ಪುತ್ತೂರು: ಸರ್ವೆ ಗ್ರಾಮದ ಎಲಿಯ ಎಂಬಲ್ಲಿ ನೆಲೆ ನಿಂತು ಭಕ್ತಿಯಿಂದ ನಂಬಿದ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಬಂದಿರುವ ತನಗೆ ಅತ್ಯಂತ ಪ್ರೀತಿಯ ಹಾಲು ಪಾಯಸದಂತಹ ಹರಕೆಯಿಂದ ಸಂತೃಪ್ತಗೊಳ್ಳುವ ಶ್ರೀ ವಿಷ್ಣುಮೂರ್ತಿ ದೇವರ ದ್ವಿತೀಯ ಪ್ರತಿಷ್ಠಾ ವರ್ಧಂತಿ ಹಾಗೂ ಎಲಿಯ ಜಾತ್ರೆಯು ಫೆ.6 ರಂದು ಅತ್ಯಂತ ವೈಭವದಿಂದ ಜರಗಿತು. ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ 3 ಕಾಯಿ ಗಣಪತಿ ಹೋಮ, ಸಾನಿಧ್ಯ ಕಲಶಪೂಜೆ, ಪುಣ್ಯಾಹ, ಪಂಚಗವ್ಯ, ಪಂಚಾಮೃತಾಭಿಷೇಕ, ಸಾನಿಧ್ಯ ಕಲಶಾಭಿಷೇಕ ಮತ್ತು ದೇವಳದ ನಾಗಬನದಲ್ಲಿ ನಾಗತಂಬಿಲ ಸೇವೆ ನಡೆಯಿತು. ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ನಡೆದು ಸೇರಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ದೇವಳದ ಪ್ರಧಾನ ಅರ್ಚಕ ನಾಗೇಶ ಕಣ್ಣಾರಾಯರು ವಿವಿಧ ವೈಧಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಸಾವಿರಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವರ ಗಂಧ ಪ್ರಸಾದ ಹಾಗೇ ಅನ್ನ ಪ್ರಸಾದ ಸ್ವೀಕರಿಸಿದರು.
ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ
ಸಂಜೆ ಶ್ರೀ ದೇವರಿಗೆ ವಿಶೇಷ ರಂಗ ಪೂಜೆ ನಡೆದು ಶ್ರೀ ಭೂತ ಬಲಿ, ಸೇವಾ ಸುತ್ತುಗಳು, ನೃತ್ಯಬಲಿ, ರಾಜಾಂಗಣ ಪ್ರಸಾದ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು ಬಳಿಕ ಮಂತ್ರಾಕ್ಷತೆಯ ನಂತ ಸೇರಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಸರ್ವೆ, ಮುಂಡೂರು, ಕೆದಂಬಾಡಿ, ಕೆಯ್ಯೂರು ಗ್ರಾಮ ವ್ಯಾಪ್ತಿಯ ಸಾವಿರಾರು ಮಂದಿ ಭಕ್ತರು ಶ್ರೀ ದೇವರ ಜಾತ್ರೋತ್ಸವದಲ್ಲಿ ಪಾಲ್ಗೊಂಡು ಶ್ರೀ ದೇವರ ಗಂಧ ಪ್ರಸಾದ ಹಾಗೇ ಅನ್ನಪ್ರಸಾದ ಸ್ವೀಕರಿಸಿದರು.
ದೇವಾಲಯದಲ್ಲಿ ದೀಪಾರಾಧನೆ
ವಿಶೇಷವಾಗಿ ಜಾತ್ರೋತ್ಸವದ ಅಂಗವಾಗಿ ದೇವಳದಲ್ಲಿ ದೀಪಾರಾಧನೆ ನಡೆಯಿತು. ಕೇರಳದ ದೇವಾಲಯದಲ್ಲಿ ಈ ರೀತಿಯ ದೀಪಾರಾಧನೆಯನ್ನು ನೋಡಬಹುದಾಗಿದ್ದು ಅದೇ ರೀತಿಯ ದೀಪಾರಾಧನೆಯನ್ನು ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲೂ ಮಾಡಲಾಯಿತು. ದೇವಳದ ತುಂಬಾ ದೀಪ ಹಚ್ಚಿಟ್ಟು ಶ್ರೀ ದೇವರನ್ನು ಪೂಜಿಸುವ ವಿಶಿಷ್ಠ ಶೈಲಿ ಇದಾಗಿದೆ.
