ಜಿಲ್ಲಾ ಬಿಜೆಪಿಗೆ ಪದಾಧಿಕಾರಿಗಳ ನೇಮಕ-ಪುತ್ತೂರು,ಕಡಬದ 6 ಮಂದಿಗೆ ಅವಕಾಶ

0

ಪ್ರ.ಕಾರ್ಯದರ್ಶಿಗಳಾಗಿ ಕಿಶೋರ್ ಕುಮಾರ್ ಬೊಟ್ಯಾಡಿ, ಯತೀಶ್ ಆರ‍್ವಾರ
ಉಪಾಧ್ಯಕ್ಷರಾಗಿ ರಾಕೇಶ್ ರೈ ಕೆಡೆಂಜಿ | ಕಾರ್ಯದರ್ಶಿಯಾಗಿ ವಿದ್ಯಾ ಆರ್.ಗೌರಿ
ವಕ್ತಾರರಾಗಿ ರಾಜ್‌ಗೋಪಾಲ್ ರೈ | ಎಸ್‌ಟಿ ಮೋರ್ಚಾ ಅಧ್ಯಕ್ಷರಾಗಿ ಹರೀಶ್ ಬಿಜತ್ರೆ

ಪುತ್ತೂರು: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವಿವಿಧ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಜಿಲ್ಲಾಧ್ಯಕ್ಷರು, ಜಿಲ್ಲಾ ಮಾಧ್ಯಮ ಪ್ರಮುಖ್,ಜಿಲ್ಲಾ ವಕ್ತಾರ, ಸಾಮಾಜಿಕ ಜಾಲತಾಣಗಳ ಸಂಚಾಲಕ ಮತ್ತು ಸಹಸಂಚಾಲಕರು ಹಾಗೂ ಜಿಲ್ಲಾ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದ್ದು ಪುತ್ತೂರು,ಕಡಬದ ಆರು ಮಂದಿಯನ್ನು ಪ್ರಮುಖ ಹುದ್ದೆಗಳಿಗೆ ನೇಮಕಗೊಳಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆದೇಶಿಸಿದ್ದಾರೆ.


ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾಗಿ ಕಿಶೋರ್ ಬೊಟ್ಯಾಡಿ, ಯತೀಶ್ ಆರ‍್ವಾರ, ಉಪಾಧ್ಯಕ್ಷರಾಗಿ ರಾಕೇಶ್ ರೈ ಕೆಡೆಂಜಿ, ಕಾರ್ಯದರ್ಶಿಯಾಗಿ ವಿದ್ಯಾ ಆರ್.ಗೌರಿ, ಜಿಲ್ಲಾ ವಕ್ತಾರರಾಗಿ ರಾಜ್‌ಗೋಪಾಲ್ ರೈ ನರಿಮೊಗ್ರು ಮತ್ತು ಜಿಲ್ಲಾ ಎಸ್‌ಟಿ ಮೋರ್ಚಾದ ಅಧ್ಯಕ್ಷರಾಗಿ ತಾ.ಪಂ.ಮಾಜಿ ಸದಸ್ಯ ಹರೀಶ್ ಬಿಜತ್ರೆ ಅವರನ್ನು ನೇಮಕಗೊಳಿಸಲಾಗಿದೆ.


