ಇಂದು(ಜ.22): ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯಲ್ಲಿ ಅಯೋಧ್ಯಾ ರಾಮಮಂದಿರದ ಪ್ರಾಣಪ್ರತಿಷ್ಠೆ ಶುಭಮುಹೂರ್ತವನ್ನು ವಿಶೇಷವಾಗಿ ಭಕ್ತಿ ಶ್ರದ್ಧೆಯಿಂದ ಆಚರಿಸಲಾಯಿತು. ಶಾಲಾ ಮಾಧವ ಸದನದಲ್ಲಿ ಬೃಹದಾಕಾರದ ಅಖಂಡ ಭಾರತದ ಮಾದರಿಯನ್ನು ಹೂ ಮತ್ತು ಹಣತೆಗಳಿಂದ ಶೃಂಗರಿಸಿ, ಅಯೋಧ್ಯಾ ರಾಮಮಂದಿರದ ಪ್ರತಿಕೃತಿ ಸ್ಥಾಪಿಸಲಾಗಿತ್ತು. ಬಳಿಕ ಅಯೋಧ್ಯಾ ರಾಮನ ಪ್ರಾಣಪ್ರತಿಷ್ಠಾ ಮುಹೂರ್ತದಲ್ಲಿ ಸಂಸ್ಥೆಯ ವಿದ್ಯಾರ್ಥಿಸಮೂಹ, ಆಡಳಿತ ವೃಂದ, ಶಿಕ್ಷಕವೃಂದ, ಪಾಲಕವೃಂದ ಅಖಂಡ ಭಾರತದ ಮಡಿಲಲ್ಲಿ ಜೋಡಿಸಿದ ರಾಮಮಂದಿರದ ಎದುರು ದೀಪ ಬೆಳಗಿಸಿ ಸಾಮೂಹಿಕ ಹುಟ್ಟುಹಬ್ಬ ಆಚರಿಸಿದರು. ಈ ಸಂದರ್ಭದಲ್ಲಿ ಅಯೋಧ್ಯೆ ಕರಸೇವೆಯಲ್ಲಿ ಭಾಗವಹಿಸಿದ ಆಲಂಕಾರಿನ ದಾಮೋದರ ಆಚಾರ್ಯ ಮತ್ತು ಮನವಳಿಕೆಯ ಗೋಪಾಲಕೃಷ್ಣ ರೈ ಅವರನ್ನು ಫಲಪುಷ್ಪ, ಶಾಲು ಹೊದಿಸಿ ಗೌರವಿಸಿ ಮಕ್ಕಳಿಗೆ ಪರಿಚಯಿಸಲಾಯಿತು. ಈ ಸಂದರ್ಭದಲ್ಲಿ ಪ್ರವೀಣ ಆಳ್ವ ಕುಂತೂರು ಅಯೋಧ್ಯಾ ಮಂದಿರದ ವಿಶೇಷತೆಯ ಕುರಿತು ಮಾಹಿತಿ ನೀಡಿದರು. ರಾಮ, ಸೀತೆ, ಲಕ್ಷ್ಮಣ, ಹನುಮ ವೇಷಧಾರಿ ಶಿಶುಮಂದಿರದ ಪುಟಾಣಿಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಬಳಿಕ ಶಾಲಾ ಸಭಾಂಗಣದಲ್ಲಿ ಬೃಹತ್ ಎಲ್ಇಡಿ ಪರದೆಯಲ್ಲಿ ಅಯೋಧ್ಯಾ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ನೇರಪ್ರಸಾರವನ್ನು ಮಕ್ಕಳು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಸುಮಾರು 75ಕ್ಕೂ ಅಧಿಕ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲಾಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ, ಕರಸೇವಕ ಡಾ.ಸುರೇಶ್ ಕುಮಾರ್ ಕೂಡುರು, ಸಂಚಾಲಕ ಗಂಗಾಧರ ಗೌಡ ಕುಂಡಡ್ಕ, ಉಪಾಧ್ಯಕ್ಷ ಈಶ್ವರ ಗೌಡ ಪಜ್ಜಡ್ಕ, ಕಾರ್ಯದರ್ಶಿ ಇಂದುಶೇಖರ ಶೆಟ್ಟಿ, ಸದಸ್ಯರಾದ ಈಶ್ವರ ಭಟ್ ಕೊಂಡಾಡಿ, ಶ್ರೀಧರ ಬಲ್ಯಾಯ, ವಿಶಾಲಾಕ್ಷಿ ನೈಯಲ್ಗ, ವಿನಯ, ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಮುಖ್ಯಗುರುಗಳಾದ ಆಶಾ ಎಸ್.ರೈ, ಶಿಕ್ಷಕ ಸತೀಶ್ ಕುಮಾರ್ ಜಿ.ಆರ್ ಸೇರಿದಂತೆ ಸಂಸ್ಥೆಯ ಎಲ್ಲಾ ಶಿಕ್ಷಕಿಯರು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.