ಸವಣೂರು: ಜಿಲ್ಲಾ ಯುವಜನ ಮೇಳ

0

ನಮ್ಮ ಕಲೆ, ಸಂಸ್ಕೃತಿ ಜಗತ್ತಿನಲ್ಲಿಯೇ ಶ್ರೇಷ್ಠ-ನಳಿನ್ ಕುಮಾರ್ ಕಟೀಲ್

ಸವಣೂರು : ನಮ್ಮ ದೇಶದ ಕಲೆ ಸಂಸ್ಕೃತಿ ಜಗತ್ತಿನಲ್ಲೇ ಶ್ರೇಷ್ಠ, ಇಂತಹ ಶ್ರೀಮಂತ ಕಲೆ, ಸಾಂಸ್ಕೃತಿಕ ಪರಂಪರೆಗಳನ್ನು ಭಗವಂತನೊಟ್ಟಿಗೆ ಸೇರಿಸಿದಂತ ದೇಶ ಭಾರತ , ಭಾರತೀಯ ಕಲೆಗಳು ಜನರ ಮನಸ್ಸನ್ನು ಅರಳಿಸುತ್ತದೆ, ವಿದೇಶಿ ಸಂಗೀತ, ನೃತ್ಯಗಳು ಮನಸ್ಸನ್ನು ಕೆರಳಿಸುತ್ತದೆ. ಮನಸ್ಸನ್ನು ಅರಳಿಸುವ ಕಲೆಯನ್ನು ಗ್ರಾಮೀಣ ಮಟ್ಟದ ಜನಪದೀಯವಾದ ಕಾರ್ಯಕ್ರಮಗಳೊಂದಿಗೆ ಜೋಡಿಸಿ ಉಳಿಸುವ ಕಾರ್ಯ ಯುವಜನ ಮೇಳಗಳಿಂದ ನಡೆಯುತ್ತದೆ ಎಂದು ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.


ಅವರು ಸವಣೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ.ಕ. ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವಜನ ಒಕ್ಕೂಟ, ಕಡಬ ತಾಲೂಕು ಪಂಚಾಯತ್, ಸವಣೂರು ಗ್ರಾ.ಪಂ. ಹಾಗೂ ಸವಣೂರು ಯುವಕ ಮಂಡಲದ ಸಹಯೋಗದಲ್ಲಿ ನಡೆಯುವ 2023-24ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನ ಮೇಳ ಹಾಗೂ ರಾಜ್ಯ ಯುವಜನ ಒಕ್ಕೂಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಭಾರತೀಯ ಸಂಸ್ಕೃತಿ ಪರಂಪರೆ ಜಗತ್ತಿಗೆ ಪರಿಚಯವಾಗಬೇಕು, ಅದಕ್ಕೆ ಆದ್ಯತೆ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಕಲ್ಪನೆಯನ್ನು ಜಾರಿ ಮಾಡಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳು ಯುವಜನರನ್ನು ಒಗ್ಗೂಡಿಸಿ ಪರಸ್ಪರ ವಿಶ್ವಾಸ ನಂಬಿಕೆಯನ್ನು ಬೆಳೆಸಲು ಸಹಕಾರಿಯಾಗುತ್ತದೆ. ಯುವಜನಮೇಳಗಳು ಯುವಮನಸ್ಸುಗಳನ್ನು ಒಗ್ಗೂಡಿಸಿ, ಸಾಮಾಜಿಕ ಸಾಮರಸ್ಯವನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ನಳಿನ್ ಕುಮಾರ್ ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಯುವಜನರ ಮೇಲೆ ಸಾಕಷ್ಟು ಜವಾಬ್ದಾರಿ ಇದ್ದು, ಜಾನಪದ ಕಲೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು ಎಂದರು. ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಆಧುನಿಕತೆಯ ಗುಂಗಿನಲ್ಲಿ, ಮರೆಯಾಗುತ್ತಿರುವ ಶ್ರೀಮಂತ ಜನಪದ ಕಲೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಇಂದಿನ ಯುವವಶಕ್ತಿಯ ಮೇಲಿದೆ. ಗ್ರಾಮೀಣ ಯುವಜನತೆಯ ಪ್ರತಿಭೆ ಗುರುತಿಸುವ ಯುವಜನ ಮೇಳಗಳಲ್ಲಿ ಜಿಲ್ಲೆಯ ಯುವಕ ಯುವತಿಯರು ಉತ್ತಮ ಪ್ರದರ್ಶನ ನೀಡ ಬೇಕು ಎಂದರು.


ವೇದಿಕೆಯಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್., ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ವಿಜಯ ,ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ,ಕಡಬ ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ,ಪ್ರಗತಿಪರ ಕೃಷಿಕ ಎ.ಕೃಷ್ಣ ರೈ ಪುಣ್ಚಪ್ಪಾಡಿ,ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ,ಪುತ್ತೂರು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್, ಗೌರವಾಧ್ಯಕ್ಷ ಸುಬ್ರಹ್ಮಣ್ಯ ಕರಂಬಾರು,ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ,ಸವಣೂರು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಹನೀಫ್ ,ಸವಣೂರು ಶಾಲಾ ಮುಖ್ಯಗುರು ನಿಂಗರಾಜು,ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಕೆ.,ಬೆಳಗಾವಿ ಯುವಜನ ಒಕ್ಕೂಟದ ಅಧ್ಯಕ್ಷ ಸಿದ್ದಣ್ಣ ದುರದುಂಡಿ,ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಸುಕುಮಾರ, ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಪುಂಡರೀಕ,ಸವಣೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸಂದೇಶ್ ಕೆ.ಎನ್., ಲೆಕ್ಕಾಧಿಕಾರಿ ಎ.ಮನ್ಮಥ, ದೇವಚಳ್ಳ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು,ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ,ಸವಣೂರು ಯುವಕ ಮಂಡಲದ ಕಾರ್ಯದರ್ಶಿ ಕೀರ್ತನ್ ಕೋಡಿಬೈಲು ಮೊದಲಾದವರಿದ್ದರು.


ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ವೈ.ನಾಯಕ್ ಪ್ರಸ್ತಾವನೆಗೈದರು.ದ.ಕ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಸ್ವಾಗತಿಸಿದರು. ಸವಣೂರು ಯುವಕ ಮಂಡಲದ ಅಧ್ಯಕ್ಷ ಜಿತಾಕ್ಷ ಜಿ. ವಂದಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here