ಪ್ರಧಾನ ಕಾರ್ಯದರ್ಶಿ ಕಿಶೋರ್ ಬೊಟ್ಯಾಡಿ: ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಎರಡು ಬಾರಿ ದ.ಕ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾಗಿ, ಎಬಿವಿಪಿ ಪುತ್ತೂರು ತಾಲೂಕು ಪ್ರಮುಖ್ ಆಗಿ ಕಾರ್ಯ ನಿರ್ವಹಿಸಿದ್ದರು. ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಕಿಶೋರ್ ಕುಮಾರ್ ಅವರು ಮಂಗಳೂರು ಯುನಿವರ್ಸಿಟಿ ಸೆನೆಟ್ ಪ್ರತಿನಿಧಿಯಾಗಿ,ಬಜರಂಗದಳ ಮಂಗಳೂರು ವಿಭಾಗ ಸಂಚಾಲಕರಾಗಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು.ಪುತ್ತೂರು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಅವರ ಹೆಸರು ಎರಡು ಬಾರಿ ಮುನ್ನೆಲೆಗೆ ಬಂದಿತ್ತು.ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಬಿಜೆಪಿ ವತಿಯಿಂದ ಉಚಿತ ಔಷಧಿ ವಿತರಣೆಯ ದ.ಕ ಜಿಲ್ಲಾ ನೇತೃತ್ವವನ್ನು ವಹಿಸಿಕೊಂಡಿದ್ದ ಕಿಶೋರ್ ಕುಮಾರ್ ಅವರು ಉತ್ತಮ ಕಾರ್ಯ ನಿರ್ವಹಣೆ ಮೂಲಕ ಮೆಚ್ಚುಗೆ ಗಳಿಸಿದ್ದರು.ನಾಲ್ಕು ಜಿಲ್ಲೆಗಳನ್ನೊಳಗೊಂಡ ಮೆಸ್ಕಾಂನ ನಿರ್ದೇಶಕರಾಗಿಯೂ ಇವರು ಸೇವೆ ಸಲ್ಲಿಸಿದ್ದರು.ಉತ್ತಮ ಕಬಡ್ಡಿ ಪಟುವಾಗಿಯೂ ಗುರುತಿಸಿಕೊಂಡಿದ್ದ ಕಿಶೋರ್ ಕುಮಾರ್ ಅವರು ವಿವಿಧ ಪ್ರತಿಷ್ಠಿತ ತಂಡಗಳನ್ನು ಪ್ರತಿನಿಧಿಸಿದ್ದರು. ಉದ್ಯಮ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಅವರು ಖುಷಿ ಅಸೋಸಿಯೇಟ್ಸ್‌ನ ಮಾಲಕರಾಗಿದ್ದಾರೆ. ಇವರು ಸರ್ವೆ ಗ್ರಾಮದ ಬೊಟ್ಯಾಡಿ ದಿ.ರಾಮಣ್ಣ ಭಂಡಾರಿ ಹಾಗೂ ಸುಶೀಲ ದಂಪತಿಯ ಪುತ್ರ.


