ಉಪ್ಪಿನಂಗಡಿ : ನಕಲಿ ಚಿನ್ನಾಭರಣವನ್ನು ಇರಿಸಿ 1.70 ಲಕ್ಷ ರೂಪಾಯಿ ಹಣವನ್ನು ಪಡೆದು ವಂಚಿಸಿದ ಪ್ರಕರಣ ಉಪ್ಪಿನಂಗಡಿಯಲ್ಲೂ ನಡೆದಿದ್ದು, ಈ ಸಂಬಂಧ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಲಾಗಿದೆ.
ಉಪ್ಪಿನಂಗಡಿಯ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವ್ಯವಸ್ಥಾಪಕಿ ಕಮಲಾ ರವರು ದೂರು ನೀಡಿದ್ದು, ನೆಲ್ಯಾಡಿ ಗ್ರಾಮದ ಸೆಬಾಸ್ಟಿಯನ್ ಮತ್ತು ಡಾನಿಶ್ ಎಂಬವರು ಜ. 31 ರಂದು ಸಂಘದ ಕಚೇರಿಗೆ ಬಂದು ಮೇಲ್ನೋಟಕ್ಕೆ ನಕಲಿ ಎಂದು ಕಂಡು ಬಾರದಂತಹ 40 ಗ್ರಾಮ್ ತೂಕದ 5 ನಕಲಿ ಬಳೆಗಳನ್ನು ಅಡಮಾನವಿರಿಸಿ 1.70 ಲಕ್ಷ ರೂ ಸಾಲ ಪಡೆದು ವಂಚನೆಗೈದಿರುತ್ತಾರೆಂದು ದೂರಿದ್ದಾರೆ. ಪ್ರಕರಣದಲ್ಲಿ ಸಂಘದ ಚಿನ್ನಾಭರಣ ಪರಿಶೀಲನಾಗಾರರಾದ ಶ್ರೀಧರ ಆಚಾರ್ಯ ರವರು ಈ ನಕಲಿ ಚಿನ್ನಾಭರಣವನ್ನು ಪರಿಶೀಲಿಸಿದ್ದು, ನೈಜ ಚಿನ್ನವೆಂದು ತಿಳಿಸಿ ನಂಬಿಕೆ ದ್ರೋಹವೆಸಗಿದ್ದಾರೆಂದೂ ದೂರಿನಲ್ಲಿ ತಿಳಿಸಿದ್ದಾರೆ.
ಇದೇ ಆರೋಪಿಗಳು ಜ. 27 ರಂದು ನೆಲ್ಯಾಡಿಯ ಕಾಮಧೇನು ಮಹಿಳಾ ಸಹಕಾರಿ ಸಂಘದಲ್ಲೂ 30 ಗ್ರಾಂ ತೂಕದ 4 ನಕಲಿ ಬಳೆಗಳನ್ನು ಸಂಘದಲ್ಲಿ ಅಡಮಾನವಿರಿಸಿ, 1.40 ಲಕ್ಷ ರೂ.ವನ್ನು ಸಾಲವಾಗಿ ಪಡೆದು ಮೋಸ ಮಾಡಿರುವ ಬಗ್ಗೆ ಈಗಾಗಲೇ ದೂರು ಸಲ್ಲಿಸಲಾಗಿದೆ. ಈ ಆರೋಪಿಗಳಿಂದ ಇದೇ ರೀತಿ ಹಲವು ವಂಚನಾ ಪ್ರಕರಣಗಳು ನಡೆದಿರುವ ಶಂಕೆ ಇದ್ದು ತನಿಖೆ ನಡೆಯುತ್ತಿದೆ.