರಿಸುವುದಲ್ಲದೆ ಕರ್ಕಾಟಕ ಮಾಸದ 25, 26ರಂದು ಶ್ರೀ ದೈವದ ಬಯಲು ಕೋಲವನ್ನು ಕುಳದ ದೈವಸ್ಥಾನದಲ್ಲಿ ಪ್ರತೀವರ್ಷ ನೆರವೇರಿಸುವುದಾಗಿದೆ. ಮನೆಯ ಹೊರವಲಯದಲ್ಲಿ ನೆಲೆಗೊಂಡಿರುವ ಕೊರತ್ತಿಯಮ್ಮನಿಗೆ ಭಕ್ತಜನರು ಅಗೇಲು ರೂಪದಲ್ಲಿ ಸಮ್ಮಾನವನ್ನು ಯಥೇಚ್ಛವಾಗಿ ಕೊಡುತ್ತಿರುವುದು ಈ ದೈವದ ಪ್ರಭಾವಕ್ಕೆ ಸಾಕ್ಷಿಯಾಗಿದೆ. ಮನೆಯ ಮುಂಭಾಗದಲ್ಲಿರುವ ಕೆರೆಯ ಪೂರ್ವಭಾಗದ ಬನದಲ್ಲಿ ಪೂರ್ವಕಾಲದಲ್ಲಿಯೇ ಪಶ್ಚಿಮಾಭಿಮುಖವಾಗಿ ಪ್ರತಿಷ್ಠೆಗೊಂಡಿದ್ದ ಶ್ರೀ ನಾಗದೇವರನ್ನು ಪುನಃಪ್ರತಿಷ್ಠೆಗೊಳಿಸಲಾಯಿತು.
ಈ ನಾಗದೇವರಿಗೆ ವರ್ಷಂಪ್ರತಿ ಸುಗ್ಗಿ ಬೇಸಾಯದ ಸಂದರ್ಭದಲ್ಲಿ ತಂಬಿಲ ಸೇವೆಯನ್ನು ಜರಗಿಸಲಾಗುತ್ತಿದೆ. ನಾಗಬನದಿಂದ ಇನ್ನಷ್ಟು ದೂರದಲ್ಲಿ ಮೂಡುಭಾಗದಲ್ಲಿ ಶ್ರೀ ವಯನಾಟ್ ಕುಲವನ್ ದೈವಸ್ಥಾನ ನಿರ್ಮಿಸಿ ದೈವಗಳನ್ನು ಪ್ರತಿಷ್ಠೆಗೊಳಿಸಿ ವರ್ಷಂಪ್ರತಿ ಹೊಸ ಅಕ್ಕಿಯ ನೈವೇದ್ಯ ಸಮರ್ಪಣೆ, ಕೈವೀದ್ ಸೇವೆಗಳನ್ನು ನೆರವೇರಿಸಲಾಗುತ್ತಿದೆ. ಶ್ರೀ ಮಹಾವಿಷ್ಣುಮೂರ್ತಿಯ ಉತ್ಸವಸ್ಥಳ ಕುಳದಪಾರೆಯಲ್ಲಿ ಯಾವುದೇ ರೀತಿಯ ಪ್ರತಿಷ್ಠೆ ಇಲ್ಲದ ಶಿವಸಾನಿಧ್ಯವಿರುವ ಬನವೊಂದನ್ನು ಕಾಣಬಹುದು. ಇದು ಹರಿಗೆ ನೆಲೆಗೊಳ್ಳಲು ಹರ ತೋರಿಸಿದ ನೆಲವೆಂದು ನಂಬಲಾಗಿದೆ. ಇಲ್ಲಿಂದ ವಾಯುವ್ಯ ದಿಕ್ಕಿನಲ್ಲಿ ಇನ್ನೊಂದು ಬನ ಕಂಡುಬರುತ್ತಿದ್ದು ಇದರಲ್ಲಿ ವನದುರ್ಗೆ ಮತ್ತು ವನಶಾಸ್ತಾರ ಸಂಕಲ್ಪಗಳಿವೆ. ಈ ಎರಡೂ ಬನಗಳಲ್ಲಿ ದೀಪಾವಳಿ ಸಂದರ್ಭದಲ್ಲಿ ತಂಬಿಲ ಸೇವೆಯನ್ನು ನೆರವೇರಿಸಲಾಗುತ್ತಿದೆ. ಇನ್ನೂ ಒಂದು ಬನವನ್ನು ಕುಳತರವಾಡು ಮನೆಯ ಬಡಗು ದಿಕ್ಕಿನಲ್ಲಿ ಸ್ವಲ್ಪ ದೂರದಲ್ಲಿ ಕಾಣಬಹುದಾಗಿದ್ದು ಇಲ್ಲಿ ಕಲ್ಕುಡ, ಕಲ್ಲುರ್ಟಿ ಮತ್ತು ರಾಹುಗುಳಿಗ ದೈವಗಳನ್ನು ಸಂಕಲ್ಪಿಸಿ ವರ್ಷಂಪ್ರತಿ ಆಟಿ ತಿಂಗಳಲ್ಲಿ ಅಗೇಲು ಸಮರ್ಪಣೆ ಮಾಡಲಾಗುತ್ತದೆ. ಇದಲ್ಲದೆ ಕುಳ ತರವಾಡು ಮನೆಯ ಪಕ್ಕದಲ್ಲಿ ಬಡಗು ಭಾಗದಲ್ಲಿ ಪ್ರಕೃತಿದತ್ತವಾದ ಕಗ್ಗಲ್ಲ ಮೇಲೆ ಕುರಪನ್ ದೈವದ ಸಾನಿಧ್ಯವಿದ್ದು ಇಲ್ಲಿ ದನಕರುಗಳ ಸಂಬಂಧ ಹೇಳಿಕೊಂಡ ಹರಕೆಗಳನ್ನು ಸಲ್ಲಿಸುವ ಕ್ರಮವಿದೆ. ಈ ಕುರವನ್ ದೈವದ ಕೋಲ ಸುಗ್ಗಿ ಬೇಸಾಯದ ಸಂದರ್ಭ ನಾಗ ತಂಬಿಲದಂದು ಜರಗುತ್ತದೆ. ತರವಾಡು ಮನೆಯಲ್ಲಿ ವೆಂಕಟರಮಣ ದೇವರ ಮುಡಿಪು ಹಾಗೂ ದುರ್ಗಾಪೂಜೆಯನ್ನು ಭಕ್ತಿಪೂರ್ವಕ ನೆರವೇರಿಸಲಾಗುತ್ತದೆ. ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ದೇವರೊಂದಿಗೆ ಕುಳದ ಶ್ರೀ ಮಹಾವಿಷ್ಣುಮೂರ್ತಿ ದೈವಕ್ಕೆ ವಿಶೇಷವಾದ ಸಂಬಂಧವಿರುವಂತೆಯೆ ನೆಟ್ಟಣಿಗೆ ದೇವಸ್ಥಾನದ ಆಗುಹೋಗುಗಳಲ್ಲಿ ಕುಳದ ಮನೆಯವರಿಗೆ ಹೆಚ್ಚಿನ ಜವಾಬ್ದಾರಿಯಿದೆ. ಶ್ರೀ ದೇವರನ್ನು ಸದಾಕಾಲ ಸ್ಮರಿಸಿಕೊಳ್ಳುವ ಈ ಮನೆಯವರು ದೇವರಿಗೆ ವರ್ಷಂಪ್ರತಿ ಪಡಿಯಕ್ಕಿಯನ್ನು ಕೊಡುವುದರೊಂದಿಗೆ ಧನುಪೂಜೆ ಮತ್ತು ಸೋಮವಾರ ಪೂಜೆಯನ್ನು ಹಾಗೂ ಶ್ರೀ ದೇವರ ವಾರ್ಷಿಕೋತ್ಸವದ ಕೊನೆಯದಿನ ಅವಭೃತ ಸ್ನಾನಕ್ಕೆ ತೆರಳುವಾಗ ನಿರ್ಧಿಷ್ಟ ಸ್ಥಳದಲ್ಲಿ ಶ್ರೀ ದೇವರಿಗೆ ಕಟ್ಟೆಪೂಜೆಯನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಸಮರ್ಪಿಸುತ್ತಾರೆ. ಇನ್ನೂ ವಿಶೇಷವಾಗಿ ಹನ್ನೆರಡು ವರ್ಷಗಳಿಗೊಮ್ಮೆ ಜರಗುವ ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ದೇವರ ಜಾಂಬ್ರಿ ಉತ್ಸವದ ಸಂದರ್ಭದಲ್ಲಿ ನಿರ್ಧಿಷ್ಟಪಡಿಸಿದ ದಿನಗಳ ಕಾಲ ಈ ಕುಳ ಮನೆತನದ ಅರ್ಹ ವ್ಯಕ್ತಿಯೊಬ್ಬರು ವೃತಾಚರಣೆಯಲ್ಲಿದ್ದು ಜಾಂಬ್ರಿ ಗುಹೆಗೆ ಸಂಬಂಧಪಟ್ಟವರು ಇಳಿಯುವ ಹೊತ್ತಿಗೆ ದೊಂದಿಯನ್ನು ಹೊತ್ತಿಸಿ ಅವರ ಕೈಗೆ ಕೊಡುವ ಮಹತ್ತರವಾದ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಒಟ್ಟಿನಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವವನ್ನು ಆರಾಧಿಸುವುದರ ಜತೆಗೆ ಗ್ರಾಮ ದೇವರಾದ ಶ್ರೀ ಮಹಾಲಿಂಗೇಶ್ವರ ದೇವರನ್ನು ಆರಾಧಿಸುತ್ತಾ ಹರಿಹರರ ಅನುಗ್ರಹಕ್ಕೆ ಪಾತ್ರರಾಗುತ್ತ ಸಮಾಜದ ಆಗುಹೋಗುಗಳಲ್ಲಿ ಮುಂಚೂಣಿಯಲ್ಲಿ ಕಂಡು ಬರುವ ಇವರು ಪ್ರಸ್ತುತ ಕೈಗೊಳ್ಳುವ ದೈವಂಕೆಟ್ಟ್ ಮಹೋತ್ಸವಕ್ಕೆ ಅಪಾರ ಭಕ್ತಜನರು ಸಾಕ್ಷಿಯಾಗಲಿದ್ದಾರೆ. ದೈವಗಳನ್ನು ಸಾಕ್ಷಾತ್ಕಾರಗೊಳಿಸಲಿದ್ದಾರೆ. ಅಭೀಷ್ಟ ಸಿದ್ದಿಯನ್ನು ಪಡೆಯಲಿದ್ದಾರೆ.
ಮೂಲ ಮಾಹಿತಿ: ಶ್ರೀಧರ್ ಮಣಿಯಾಣಿ ನಿಡಿಯಡ್ಕ