ಪ್ರಧಾನ ಕಾರ್ಯದರ್ಶಿ ಯತೀಶ್ ಆರ‍್ವಾರ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಭಾರಿಯಾಗಿ ಕಾರ್ಯ ನಿರ್ವಹಿಸಿದ್ದ ಪುತ್ತೂರಿನ ಯತೀಶ್ ಆರ‍್ವಾರ ಮೂಲತಃ ಬೆಳ್ಳಾರೆ ಸಮೀಪದ ಕೊಡಿಯಾಲ ಗ್ರಾಮದ ಆರ‍್ವಾರ ನಿವಾಸಿ.ಯತೀಶ್ ಅವರು ಬಿ.ಎ.ಎಲ್‌ಎಲ್‌ಬಿ ಪದವೀಧರರಾಗಿರುವ ಇವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಪೂರ್ಣಾವಧಿ ಕಾರ್ಯಕರ್ತರಾಗಿ 2004ರಿಂದ 2009ರವರೆಗೆ ಕಾರ್ಯ ನಿರ್ವಹಿಸಿದ್ದರು. ಎಬಿವಿಪಿ ಚಿತ್ರದುರ್ಗ ನಗರ ಸಂಘಟನಾ ಕಾರ್ಯದರ್ಶಿಯಾಗಿ 2004ರಿಂದ 2006ರವರೆಗೆ, ಚಿತ್ರದುರ್ಗ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ 2006ರಿಂದ 2009ರವರೆಗೆ ಮತ್ತು ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಯಾಗಿ 2008-09ರವರೆಗೆ ಕಾರ್ಯ ನಿರ್ವಹಿಸಿದ್ದರು. ಬಳಿಕ 2012ರಿಂದ 2019ರವರೆಗೆ ಭಾರತೀಯ ಜನತಾ ಪಾರ್ಟಿಯ ಪೂರ್ಣಾವಧಿ ಕಾರ್ಯಕರ್ತರಾಗಿ ಜವಾಬ್ದಾರಿ ನಿರ್ವಹಿಸಿದ್ದ ಯತೀಶ್ ಆರ‍್ವಾರ ಅವರು 2012-13ರಲ್ಲಿ ರಾಜ್ಯ ಬಿಜೆಪಿ ಕಛೇರಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ರಾಮನಗರ ಮತ್ತು ಕೋಲಾರ ಜಿಲ್ಲಾ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ 2013ರಿಂದ 2016ರವರೆಗೆ ಕಾರ್ಯ ನಿರ್ವಹಿಸಿದ್ದ ಇವರು ಮಂಗಳೂರು ವಿಭಾಗ ಬಿಜೆಪಿಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ 2016ರಿಂದ 2019ರವರೆಗೆ ಜವಾಬ್ದಾರಿ ನಿರ್ವಹಿಸಿದ್ದರು. ಕೊಡಿಯಾಲ ಹಿ.ಪ್ರಾ.ಶಾಲೆ, ಚೊಕ್ಕಾಡಿ ಕುಕ್ಕಿನಡ್ಕ ಪ್ರೌಢಶಾಲೆ, ಬೆಳ್ಳಾರೆ ಪದವಿಪೂರ್ವ ಕಾಲೇಜು ಮತ್ತು ಪೆರುವಾಜೆಯಲ್ಲಿರುವ ಶಿವರಾಮ ಕಾರಂತ ಸರಕಾರಿ ಪದವಿ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದ ಇವರು ನಂತರ ಚಿತ್ರದುರ್ಗದ ಎಸ್‌ಜೆಎಂ ಕಾನೂನು ಕಾಲೇಜ್‌ನಲ್ಲಿ ಎಲ್‌ಎಲ್‌ಬಿ ಪದವಿ ಪಡೆದಿದ್ದರು. ಪ್ರಸ್ತುತ ಇವರು ಪುತ್ತೂರಿನ ಆರಾಧ್ಯ ಲೇಔಟ್ ನಿವಾಸಿಯಾಗಿದ್ದಾರೆ.


