ಪುತ್ತೂರು:ಕೇಂದ್ರೀಯ ಮೀಸಲು ಸಶಸ್ತ್ರ ಪೊಲೀಸ್ ಸೇನಾ ಪಡೆ(ಸಿಆರ್ಪಿಎಫ್)ಯಲ್ಲಿ ಸುದೀರ್ಘ 33 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುವ ಬಡಗನ್ನೂರು ಪಟ್ಟೆ ನಿವಾಸಿ ವಿದ್ಯಾಧರ್ ಎನ್ ನಿವೃತ್ತಿಗೊಂಡು ಫೆ.3 ರಂದು ಹುಟ್ಟೂರಿಗೆ ಆಗಮಿಸಲಿದ್ದಾರೆ.
ಬಡಗನ್ನೂರು ಪಟ್ಟೆ ದಿ. ಮಹಾಲಿಂಗ ಪಾಟಾಳಿ ಮತ್ತು ಗಿರಿಜಾ ದಂಪತಿ ಪುತ್ರನಾಗಿರುವ ವಿದ್ಯಾಧರ ಎನ್ ಇವರು ಪ್ರಾಥಮಿಕ ಶಿಕ್ಷಣವನ್ನು ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ಪಟ್ಟೆಯಲ್ಲಿ ಮುಗಿಸಿ ಪ್ರೌಢಶಿಕ್ಷಣವನ್ನು ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆ ಈಶ್ವರಮಂಗಲದಲ್ಲಿ ಪಡೆದಿರುತ್ತಾರೆ. ನಂತರ ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದು, 1990 ರ ಡಿಸೆಂಬರ್ ನಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಸೇನಾ ಪಡೆಗೆ ಸೇರ್ಪಡೆಗೊಂಡು ರಾಜಸ್ಥಾನದ ಅಜ್ಜರ್ ಮತ್ತು ಉತ್ತರ ಪ್ರದೇಶದ ಆಲಿಘಡ್ ನಲ್ಲಿ ಬೇಸಿಕ್ ಟ್ರೈನಿಂಗ್ ಮುಗಿಸಿದ ನಂತರ ಪಂಜಾಬ್, ಚಂಡೀಗಢ, ಜಮ್ಮು ಕಾಶ್ಮೀರ, ದೆಹಲಿ, ಅಸ್ಸಾಂ, ಆಂಧ್ರಪ್ರದೇಶ, ನಾಗುರ್ (ಮಹಾರಾಷ್ಟ್ರ), ಬೆಂಗಳೂರು, ಕೊಯಮುತ್ತೂರು, ವಿಜಯವಾಡ ಮತ್ತು ಛತ್ತೀಸ್ಗಡ್ ಸೇರಿದಂತೆ ಒಟ್ಟು 33 ವರ್ಷಗಳ ಕಾಲ ಯೋಧನಾಗಿ ಸೇವೆ ಸಲ್ಲಿಸಿರುತ್ತಾರೆ. ಇವರು ಸಲ್ಲಿಸಿದ ಸೇವೆಗೆ ಅತೀ ಉತ್ಕೃಷ್ಟ ಸೇವಾ ಪದಕ ಪ್ರಶಸ್ತಿ ಪಡೆದಿರುವ ಇವರು ಪತ್ನಿ ಸುನೀತಾ ವಿದ್ಯಾಧರ್, ಪುತ್ರರಾದ ಮನೀಷ್ ಪಿ.ವಿ., ಮನ್ವಿತ್ ಪಿ.ವಿ. ಹಾಗೂ ಪ್ರಶ್ವಿತ್ ಪಿ.ವಿಯವರೊಂದಿಗೆ ಪಟ್ಟೆಯಲ್ಲಿ ವಾಸ್ತವ್ಯವಿದ್ದಾರೆ.
ಫೆ.3ರಂದು(ನಾಳೆ) ಹುಟ್ಟೂರಿಗೆ:
ಕೇಂದ್ರೀಯ ಮೀಸಲು ಸಶಸ್ತ್ರ ಪೊಲೀಸ್ ಸೇನಾ ಪಡೆಯಲ್ಲಿ ಸುಧೀರ್ಘ 33 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ, ಹುಟ್ಟೂರಿಗೆ ಆಗಮಿಸುತ್ತಿರುವ ವಿದ್ಯಾಧರ್ ರವರಿಗೆ ಫೆ.3ರಂದು ಸಂಜೆ ಸ್ವಾಗತ ಹಾಗೂ ಪಟ್ಟೆಯಲ್ಲಿರುವ ಅವರ ನಿವಾಸದಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಕುಟುಂಬಸ್ಥರಿಂದ ವೀರ ಯೋಧರಿಗೆ ಗೌರವಾರ್ಪಣೆ ನಡೆಯಲಿದೆ.