ಅಭಿವೃದ್ಧಿ ಪಥದತ್ತ ಶಾಸಕ ಅಶೋಕ್ ರೈ ದಿಟ್ಟ ಹೆಜ್ಜೆ
✒️ಸಿಶೇ ಕಜೆಮಾರ್
ಪುತ್ತೂರು: ಮುಳುಗು ಸೇತುವೇ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ಬ್ರಿಟೀಷರ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂದು ಹೇಳಲಾಗಿರುವ ಶತಮಾನಗಳ ಇತಿಹಾಸ ಹೊಂದಿರುವ ಚೆಲ್ಯಡ್ಕ ಸೇತುವೆಗೆ ಕೊನೆಗೂ ಮುಕ್ತಿ ಕೊಡುವ ಭರವಸೆಯನ್ನು ಶಾಸಕ ಅಶೋಕ್ ಕುಮಾರ್ ರೈ ಕೊಟ್ಟಿದ್ದಾರೆ. ಸೇತುವೆ ನಿರ್ಮಾಣಕ್ಕೆ ಸುಮಾರು 3 ಕೋಟಿ ರೂ.ಅನುದಾನ ಬಿಡುಗಡೆ ಮಾಡುವ ಮೂಲಕ ಮುಳುಗು ಸೇತುವೆಗೆ ಮುಕ್ತಿ ದೊರಕಿಸುವ ಕೆಲಸ ಮಾಡಿದ್ದಾರೆ. ಆ ಮೂಲಕ ಈ ಭಾಗದ ಗ್ರಾಮಸ್ಥರು ಹಲವು ವರ್ಷಗಳ ಕನಸನ್ನು ನನಸು ಮಾಡಿದ್ದಾರೆ.
ಮುಳುಗು ಸೇತುವೆ ಎಂದೇ ಪ್ರಸಿದ್ಧಿ:
ಪುತ್ತೂರು ಪರ್ಲಡ್ಕ ರಸ್ತೆಯಲ್ಲಿ ದೇವಸ್ಯದಿಂದ ಸಂಟ್ಯಾರು ಬೆಟ್ಟಂಪಾಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಚೆಲ್ಯಡ್ಕ ಎಂಬಲ್ಲಿ ನೆಲದಿಂದ ಕನಿಷ್ಠ ಆರೇಳು ಅಡಿ ಎತ್ತರದಲ್ಲಿರುವ ಯಾವುದೇ ತಡೆಬೇಲಿ ಇಲ್ಲದ ಈ ಸೇತುವೆಯು ಪ್ರತಿ ಮಳೆಗಾಲದಲ್ಲಿ ಕನಿಷ್ಠ ಎಂದರೂ 10ಕ್ಕೂ ಅಧಿಕ ಬಾರಿ ಮುಳುಗಡೆಯಾಗುತ್ತದೆ. ಕೆಲವೊಮ್ಮೆ ರಾತ್ರಿ ಮುಳುಗಡೆಯಾದರೆ ಮರುದಿನ ಸಂಜೆ ತನಕವೂ ಮುಳುಗಿದ್ದು ವಾಹನ ಸಂಚಾರ, ಜನಸಂಚಾರಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಈ ಸೇತುವೆಯನ್ನು ಮುಳುಗು ಸೇತುವೆ ಎಂದೇ ಕರೆಯುತ್ತಾರೆ. ಈ ಸೇತುವೆ ಮುಳುಗಡೆಯಾದರೆ ದೇವಸ್ಯದಿಂದ ಗುಮ್ಮಟೆಗದ್ದೆ ಮೂಲಕ ರೆಂಜ, ಬೆಟ್ಟಂಪಾಡಿ, ಪಾಣಾಜೆ ಇತ್ಯಾದಿ ಭಾಗಗಳಿಗೆ ಪ್ರಯಾಣಿಸುವವರಿಗೆ ತೊಂದರೆಯಾಗುತ್ತದೆ. ಇದಲ್ಲದೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ನಿತ್ಯ ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಗುತ್ತದೆ.
