ಪುತ್ತೂರು: ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೇಡಿ ಗ್ರಾಮದ ಗೋಳಿಯಂಗಡಿ ಸಮೀಪದ ಕಡ್ತ್ಯಾರ್ ಎಂಬಲ್ಲಿ ಜ.28ರ ಸಂಜೆ 5.30ರ ವೇಳೆಗೆ ಕುಕ್ಕೇಡಿಯ ಕುಚ್ಚೋಡಿ ನಿವಾಸಿ ಸಯ್ಯದ್ ಬಶೀರ್ ಎಂಬವರಿಗೆ ಸೇರಿದ ಸಾಲಿಡ್ ಫಯರ್ ವರ್ಕ್ಸ್ ಹೆಸರಿನ ಸುಡುಮದ್ದು ತಯಾರಿಕಾ ಘಟಕದಲ್ಲಿ ಭೀಕರ ಸ್ಪೋಟ ಸಂಭವಿಸಿ ಕಾರ್ಮಿಕರಾಗಿದ್ದ ಕೇರಳದ ತ್ರಿಶೂರ್ ನಿವಾಸಿ ವರ್ಗೀಸ್ (69), ಹಾಸನದ ಅನ್ನನಾಯ್ಕನಹಳ್ಳಿ ಚೇತನ್ ಎ.ಯು. (27 ವ) ಹಾಗೂ ಪಾಲಕ್ಕಾಡ್‌ನ ಕೈರಾಡಿ ಕುರುಂಬೂರು ನಿವಾಸಿ ಸ್ವಾಮಿ ಯಾನೆ ನಾರಾಯಣ ಕೆ. (56 ವ)ರವರು ದಾರುಣವಾಗಿ ಮೃತಪಟ್ಟ ಘಟನೆಗೆ ಸಂಬಂಧಿಸಿ ರಚಿಸಲಾಗಿರುವ ತನಿಖಾ ತಂಡದಲ್ಲಿ ಪುತ್ತೂರು ಸಂಚಾರ ಠಾಣೆಯ ಎಸ್.ಐ. ಉದಯರವಿ ಭಾಗಿಯಾಗಿದ್ದಾರೆ. ಪ್ರಕರಣದ ತನಿಖಾಧಿಕಾರಿಯಾಗಿರುವ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿಯವರ ನೇತೃತ್ವದ ತನಿಖಾ ತಂಡದಲ್ಲಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಸ್.ಐ. ಉದಯರವಿ ಮತ್ತು ಪುಂಜಾಲಕಟ್ಟೆ ಪೊಲೀಸ್ ಠಾಣಾ ಎಸ್.ಐ. ನಂದಕುಮಾರ್ ಹಾಗೂ ತಜ್ಞ ಸಿಬ್ಬಂದಿಗಳು ಕೈಜೋಡಿಸಿದ್ದು ಇವರ ತನಿಖಾ ತಂಡ ಈಗಾಗಲೇ ತನಿಖೆಯನ್ನು ಪೂರ್ಣಗೊಳಿಸಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಪೊಲೀಸ್ ತನಿಖಾ ತಂಡ ಅಂತಿಮ ತೀರ್ಮಾನ ಕೈಗೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ.