ಪುತ್ತೂರು : ಈಶ್ವರಮಂಗಲದ ಹನುಮಗಿರಿಯ ಶ್ರೀ ಗಜಾನನ ವಿದ್ಯಾಸಂಸ್ಥೆಯಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆಯ ಅಂಗವಾಗಿ ಸಂಭ್ರಮಾಚರಣೆ ಹಾಗೂ ಜನವರಿ ತಿಂಗಳಲ್ಲಿ ಜನಿಸಿದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಬಹಳ ವಿಜ್ರಂಭಣೆಯಿಂದ ಜರಗಿತು.
ದೀಪ ಪ್ರಜ್ವಲನೆಯ ಮೂಲಕ ಶಾಲಾ ಸಂಚಾಲಕ ಶಿವರಾಮ ಪಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶ್ರೀರಾಮನ ಆದರ್ಶವನ್ನು ನಾವೆಲ್ಲ ಪಾಲಿಸಿ ಉತ್ತಮ ಪ್ರಜೆಯಾಗಬೇಕೆಂದು ಹೇಳಿದರು. ಹುಟ್ಟುಹಬ್ಬವನ್ನು ಆಚರಿಸುತ್ತಿರುವ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕರು ತಿಲಕವನ್ನಿಟ್ಟು ಉಡುಗೊರೆ ನೀಡಿ ಆರತಿ ಬೆಳಗಿದರು. ಶಾಲಾ ಪ್ರಾಂಶುಪಾಲ ಕೆ ಶಾಮಣ್ಣ ಮಕ್ಕಳಿಗೆ ಶುಭಹಾರೈಸಿ ಮಾತನಾಡಿ, ಶತಕಗಳ ಹಿಂದಿನ ಕನಸು ಇಂದು ನನಸಾಗುತ್ತಿರುವುದನ್ನು ಹೆಮ್ಮೆಯಿಂದ ಹೇಳಿದರು. ಶಾಲಾ ವಿದ್ಯಾರ್ಥಿಗಳು ಅಯೋಧ್ಯೆಯ ಮಹತ್ವದ ಕುರಿತು ಭಾಷಣ ಹಾಗೂ ಪದ್ಯ ಹಾಡಿದರು. ಶಾಲಾ ಮುಖೋಪಾಧ್ಯಾಯ ಅಮರನಾಥ್ ಬಿ ಪಿ ಭಾರತ ಪುಣ್ಯಭೂಮಿ, ಶ್ರೀ ರಾಮ ಜನಿಸಿದ ಭೂಮಿ ನಾವೆಲ್ಲರೂ ಪುಣ್ಯವಂತರೆಂದು ಹೇಳಿದರು. ಶಾಲಾ ಶಿಕ್ಷಕ ಪ್ರಸಾದ್ ಶ್ರೀರಾಮನ ಆದರ್ಶವನ್ನು ಹೊಗಳಿ ಕೊಂಡಾಡಿದರು. ಅಯೋಧ್ಯೆಗೆ ಸಂಬಂಧಿಸಿದ ದೃಶ್ಯಗಳ ರಚನೆಯ ಕುರಿತು ನಡೆಸಿದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಪೋಷಕರಾದ ಸಂದೀಪ್ ಕಾರಂತ್, ಬಾಲಕೃಷ್ಣ ನಾಯಕ್, ಸುಜಾತ ಉಪಸ್ಥಿತರಿದ್ದರು. ಶ್ರೀರಾಮ ದೇವರ ಪ್ರಾಣ ಪ್ರತಿಷ್ಠಾ ನೇರಪ್ರಸಾರವನ್ನು ವಿದ್ಯಾರ್ಥಿಗಳಿಗೆ ಪರದೆಯ ಮೂಲಕ ತೋರಿಸಲಾಯಿತು. ಶಾಲಾ ವಿದ್ಯಾರ್ಥಿಗಳಾದ ಸಾತ್ವಿಕ್ ಕಾರ್ಯಕ್ರಮಕ್ಕೆ ಸ್ವಾಗತಿಸಿ ನಿಖಿಲ್ ವಂದಿಸಿದರು. ಕುಮಾರಿ ಸ್ನೇಹ ಹಾಗೂ ಕುಮಾರಿ ಸಿಂಚನ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಗೆ ಸಿಹಿ ತಿಂಡಿ ವಿತರಿಸಲಾಯಿತು.