ಸೇತುವೆ ನಿರ್ಮಾಣ ಹಲವು ವರ್ಷಗಳ ಬೇಡಿಕೆ:
ಚೆಲ್ಯಡ್ಕ ಮುಳುಗು ಸೇತುವೆಗೆ ಮುಕ್ತಿ ಕೊಡಬೇಕು. ಇಲ್ಲಿ ಹೊಸ ಸೇತುವೆ ನಿರ್ಮಾಣವಾಗಬೇಕು ಎಂಬುದು ಈ ಭಾಗದ ಜನರ ಹಲವು ವರ್ಷಗಳ ನಿರಂತರ ಬೇಡಿಕೆಯಾಗಿದೆ. ಪ್ರತಿ ವರ್ಷವೂ ಈ ಭಾಗದ ಜನರು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ನೀಡುತ್ತಲೇ ಬಂದಿದ್ದರೂ ಇದುವರೆಗೆ ಈ ಸೇತುವೆಗೆ ಬಿಡಿಕಾಸಿನ ಅನುದಾನವೂ ಬಂದಿರಲಿಲ್ಲ. ಜನಪ್ರತಿನಿಧಿಗಳು ಕೇವಲ ಭರವಸೆಯನ್ನಷ್ಟೇ ನೀಡಿದ್ದರೂ ವಿನಹ ಅನುದಾನ ಕೊಡುವ ಕೆಲಸ ಮಾಡದೇ ಇರುವುದು ಈ ಭಾಗದ ಜನರ ಆಕ್ರೋಶಕ್ಕೂ ಕಾರಣವಾಗಿತ್ತು.
3 ಕೋಟಿ ರೂ.ಅನುದಾನ ಬಿಡುಗಡೆ:
ನೆಲಮಟ್ಟದಿಂದ ಕೇವಲ ಆರೇಳು ಅಡಿ ಎತ್ತರದಲ್ಲಿರುವ ಚೆಲ್ಯಡ್ಕ ಸೇತುವೆಯು ಈಗಾಗಲೇ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಸೇತುವೆಯ ಪಿಲ್ಲರ್‌ಗಳು ತುಂಡಾಗಿ ತೇಪೆ ಹಚ್ಚುವ ಕೆಲಸ ನಡೆದಿದೆ. ಈ ಸೇತುವೆಯನ್ನು ಸಂಪೂರ್ಣವಾಗಿ ಕೆಡವಿ ನೂತನ ಸೇತುವೆ ನಿರ್ಮಾಣ ಮಾಡಬೇಕಾಗಿದೆ. ಇದಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈಯವರ ಶಿಫಾರಸ್ಸಿನಂತೆ ರೂ.3 ಕೋಟಿ ಅನುದಾನ ಬಿಡುಗಡೆಗೊಂಡಿದ್ದು ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಆ ಮೂಲಕ ಶತಮಾನ ಕಂಡ ಮುಳುಗು ಸೇತುವೆಗೆ ಮುಕ್ತಿ ದೊರಕಲಿದೆ.
ರಸ್ತೆ ಅಗಲೀಕರಣಕ್ಕೆ 3 ಕೋಟಿ ರೂ.ಅನುದಾನ ಕೊಟ್ಟಿದ್ದರೂ ಸೇತುವೆಗಿಲ್ಲ ಬಿಡಿಕಾಸಿನ ಬೆಲೆ…!?
ಚೆಲ್ಯಡ್ಕದ ಸೇತುವೆಯಿಂದ ನೂರು ಮೀಟರ್ ಅಂತರದಲ್ಲಿರುವ ಚೆಲ್ಯಡ್ಕ ಜಂಕ್ಷನ್‌ನಲ್ಲಿ ಸುಮಾರು 3 ಕೋಟಿ ರೂ.ಅನುದಾನದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆದಿದೆ. ಒಂದೇ ಮಳೆಗಾಲಕ್ಕೆ 3 ಕೋಟಿಯ ಕಾಮಗಾರಿ ಏನಾಗಿದೆ? ಎಂಬುದು ಎಲ್ಲರಿಗೂ ತಿಳಿದಿದೆ. ರಸ್ತೆ ಅಗಲೀಕರಣಕ್ಕೆ 3 ಕೋಟಿ ರೂ.ಅನುದಾನ ಕೊಡುವಾಗ ಚೆಲ್ಯಡ್ಕ ಸೇತುವೆಗೆ ಕನಿಷ್ಠ ಅನುದಾನವನ್ನಾದರೂ ಕೊಡಬಹುದಿತ್ತಲ್ವಾ ಎನ್ನುವುದು ಸಾರ್ವಜನಿಕರ ಮಾತುಗಳಾಗಿತ್ತು. ಈ ಬಗ್ಗೆ ಸುದ್ದಿ ಬಿಡುಗಡೆಯಲ್ಲಿ ವರದಿ ಕೂಡ ಪ್ರಕಟಗೊಂಡಿತ್ತು.
