ದುಸ್ಥಿತಿಯಲ್ಲಿದ್ದ ಸರಕಾರಿ ಶಾಲೆಗೆ ಸುಸಜ್ಜಿತ ಕಟ್ಟಡ ಭಾಗ್ಯ – ಭಕ್ತಕೋಡಿ ಶಾಲೆಯಲ್ಲಿ ನೂತನ ಐದು ಕೊಠಡಿ ಉದ್ಘಾಟನೆ

0

ಸರಕಾರಿ ಶಾಲೆಯ ಶಿಕ್ಷಣ ಮತ್ತು ವ್ಯವಸ್ಥೆ ಅತ್ಯುತ್ತಮವಾಗಿದೆ-ಅಶೋಕ್ ರೈ

`ಸುದ್ದಿ’ಗೆ ಅಭಿನಂದನೆ ಸಲ್ಲಿಕೆ:
ಶಾಲಾ ಕಟ್ಟಡದ ಬೇಡಿಕೆ ವಿಚಾರವಾಗಿ ನಮ್ಮ ಮನವಿ, ಹೋರಾಟಕ್ಕೆ ಎಲ್ಲೋ ಒಂದು ಕಡೆ ಸ್ಪಂದನೆ ಸಿಗುತ್ತಿಲ್ಲ ಎಂದಾದಾಗ ಈ ಶಾಲೆಯ ದುಸ್ಥಿತಿಯ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಸುದ್ದಿ ಚಾನೆಲ್ ಸಚಿತ್ರ ವರದಿ ಪ್ರಕಟಿಸುವ ಮೂಲಕ ಸಂಬಂಧಪಟ್ಟವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಆ ಕೂಡಲೇ ಎಲ್ಲರೂ ಎಚ್ಚೆತ್ತುಕೊಂಡು ಶಾಲೆಯತ್ತ ಧಾವಿಸಿ ಬಂದರು. ಬಳಿಕ ಇತರ ಮಾಧ್ಯಮಗಳೂ ನಮ್ಮ ಶಾಲೆಯ ಬಗ್ಗೆ ವರದಿ ಬಿತ್ತರಿಸಿತ್ತು ಎಂದ ಅವರು ವಿಶೇಷವಾಗಿ ಸುದ್ದಿ ಬಿಡುಗಡೆ ಪತ್ರಿಕೆಗೆ ಅಭಿನಂದನೆ ಸಲ್ಲಿಸುವುದಾಗಿ ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ ಹೇಳಿದರು.


ಪುತ್ತೂರು: ಭಕ್ತಕೋಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ 2019-20ನೇ ಸಾಲಿನ ಪ್ರಥಮ ಹಂತದ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಹಾಗೂ 2022-23ನೇ ಸಾಲಿನ ರಾಜ್ಯ ವಲಯ ಮುಂದುವರಿದ ಯೋಜನೆಯಡಿಯಲ್ಲಿ ನಿರ್ಮಿಸಿದ ಐದು ನೂತನ ಶಾಲಾ ಕೊಠಡಿಯ ಉದ್ಘಾಟನೆ ಜ.30ರಂದು ನೆರವೇರಿತು.


ನೂತನ ಕೊಠಡಿಗಳನ್ನು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಸರಕಾರಿ ಶಾಲೆಗಳು ಮೊದಲಿನ ಹಾಗಿಲ್ಲ, ಈಗ ಸಂಪೂರ್ಣ ಬದಲಾಗಿದೆ, ಮೂಲ ಸೌಕರ್ಯದ ಕೊರತೆ, ಶಿಕ್ಷಕರ ಕೊರತೆ ಎಂಬ ನೆಪ ಹೇಳಿ ಅನೇಕ ಪೋಷಕರು ತಮ್ಮ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರು, ಆದರೆ ಇಂದು ಸರಕಾರಿ ಶಾಲಾ ಶಿಕ್ಷಣ ಮತ್ತು ವ್ಯವಸ್ಥೆ ತುಂಬಾ ಮಾರ್ಪಾಟು ಆಗಿದೆ, ಬಡವರ ಮಕ್ಕಳೂ ಗುಣಮಟ್ಟದ ಶಿಕ್ಷಣ ಪಡೆಯಬೇಕೆನ್ನುವ ಉದ್ದೇಶಕ್ಕೆ ಸರಕಾರ ಭಾಷಾವಾರು ಶಿಕ್ಷಕರನ್ನು ನೇಮಕ ಮಾಡಿದೆ ಎಂದು ಹೇಳಿದರು. ಒಂದೇ ಬಾರಿಗೆ ಸರಕಾರಿ ಶಾಲೆಯಲ್ಲಿ ಐದು ಕೊಠಡಿಗಳನ್ನು ಉದ್ಘಾಟನೆ ಮಾಡುತ್ತಿರುವುದು ಐತಿಹಾಸಿಕ ಕಾರ್ಯಕ್ರಮ ಎಂದು ಶಾಸಕರು ಬಣ್ಣಿಸಿದರು.
ವೇದಿಕೆಯಲ್ಲಿ ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಭಕ್ತಕೋಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸೀತಾ ಸರ್ವೆ, ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎಸ್.ಡಿ, ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಉಪಸ್ಥಿತರಿದ್ದರು. ಸಭೆಯಲ್ಲಿ ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷ ಎಸ್.ಡಿ ವಸಂತ, ಮುಂಡೂರು ಸಿಎ ಬ್ಯಾಂಕ್ ನಿರ್ದೇಶಕ ಶಿವನಾಥ ರೈ ಮೇಗಿನಗುತ್ತು ಮತ್ತಿತರರು ಇದ್ದರು.

ಬೆಳಗ್ಗಿನ ಸಭಾ ಕಾರ್ಯಕ್ರಮ:
ಬೆಳಿಗ್ಗೆ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್ ಮಾತನಾಡಿ ಸರಕಾರಿ ಶಾಲೆಗಳಿಗೆ ಒಂದು ಕೊಠಡಿ ಸಿಗುವಾಗಲೇ ಅದರ ಸಂತೋಷ ಆಗುತ್ತದೆ, ಇಲ್ಲಿ ಒಮ್ಮೆಲೇ 5 ಕೊಠಡಿ ಉದ್ಘಾಟನೆ ಆಗುವಾಗ ಅದರ ಸಂತೋಷಕ್ಕೆ ಪಾರವೇ ಇಲ್ಲ ಎಂದು ಹೇಳಿದರು. ಪೋಷಕರು ದಿನದಲ್ಲಿ ಕನಿಷ್ಠ ಒಂದು ಗಂಟೆಯನ್ನಾದರೂ ತಮ್ಮ ಮಕ್ಕಳ ಜೊತೆ ವಿನಿಯೋಗಿಸಬೇಕು ಎಂದ ಅವರು ಸಮಯವಿಲ್ಲ ಎನ್ನುವ ನೆಪ ಹೇಳಿ ಪೋಷಕರು ಮಕ್ಕಳ ಜೊತೆ ಕಾಲ ಕಳೆಯುವುದನ್ನು ತಪ್ಪಿಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ಐತಿಹಾಸಿಕ ಕಾರ್ಯಕ್ರಮ-ಕಮಲೇಶ್ ಎಸ್.ವಿ
ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ ಮಾತನಾಡಿ ಅನೇಕ ಶಾಲೆಗಳಲ್ಲಿ ವಿವಿಧ ಸಮಸ್ಯೆಗಳಿದ್ದರು ಕೂಡಾ ನಮ್ಮ ಶಾಲೆಯಲ್ಲಿ ೭ ಕೊಠಡಿಗಳು ನಿರ್ಮಾಣವಾಗುತ್ತಿದ್ದು ಅದರಲ್ಲಿ ಐದು ಕೊಠಡಿಗಳು ಉದ್ಘಾಟನೆಗೊಳ್ಳುತ್ತಿದೆ, ನಮ್ಮ ಶಾಲೆಯ ಸಮಸ್ಯೆ ಸಾರ್ವಜನಿಕ ಚರ್ಚಾ ವಿಷಯವಾದ್ದರಿಂದಲೇ ಇಂದು ನಮ್ಮ ಶಾಲೆಗೆ ಸುಸಜ್ಜಿತ ಕೊಠಡಿಗಳು ಸಿಗಲು ಕಾರಣ, ಇದು ಐತಿಹಾಸಿಕ ಕಾರ್ಯಕ್ರಮ ಎಂದು ಹೇಳಿದರು.