ಜಿಲ್ಲಾ ಉಪಾಧ್ಯಕ್ಷರಾಗಿ ಸವಣೂರಿನ ರಾಕೇಶ್ ರೈ ಕೆಡೆಂಜಿ: ಬಿ.ಜೆಪಿ.ಜಿಲ್ಲಾ ಉಪಾಧ್ಯಕ್ಷರಾಗಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿದ್ದ ಸವಣೂರಿನ ರಾಕೇಶ್ ರೈ ಕೆಡೆಂಜಿ ಅವರನ್ನು ನೇಮಕಗೊಳಿಸಲಾಗಿದೆ.
ರಾಕೇಶ್ ರೈ ಕೆಡೆಂಜಿ ಅವರು ದ.ಕ.ಜಿಲ್ಲಾ ಬಿಜೆಪಿ ಸದಸ್ಯರಾಗಿ,ಸುಳ್ಯ ಮಂಡಲ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ,2 ಬಾರಿ ಸುಳ್ಯ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.ಸವಣೂರು ಗ್ರಾ.ಪಂ.ಸದಸ್ಯರಾಗಿ,ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.ಸವಣೂರು ಯುವಕ ಮಂಡಲದ ಅಧ್ಯಕ್ಷರಾಗಿ ತಾಲೂಕು,ಜಿಲ್ಲೆ,ರಾಜ್ಯಮಟ್ಟದ ಯುವಜನ ಮೇಳಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು,ತಾಲೂಕು ,ಜಿಲ್ಲಾ ಯುವ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.ನರಿಮೊಗರು ಜೆಸಿಐ ಅಧ್ಯಕ್ಷರಾಗಿ ವ್ಯಕ್ತಿತ್ವ ವಿಕಸನದಂತಹ ಹಲವು ತರಬೇತಿಗಳನ್ನು ದ.ಕ.,ಉಡುಪಿ,ಕೊಡಗು ಜಿಲ್ಲೆಗಳನ್ನೊಳಗೊಂಡ ವಲಯ 15ರಲ್ಲಿ ವಲಯ ತರಬೇತುದಾರರಾಗಿ ನಡೆಸಿದ್ದಾರೆ.ವಲಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.ರಕ್ತದಾನದ ಜತೆಗೆ ನೇತ್ರದಾನ ಶಿಬಿರಗಳನ್ನು ಆಯೋಜಿಸಿ ಸುಮಾರು 60 ಜನರಿಗೆ ಕಣ್ಣಿನ ಶಸ ಚಿಕಿತ್ಸೆ ನಡೆಸಲು ಕಾರಣೀಭೂತರಾಗಿದ್ದಾರೆ.ಸವಣೂರು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿದ್ದಾರೆ.ಕಟೀಲು ಬ್ರಹ್ಮಕಲಶೋತ್ಸವದ ಅಂಗವಾಗಿ ಹೊರೆಕಾಣಿಕೆ ಸಮರ್ಪಣಾ ಸಮಿತಿ ಹಾಗೂ ಭಜನಾ ಸತ್ಸಂಗ ಸಮಾವೇಶ ಇದರ ಸವಣೂರು ವಲಯದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.ಅಲ್ಲದೆ ೫೬ ಬಾರಿ ರಕ್ತದಾನ ಮಾಡಿ ರಕ್ತದಾನದ ಮಹತ್ವ ಕುರಿತ ಪ್ರಚಾರ ರಾಯಭಾರಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ಜಿಲ್ಲಾ ಕಾರ್ಯದರ್ಶಿಯಾಗಿ ವಿದ್ಯಾ ಆರ್.ಗೌರಿ: ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ ನಗರಸಭೆಯ ಸದಸ್ಯೆ ವಿದ್ಯಾ ಆರ್.ಗೌರಿ ಅವರನ್ನು ನೇಮಕ ಮಾಡಲಾಗಿದೆ.ನಗರಸಭೆಯ ನಿಕಟಪೂರ್ವ ಉಪಾಧ್ಯಕ್ಷರೂ ಆಗಿರುವ ಇವರು ಈ ಹಿಂದೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಸೇರಿದಂತೆ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು.ವಿವಿಧ ಸಂಘ ಸಂಸ್ಥೆಗಳಲ್ಲಿಯೂ ತೊಡಗಿಸಿಕೊಂಡಿದ್ದ ಇವರು ಪಾಂಗಳಾಯಿ ದೈವಸ್ಥಾನ ಸಹಿತ ಧಾರ್ಮಿಕ ಕೇಂದ್ರಗಳ ಸಮಿತಿಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ.