ಕಳೆದ ಹಲವು ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿ ಮುಳುಗುತ್ತಿದ್ದ ಚೆಲ್ಯಡ್ಕ ಸೇತುವೆಯ ಬಗ್ಗೆ ಇಷ್ಟು ವರ್ಷ ಯಾವ ಶಾಸಕರೂ ಕೂಡ ಯಾಕೆ ಅನುದಾನ ಕೊಡುವ ಕೆಲಸ ಮಾಡಿಲ್ಲ, ಅವರಿಗೆ ಈ ಭಾಗದ ಜನರ ಸಮಸ್ಯೆ ಕಾಣಲಿಲ್ಲವೇ? ನಾವು ಈ ಸೇತುವೆಯ ಅಭಿವೃದ್ಧಿಗೆ ರೂ.3 ಕೋಟಿ ಅನುದಾನ ಕೊಡುವ ಕೆಲಸ ಮಾಡಿದ್ದೇವೆ. ನಮಗೆ ಪಕ್ಷ, ಜಾತಿ, ಮತ ಬೇಧ ಯಾವುದೂ ಇಲ್ಲ ಅಭಿವೃದ್ಧಿಯೊಂದೇ ನಮ್ಮ ಗುರಿ. ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯೇ ನಮ್ಮ ಉದ್ದೇಶವಾಗಿದೆ ಅದನ್ನು ನಾವು ಮಾಡಿ ತೋರಿಸುತ್ತೇವೆ.
–ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ
ದೀರ್ಘ ಕಾಲದ ಹೋರಾಟಕ್ಕೆ ದೊರೆತ ಪ್ರತಿಫಲ ಇದಾಗಿದೆ. ಈ ಹಿಂದೆ ಕಾಂಗ್ರೆಸ್ ಶಾಸಕರಾಗಿದ್ದ ಶಕುಂತಳಾ ಶೆಟ್ಟಿಯವರು ಈ ರಸ್ತೆಯನ್ನು ಪಿಡಬ್ಲ್ಯೂಡಿ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಿದ್ದರು. ಇದೀಗ ಶಾಸಕ ಅಶೋಕ್ ಕುಮಾರ್ ರೈ ನೂತನ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಹಿಂದಿನ ಶಾಸಕರು ಚೆಲ್ಯಡ್ಕ ಜಂಕ್ಷನ್ ರಸ್ತೆ ಅಗಲೀಕರಣಕ್ಕೆ 3 ಕೋಟಿ ರೂ.ಅನುದಾನ ಇಟ್ಟು ಕಾಮಗಾರಿ ಆಗಿದ್ದರೂ ಅದರ ಈಗಿನ ಪರಿಸ್ಥಿತಿಯನ್ನು ಕೇಳುವವರೇ ಇಲ್ಲದಾಗಿದೆ. ಅವರಿಗೆ ಚೆಲ್ಯಡ್ಕ ಮುಳುಗು ಸೇತುವೆಯ ಸಮಸ್ಯೆ ಬಹುಷಹ ಗೊತ್ತಾಗಲೇ ಇಲ್ಲ ಅನ್ನಿಸುತ್ತೆ. ಆದರೆ ನಾವು ನಮ್ಮ ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ಮನವಿ ಕೊಟ್ಟ ಕೂಡಲೇ ಅವರು ಮಳೆಗಾಲದಲ್ಲೇ ಸೇತುವೆಯನ್ನು ವೀಕ್ಷಣೆ ಮಾಡಿ ಇದೀಗ 3 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದ್ದಾರೆ. ಆ ಮೂಲಕ ಈ ಭಾಗದ ಗ್ರಾಮಸ್ಥರು ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದಾರೆ. ಅವರಿಗೆ ಅಭಿನಂದನೆಗಳು.
–ಕೃಷ್ಣಪ್ರಸಾದ್ ಆಳ್ವ, ಸ್ಥಾಪಕ ಅಧ್ಯಕ್ಷರು ಶ್ರೀ ವಿಷ್ಣು ಯುವಕ ಮಂಡಲ ಉಪ್ಪಳಿಗೆ