ಪುತ್ತೂರು: ಕುಂಬ್ರ ಪೇಟೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬೀದಿ ನಾಯಿಗಳ ಉಪಟಳ ಜಾಸ್ತಿಯಾಗುತ್ತಿದ್ದು ಕಳೆದ ಕೆಲವು ದಿನಗಳ ಹಿಂದೆ ಮೂವರು ವ್ಯಕ್ತಿಗಳಿಗೆ ನಾಯಿಯೊಂದು ಕಚ್ಚಿ ಗಾಯಗೊಳಿಸಿರುವ ಹಿನ್ನೆಲೆಯಲ್ಲಿ ಬೀದಿನಾಯಿಗಳ ಉಪಟಳವನ್ನು ತಪ್ಪಿಸಲು ಗ್ರಾ.ಪಂ ಕ್ರಮ ಕೈಗೊಳ್ಳಬೇಕು ಎಂದು ಕುಂಬ್ರ ವರ್ತಕರ ಸಂಘದ ವತಿಯಿಂದ ಗ್ರಾಪಂಗೆ ಜ.23ರಂದು ಮನವಿ ನೀಡಲಾಯಿತು.
ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮನವಿ ಸ್ವೀಕರಿಸಿ, ನಾಯಿಗಳನ್ನು ಕೊಲ್ಲುವ ಹಾಗೆ ಇಲ್ಲ ಆದ್ದರಿಂದ ಸಾಧ್ಯವಾದಷ್ಟು ಗ್ರಾಮಸ್ಥರು ತಮ್ಮ ನಾಯಿಗಳನ್ನು ರಸ್ತೆಗೆ ಬಿಡದಂತೆ ಜಾಗೃತೆ ವಹಿಸಬೇಕು, ಪಂಚಾಯತ್‌ನಿಂದ ಮುಂದಿನ ದಿನಗಳಲ್ಲಿ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ಹಾಗೇ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ ಮಾತನಾಡಿ, ಕುಂಬ್ರ ಪೇಟೆಯಲ್ಲಿ ಕಳೆದ ಹಲವು ದಿನಗಳಿಂದ ನಾಯಿಗಳ ಉಪಟಳ ಜಾಸ್ತಿಯಾಗಿದೆ, ಹಲವು ಮಂದಿಗೆ ಹುಚ್ಚು ನಾಯಿಯೊಂದು ಕಚ್ಚಿದೆ. ಈ ಬಗ್ಗೆ ಪಂಚಾಯತ್ ಕ್ರಮ ಕೈಗೊಳ್ಳಬೇಕು, ಅದೇ ರೀತಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿದ್ದ ಪಂಚಾಯತ್ ಮುಂದೆಯೂ ಸ್ವಚ್ಚತೆಯ ಕಡೆಗೆ ಗಮನ ಹರಿಸಬೇಕು, ಕುಂಬ್ರ ನ್ಯೂಫ್ಯಾಮಿಲಿ ಕಾಂಪ್ಲೆಕ್ಸ್ ಇದೀಗ ಸ್ವಚ್ಛತೆಗೆ ಮಾದರಿ ಕಾಂಪ್ಲೆಕ್ಸ್ ಆಗಿ ಕಾಣುತ್ತಿದೆ. ಇದೇ ರೀತಿ ಎಲ್ಲಾ ಕಾಂಪ್ಲೆಕ್ಸ್‌ನವರು ಸ್ವಚ್ಛತೆಯ ಕಡೆ ಗಮನ ಕೊಡಬೇಕು ಎಂದರು. ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ ಮಾತನಾಡಿ, ಈಗಾಗಲೇ ಒಣ ಕಸ ಸಂಗ್ರಹ ನಡೆಯುತ್ತಿದೆ. ಅದೇ ರೀತಿ ಹಸಿ ಕಸದ ಸಂಗ್ರಹವೂ ಪಂಚಾಯತ್‌ನಿಂದ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಪಂಚಾಯತ್ ಕಾರ್ಯದರ್ಶಿ ಜಯಂತಿ, ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಮಹೇಶ್ ರೈ ಕೇರಿ, ಶಾರದಾ, ಚಿತ್ರಾ, ವರ್ತಕರ ಸಂಘದ ಮಾಜಿ ಅಧ್ಯಕ್ಷರುಗಳಾದ ನಾರಾಯಣ ಪೂಜಾರಿ ಕುರಿಕ್ಕಾರ, ದಿವಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಭವ್ಯ ರೈ, ಜತೆ ಕಾರ್ಯದರ್ಶಿ ಚರಿತ್ ಕುಮಾರ್, ಗ್ರಂಥಪಾಲಕಿ ಸಿರಿನಾ ಮತ್ತಿತರರು ಉಪಸ್ಥಿತರಿದ್ದರು.