ಈ ಶಾಲೆಯ ವಿಚಾರದಲ್ಲಿ ನಾನು ಸಾರ್ವಜನಿಕವಾಗಿ ಬೈಗುಳ ತಿಂದಿದ್ದೇನೆ, ಆದರೆ ಅವೆಲ್ಲವನ್ನೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾನು ಬಿಟ್ಟು ಬಿಟ್ಟಿದ್ದೇನೆ, ನಮ್ಮೆಲ್ಲರ ಒಗ್ಗಟ್ಟು ಮತ್ತು ಮೂಲಭೂತ ಸೌಕರ್ಯಕ್ಕಾಗಿನ ನಮ್ಮ ನಿರಂತರ ಪ್ರಯತ್ನದ ಫಲವಾಗಿ ನೂತನ ಕೊಠಡಿಗಳು ಇಂದು ನಿರ್ಮಾಣಗೊಂಡಿದೆ, ಇದಕ್ಕೆ ಅನುದಾನ ನೀಡಿದವರಿಗೆ ಮತ್ತು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.

ನಿರ್ವಹಣೆ ಉತ್ತವಾಗಿ ಮಾಡಬೇಕು-ಗೌತಮ್‌ರಾಜ್
ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು ಮಾತನಾಡಿ ನಮ್ಮ ಶಾಲೆಗೆ ಸುಸಜ್ಜಿತ ಕೊಠಡಿಗಳು ನಿರ್ಮಾಣಗೊಂಡಿದ್ದು ಇದರ ನಿರ್ವಹಣೆಯನ್ನು ಉತ್ತಮವಾಗಿ ಮಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.

10 ಸಾವಿರ ರೂ ಹಸ್ತಾಂತರ:
ಷಣ್ಮುಖ ಯುವಕ ಮಂಡಲದ ವತಿಯಿಂದ ಶಾಲೆಯ ಸ್ಮಾರ್ಟ್ ಕ್ಲಾಸ್‌ನ ಅವಶ್ಯಕತೆಗೆ 10 ಸಾವಿರ ರೂ.ವನ್ನು ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು ನೇತೃತ್ವದಲ್ಲಿ ಶಾಲೆಗೆ ಹಸ್ತಾಂತರಿಸಿದರು.

ಒಗ್ಗಟ್ಟು ಇದ್ದಲ್ಲಿ ಯಶಸ್ಸು ಇರುತ್ತದೆ-ಶ್ರೀನಿವಾಸ್ ಎಚ್.ಬಿ
ಸರ್ವೆ ಎಸ್‌ಜಿಎಂ ಪ್ರೌಢ ಶಾಲಾ ನಿವೃತ್ತ ಮುಖ್ಯಗುರು ಶ್ರೀನಿವಾಸ್ ಎಚ್.ಬಿ ಮಾತನಾಡಿ ಒಗ್ಗಟ್ಟು ಇದ್ದಲ್ಲಿ ಯಶಸ್ಸು ಇರುತ್ತದೆ. ಹಳೆ ವಿದ್ಯಾರ್ಥಿಗಳ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಅವರ್‍ನು ಶಾಲೆಯ ಜೊತೆ ಸಂಪರ್ಕ ಇರುವಂತೆ ಮಾಡಿದಾಗ ಆ ಶಾಲೆ ತನ್ನಿಂತಾನೆ ಅಭಿವೃದ್ಧಿ ಕಾಣುತ್ತದೆ, ಓಲ್ಡ್ ಸ್ಟೂಡೆಂಟ್‌ಗಳನ್ನು ಗೋಲ್ಡ್ ಸ್ಟೂಡೆಂಟ್‌ಗಳನ್ನಾಗಿ ಮಾಡಬೇಕು ಎಂದ ಅವರು ಎಸ್‌ಜಿಎಂ ಶಾಲೆಯ ಜೊತೆ ಹಿರಿಯ ವಿದ್ಯಾರ್ಥಿಗಳ ಸಂಪರ್ಕ, ಸಹಕಾರದ ಬಗ್ಗೆ ವಿವರಿಸಿದರು.

