ಪುತ್ತೂರು:ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಂಡು ಜ.22 ಪ್ರತಿಷ್ಠಾಪನೆಯ ಸಂಭ್ರಮದ ದಿನವೇ ಆರ್ಯಾಪು ಗ್ರಾಮದ ಬೊಳ್ಳಾಣ ಎಂಬಲ್ಲಿ ನವೀಕೃತಗೊಂಡಿರುವ ಶ್ರೀ ಆಂಜನೇಯ ಭಜನಾ ಮಂದಿರವು ಲೋಕಾರ್ಪಣೆಗೊಳ್ಳಲಿದೆ.
ಬೊಳ್ಳಾಣ ಪರಿಸರದ ಆಸ್ತಿಕ ಭಕ್ತರ ಪ್ರತೀಕವಾಗಿ ಸುಮಾರು 12 ವರ್ಷಗಳಿಂದ ಭಜನಾ ಮಂದಿರವು ಧಾರ್ಮಿಕ ಕ್ಷೇತ್ರವಾಗಿ ಬೆಳೆಯುತ್ತಿದೆ. ಈ ಭಜನಾ ಮಂದಿರವು ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ 2021ರಲ್ಲಿ ವಾಸ್ತು ತಜ್ಞರ ಸಲಹೆಯಂತೆ ಪುನರ್ ನಿರ್ಮಾಣ ಕಾರ್ಯವನ್ನು ನಡೆಸಲಾಗಿದೆ. ಊರ, ಪರವೂರ ಭಕ್ತ ಜನರ ಸಹಕಾರದೊಂದಿಗೆ ಸುಮಾರು ರೂ.18 ಲಕ್ಷ ವೆಚ್ಚದಲ್ಲಿ ನೂತನ ಭಜನಾ ಮಂದಿರವು ನಿರ್ಮಾಣಗೊಂಡಿದ್ದು ಲೋಕಾರ್ಪಣೆಯ ಸಂಭ್ರಮದಲ್ಲಿದೆ. ಮಂದಿರದ ಲೋಕಾರ್ಪಣೆಯನ್ನು ಪೂರ್ವ ನಿಧರಿಸಿದಂತೆ ಜ.22ರಂದು ನಡೆಸಲಾಗುತ್ತಿದೆ. ಆದರೆ ವಿಶೇಷತೆಯೆಂದರೆ ಅದೇ ದಿನ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯು ನಡೆಯುತ್ತಿರುವ ಸಂಭ್ರಮದಲ್ಲಿ ಕಾಕತಾಳೀಯವೆಂಬಂತೆ ಬೊಳ್ಳಾಣದಲ್ಲಿ ಶ್ರೀರಾಮ ಭಕ್ತ ಆಂಜನೇಯ ಹೆಸರಿನಲ್ಲಿರುವ ನೂತನ ಭಜನಾ ಮಂದಿರವು ಅದೇ ದಿನ ಲೋಕಾರ್ಪಣೆಗೊಳ್ಳುತ್ತಿರುವುದು ಇಲ್ಲಿನ ವಿಶೇಷತೆಯಾಗಿದೆ.
ವೇ.ಮೂ. ಶ್ರೀ ಯೋಗೀಶ್ ಕಲ್ಲೂರಾಯ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜ.21ರಂದು ಸಂಜೆ ವಾಸ್ತು ಪೂಜೆ, ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ.
ಜ.22ರಂದು ಬೆಳಿಗ್ಗೆ ಗಣಪತಿ ಹವನ, ನಂತ ವಿವಿಧ ಭಜನಾ ತಂಡಗಳಿಂದ ಭಜನೆ, ಆಂಜನೇಯ ಸ್ವಾಮಿ ಪ್ರತಿಷ್ಠೆ, ಕಲ್ಪೋಕ್ತ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನ ಸಂರ್ತೊಣೆ ನಡೆಯಲಿದೆ. ಸಂಜೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಕಾಶ್ ಮೆಲೋಡೀಸ್ ಪುತ್ತೂರು ಇವರಿಂದ ಭಕ್ತಿರಸಮಂಜರಿ ನಡೆಯಲಿದೆ.
ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಆಂಜನೇಯ ಭಜನಾ ಮಂದಿರರ ಸೇವಾ ಟ್ರಸ್ಟ್ನ ಅಧ್ಯಕ್ಷ ಕಿಶೋರ್ ಬೊಳ್ಳಾಣ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಡಾ.ರವೀಶ್ ಪಡುಮಲೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ನಗರ ಸಭಾ ಸದಸ್ಯೆ ದೀಕ್ಷಾ ಪೈ, ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ, ನ್ಯಾಯವಾದಿ ವಿರೂಪಾಕ್ಷ ಭಟ್ ಮಚ್ಚಿಮಲೆ, ಬಂಗಾರಡ್ಕ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಪ್ರದೀಪ ಕೃಷ್ಣ ಬಂಗಾರಡ್ಕ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ನಂತರ ಪಾಂಚಜನ್ಯ ಯಕ್ಷಕಲಾ ವೃಂದ ಪುತ್ತೂರು ಇವರಿಂದ ‘ಶ್ರೀರಾಮ ದರ್ಶನ’ ಯಕ್ಷಾಗನ ನಡೆಯಲಿದೆ ಎಂದು ಭಜನಾ ಮಂದಿರದ ಪ್ರಕಟಣೆ ತಿಳಿಸಿದೆ.