ಎಸ್ಟಿ ಮೋರ್ಛಾದ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ: ಜಿಲ್ಲಾ ಎಸ್.ಟಿ ಮೋರ್ಛಾ ಅಧ್ಯಕ್ಷರಾಗಿ ತಾಪಂ ಮಾಜಿ ಸದಸ್ಯ ಹರೀಶ್ ಬಿಜತ್ರೆ ಅವರನ್ನು ನೇಮಕಗೊಳಿಸಲಾಗಿದೆ.ಒಳಮೊಗ್ರು ಗ್ರಾಮದ ಬಿಜತ್ರೆ ನಿವಾಸಿಯಾಗಿರುವ ಇವರು ಆರಂಭದಲ್ಲಿ ಒಳಮೊಗ್ರು ಬಿಜೆಪಿ ಬೂತ್ ಸಂಖ್ಯೆ 163ರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಬಳಿಕ ಬಿಜೆಪಿ ಪುತ್ತೂರು ಮಂಡಲದ ಕಾರ್ಯದರ್ಶಿಯಾಗಿ 3 ವರ್ಷ ಸೇವೆ, ಜಿಲ್ಲಾ ಎಸ್‌ಟಿ ಮೋರ್ಛಾದ ಪ್ರಧಾನ ಕಾರ್ಯದರ್ಶಿಯಾಗಿ 4 ವರ್ಷ ಸೇವೆ, ತಾಪಂ ಸದಸ್ಯರಾಗಿ 5 ವರ್ಷಗಳ ಸೇವೆ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 2 ವರ್ಷ ಸೇವೆ ಸಲ್ಲಿಸಿದ್ದಾರೆ.ಪ್ರಸ್ತುತ ಪುತ್ತೂರು ವಿಭಾಗದ ಅರಣ್ಯ ಹಕ್ಕು ಸಮಿತಿಯ ಸದಸ್ಯರಾಗಿ, ಜಿಲ್ಲಾ ಯುವಜನ ಪ್ರಾಧಿಕಾರದ ಸದಸ್ಯರಾಗಿ, ಭೂ ನ್ಯಾಯ ಮಂಡಳಿಯ ಸದಸ್ಯರಾಗಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಬೂತ್ ಲೆವೆಲ್ ಏಜೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.ಬಿಜತ್ರೆ ದಿ.ಕುಂಞಣ್ಣ ನಾಯ್ಕ ಮತ್ತು ಪುಷ್ಪಾವತಿಯವರ ಪುತ್ರರಾಗಿರುವ ಹರೀಶ್ ಬಿಜತ್ರೆಯವರು ಓರ್ವ ಕೃಷಿಕರು ಆಗಿದ್ದು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಮಾಡಿಕೊಂಡಿದ್ದಾರೆ.


ಜಿಲ್ಲಾ ವಕ್ತಾರರಾಗಿ ರಾಜಗೊಪಾಲ್ ರೈ: ಭಾರತೀಯ ಜನತಾ ಪಾರ್ಟಿ ದ.ಕ ಜಿಲ್ಲಾ ವಕ್ತಾರರಾಗಿ ರಾಜ್‌ಗೋಪಾಲ್ ರೈ ನೇಮಕಗೊಂಡಿದ್ದಾರೆ.
ಮೂಲತಃ ನರಿಮೊಗರು ನಿವಾಸಿಯಾಗಿದ್ದು ಮಂಗಳೂರಿನಲ್ಲಿ ನೆಲೆಸಿರುವ ರಾಜ್‌ಗೋಪಾಲ್ ರೈ ಅವರು ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಆಗಿ, ಬಿಜೆಪಿ ಮಾಜಿ ರಾಜ್ಯ ಪರಿಷತ್ ಸದಸ್ಯರಾಗಿ, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮಂಡಲ ಉಪಾಧ್ಯಕ್ಷರಾಗಿ, ಯುವ ಮೋರ್ಚಾದ ಅಧ್ಯಕ್ಷರಾಗಿ ಸೇರಿದಂತೆ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಹಿಂದೂ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದ ಇವರು ಬಜರಂಗದಳ ಮಂಗಳೂರು ವಿಭಾಗ ಸಂಚಾಲಕರಾಗಿ, ವಿಹಿಂಪ ಮಂಗಳೂರು ಪ್ರಖಂಡ ಅಧ್ಯಕ್ಷರಾಗಿ, ರಾಷ್ಟ್ರೀಯ ಸ್ವಯಂ ಸೇವಕ್ ಸಂಘದ 6 ವರ್ಷ ಮುಖ್ಯ ಶಿಕ್ಷಕರಾಗಿದ್ದರು. ಬಿಜೆಪಿ ಹಿರಿಯ ಮುಖಂಡ ನರಿಮೊಗರು ಮೋಹನ್ ರೈ ಅವರ ಸಹೋದರನಾಗಿರುವ ರಾಜ್‌ಗೋಪಾಲ್ ರೈ ಅವರು ಪತ್ನಿ ಪೂರ್ಣಿಮಾ, ಪುತ್ರರಾದ ಬಿಪಿನ್‌ರಾಜ್ ರೈ ಹಾಗೂ ಸಚಿನ್‌ರಾಜ್ ರೈ ಜೊತೆ ಮಂಗಳೂರಿನಲ್ಲಿ ವಾಸವಾಗಿದ್ದಾರೆ.

ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷರಾಗಿ ವೆಂಕಟ್ ವಳಲಂಬೆ
ಕಾಣಿಯೂರು:ಬಿಜೆಪಿ ಸುಳ್ಯ ಮಂಡಲ ಸಮಿತಿ ನೂತನ ಅಧ್ಯಕ್ಷರಾಗಿ ವೆಂಕಟ್ ವಳಲಂಬೆ ಅವರನ್ನು ಆಯ್ಕೆ ಮಾಡಲಾಗಿದೆ.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನೂತನ ಅಧ್ಯಕ್ಷರ ನೇಮಕಗೊಳಿಸಿ ಆದೇಶಿಸಿದ್ದಾರೆ.ಪ್ರಸ್ತುತ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾಗಿದ್ದ ಹರೀಶ್ ಕಂಜಿಪಿಲಿ ಅವರ ಅಽಕಾರದ ಅವಧಿ ಮುಗಿದ ಹಿನ್ನೆಲೆಯಲ್ಲಿ ವೆಂಕಟ್ ವಳಲಂಬೆಯವರು ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಈ ಹಿಂದೆ ಮಂಡಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು ಇದೀಗ ಎರಡನೇ ಬಾರಿ ಅಧ್ಯಕ್ಷರಾಗಿದ್ದಾರೆ.ಈ ಹಿಂದೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದರು.

ಪುತ್ತೂರು ಮಂಡಲಾಧ್ಯಕ್ಷತೆಗೆ ನಡೆಯದ ನೇಮಕ
ಜಿಲ್ಲೆಯ 8 ಮಂಡಲಗಳ ಪೈಕಿ ಪುತ್ತೂರು ಹೊರತು ಇತರ ಏಳು
ಮಂಡಲಗಳಿಗೆ ಅಧ್ಯಕ್ಷರ ನೇಮಕ ಮಾಡಲಾಗಿದೆ.8 ಉಪಾಧ್ಯಕ್ಷ ಹುದ್ದೆಗಳ ಪೈಕಿ 7 ಮಂದಿಯ ನೇಮಕ ಮಾಡಲಾಗಿದೆ.ಒಂದು ಹುದ್ದೆ ಖಾಲಿ ಬಿಡಲಾಗಿದೆ.ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ಸೇರ್ಪಡೆಯಾದರೆ ಅವರಿಗೆ ಪುತ್ತೂರು ಮಂಡಲದ ಅಧ್ಯಕ್ಷ ಹುದ್ದೆ ಇಲ್ಲವೇ ಜಿಲ್ಲಾ ಮಟ್ಟದಲ್ಲಿ ಯಾವುದಾದರೊಂದು ಪ್ರಮುಖ ಜವಾಬ್ದಾರಿ ದೊರೆಯಲಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪುತ್ತೂರು ಮಂಡಲದ ಅಧ್ಯಕ್ಷ ಹುದ್ದೆಗೆ ಯಾರನ್ನೂ ನೇಮಕಗೊಳಿಸದೇ ಇರುವುದು ಮತ್ತು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹುದ್ದೆಯೊಂದಕ್ಕೆ
ನೇಮಕಗೊಳಿಸದೇ ಇರುವುದು ಕುತೂಹಲ ಸೃಷ್ಟಿಸಿದೆ.

LEAVE A REPLY

Please enter your comment!
Please enter your name here