ಸಾಲ ಮಾಡಿಯಾದರೂ ಖಾಸಗಿ ಶಾಲೆಗೆ ಕಳುಹಿಸುತ್ತಾರೆ-ಶಶಿಧರ ಎಸ್.ಡಿ
ಶ್ರೀ.ಕ್ಷೇ.ಧ.ಗ್ರಾ.ಯೋ.ಸರ್ವೆ ಎ ಒಕ್ಕೂಟದ ಅಧ್ಯಕ್ಷ ಶಶಿಧರ ಎಸ್.ಡಿ ಮಾತನಾಡಿ ಹಣ ಇಲ್ಲದವರೂ ಸಾಲ ಮಾಡಿ ತಮ್ಮ ಮಕ್ಕಳನ್ನು ಖಾಸಗೀ ಶಾಲೆಗೆ ಕಳುಹಿಸುವ ಸನ್ನಿವೇಶ ಕಂಡು ಬರುತ್ತಿದ್ದು ಸರಕಾರಿ ಶಾಲೆಯಲ್ಲಿ ಇಷ್ಟೆಲ್ಲಾ ವ್ಯವಸ್ಥೆಗಳಿರುವಾಗ ಯಾಕೆ ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸುತ್ತಿಲ್ಲ ಎಂದು ಅರ್ಥವಾಗುತ್ತಿಲ್ಲ ಎಂದು ಹೇಳಿದರು.

ನಮ್ಮೆಲ್ಲರ ಪ್ರಯತ್ನದಿಂದ ಕಟ್ಟಡ ಆಗಿದೆ-ಚಂದ್ರಶೇಖರ್
ಅಧ್ಯಕ್ಷತೆ ವಹಿಸಿದ್ದ ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ ಮಾತನಾಡಿ ಈ ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಎಲ್ಲರೂ ಪ್ರಯತ್ನಪಟ್ಟಿದ್ದಾರೆ, ಈ ಹಿಂದೆ ನಾವು ಶಾಸಕರ ಬಳಿಗೆ ಹಲವು ಬಾರಿ ಹೋಗಿದ್ದು ಶಾಲಾ ಕಟ್ಟಡಕ್ಕೆ ಅನುದಾನ ಒದಗಿಸಿಕೊಡಬೇಕೆಂದು ಕೇಳಿಕೊಂಡಿದ್ದೆವು, ಪತ್ರಿಕೆಯಲ್ಲೂ ವರದಿ ಪ್ರಕಟಗೊಂಡಿತ್ತು ಎಂದು ಅವರು ಹೇಳಿದರು. ನಮ್ಮಲ್ಲಿ ಆಗ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿ ಅನುದಾನ ಕೊಡುವುದಾಗಿ ಹೇಳಿ ಬಳಿಕ ಒದಗಿಸಿದ್ದರು ಎಂದ ಅವರು ಶಾಲಾ ಕೊಠಡಿ ಉತ್ತಮವಾಗಿ ನಿರ್ಮಾಣವಾಗಿದ್ದು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುವಂತಾಗಬೇಕು ಎಂದರು. ಕೇವಲ ಉದ್ಯೋಗ ಪಡೆಯುವುದಷ್ಟೇ ಶಿಕ್ಷಣದ ಗುರಿಯಾಗಬಾರದು, ಒಳ್ಳೆಯ ವ್ಯಕ್ತಿಯನ್ನಾಗಿ ಮಾಡುವ ಶಿಕ್ಷಣ ಅತೀ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಎಸ್‌ಡಿಎಂಸಿ ಮಾಜಿ ಅಧ್ಯಕ್ಷರುಗಳಿಗೆ, ಶಿಕ್ಷಕಿಗೆ ಸನ್ಮಾನ:
ಭಕ್ತಕೋಡಿ ಸ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿಯ ಮಾಜಿ ಅಧ್ಯಕ್ಷರುಗಳಾದ ಅಶೋಕ್ ಎಸ್.ಡಿ ಮತ್ತು ವಸಂತ ಕೈಪಂಗಳದೋಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅದೇ ರೀತಿ ಶಾಲಾ ಗೌರವ ಶಿಕ್ಷಕಿ ಸೌಮ್ಯಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವರ್ಗಾವಣೆಗೊಂಡ ಮೂವರು ಶಿಕ್ಷಕಿಯರಿಗೆ ಸನ್ಮಾನ:
ಭಕ್ತಕೋಡಿ ಸ.ಹಿ.ಪ್ರಾ.ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಶಿಕ್ಷಕಿಯರಾದ ಪುಷ್ಪಾವತಿ, ವಿನೋದ ಹಾಗೂ ಸುಧಾ ಕೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕಿ ಸುಧಾ ಅವರು ಸನ್ಮಾನ ಸ್ವೀಕರಿಸುವ ವೇಳೆ ಕಣ್ಣೀರು ಹಾಕಿದರು. ಸನ್ಮಾನಗೊಂಡ ಶಿಕ್ಷಕಿ ಪುಷ್ಪಾ ಅನಿಸಿಕೆ ವ್ಯಕ್ತಪಡಿಸಿದರು.

ಪತ್ರಕರ್ತ ಯೂಸುಫ್ ರೆಂಜಲಾಡಿಗೆ ಸನ್ಮಾನ:ಭಕ್ತಕೋಡಿ ಸ.ಹಿ.ಪ್ರಾ.ಶಾಲಾ ಕಟ್ಟಡದ ದುಸ್ಥಿತಿ ಕುರಿತು ಪ್ರಾರಂಭದಲ್ಲಿ ಸುದ್ದಿ ಪತ್ರಿಕೆ ಮತ್ತು ಚಾನೆಲ್‌ನಲ್ಲಿ ವಿಸ್ತೃತ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದು ಶಾಲಾ ಕಟ್ಟಡ ನಿರ್ಮಾಣ ವಿಚಾರದಲ್ಲಿ ಸಹಕಾರ ನೀಡಿರುವ ಕಾರಣಕ್ಕೆ ಸುದ್ದಿ ಬಿಡುಗಡೆ ವರದಿಗಾರ ಯೂಸುಫ್ ರೆಂಜಲಾಡಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.


ವೇದಿಕೆಯಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸೀತಾ ಸರ್ವೆ, ಮುಂಡೂರು ಗ್ರಾ.ಪಂ ಸದಸ್ಯರಾದ ಪ್ರೇಮಾ ಬಾವಿಕಟ್ಟೆ, ಕಾವ್ಯ ಕಡ್ಯ, ನಿವೃತ್ತ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಗೌರಿ ಮಹಿಳಾ ಮಂಡಲ ಭಕ್ತಕೋಡಿ ಇದರ ಅಧ್ಯಕ್ಷೆ ಮೋಹಿನಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಸ್ವಾಗತಿಸಿದರು. ಶಿಕ್ಷಕ ಅನಂತ್ ವಂದಿಸಿದರು. ಶಿಕ್ಷಕಿಯರಾದ ಸುನೀತಾ ಹಾಗೂ ದೀಪಾಶ್ರಿ ಕಾರ್ಯಕ್ರಮ ನಿರೂಪಿಸಿದರು. ಸಭೆಯ ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here