ದಿನವಿಡೀ ನಡೆದ ಭಜನಾ ಸಂಕೀರ್ತನೆ
ಜಾತ್ರೋತ್ಸವದ ಅಂಗವಾಗಿ ಜಯರಾಜ್ ಸುವರ್ಣರವರ ನೇತೃತ್ವದಲ್ಲಿ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆಯಿಂದ ಆರಂಭಗೊಂಡ ಭಜನೆ ರಾತ್ರಿ ತನಕವೂ ನಡೆಯಿತು. ಭಜನೆಯಲ್ಲಿ ಮುಂಡೂರು ಉದಯಗಿರಿ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ,ಶ್ರೀ.ಕ್ಷೇ.ಧ.ಗ್ರಾ.ಯೋ.ಆಯೋಜಿತ ಚಿಗುರು ಭಜನಾ ಮಂಡಳಿ, ಶ್ರೀ ಧರ್ಮಶಾಸ್ತಾರ ಪುತ್ತೂರು, ಶ್ರೀ ಹರಿ ಭಜನಾ ಮಂಡಳಿ ದೇವಸ್ಯ, ಕಾಣಿಯೂರು ಶ್ರೀ ವಿಷ್ಣುಪ್ರಿಯ ಭಜನಾ ಮಂಡಳಿ, ಭಕ್ತಕೋಡಿ ಸರ್ವೆ ಶ್ರೀರಾಮ ಭಜನಾ ಮಂಡಳಿ, ಸವಣೂರು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಪುತ್ತೂರು ಗಾನಸಿರಿ ಕಲಾಕೇಂದ್ರ ತಂಡಗಳು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಅನ್ನಸಂತರ್ಪಣೆ
ಜಾತ್ರೋತ್ಸವದ ಅಂಗವಾಗಿ ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಅನ್ನಸಂಪರ್ತಣೆ ನಡೆಯಿತು. ವಿವಿಧ ಖಾದ್ಯಗಳ ಜೊತೆಯಲ್ಲಿ ಸೇರಿದ ಭಕ್ತಾಧಿಗಳಿಗೆ ಅನ್ನಪ್ರಸಾದ ವಿತರಿಸಲಾಯಿತು. ಸಾವಿರಕ್ಕೂ ಅಧಿಕ ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಪವಿತ್ರಪಾಣಿ ಬಾಲಕೃಷ್ಣ ಮುಡಂಬಡಿತ್ತಾಯ ಸೊರಕೆ, ಜಾತ್ರಾ ಸಮಿತಿಯ ಗೌರವ ಅಧ್ಯಕ್ಷರುಗಳಾದ ಬೂಡಿಯಾರ್ ರಾಧಾಕೃಷ್ಣ ರೈ, ರಾಜಾರಾವ್ ಮುಡಂಬಡಿತ್ತಾಯ ಸೊರಕೆ, ಸಂಚಾಲಕ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ಅಧ್ಯಕ್ಷ ಶಿವರಾಮ ರೈ ಸೊರಕೆ, ಕ್ಷೇತ್ರದ ಆಡಳಿತಾಧಿಕಾರಿ ಉಮೇಶ್ ಕಾವಾಡಿ, ಕೋಶಾಧಿಕಾರಿ ಮಜಿತ್ ಸುವರ್ಣ ಸೊರಕೆ, ಕಾರ್ಯದರ್ಶಿ ರಜನಿಕಾಂತ ಬಾಳಯ ಹಾಗೇ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು, ಜಾತ್ರಾ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಹಾಗೇ ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರುಗಳು ಹಾಗೂ ಸರ್ವೆ, ಮುಂಡೂರು, ಕೆದಂಬಾಡಿ, ಕೆಯ್ಯೂರು ಗ್ರಾಮದ ಸಮಸ್ತ ಭಕ್ತಾಧಿಗಳು ಉಪಸ್ಥಿತರಿದ್ದರು.
ಇಂದು ಕ್ಷೇತ್ರದ ದೈವಗಳಿಗೆ ನೇಮೋತ್ಸವ
ಫೆ.7 ರಂದು ಸಂಜೆ ಗಂಟೆ 3-45 ಕ್ಕೆ ದೇವಳದಲ್ಲಿ ಪಿಲಿಭೂತ, ರಕ್ತೇಶ್ವರಿ, ಶಿರಾಡಿ, ಪಂಜುರ್ಲಿ ದೈವಗಳ ಭಂಡಾರ ತೆಗೆಯುವುದು.4-30ಕ್ಕೆ ಪಿಲಿಭೂತಕ್ಕೆ ಎಣ್ಣೆ ಬೂಳ್ಯ, 4-45 ಕ್ಕೆ ಅಡ್ಕೆರೆಗುಂಡಿಯ ಕಾವಲುದೈವ ಗುಳಿಗ ಬನಕ್ಕೆ ಭಂಡಾರ ತರಲು ದೇವಳದಿಂದ ಹೊರಡುವುದು.6-00ಕ್ಕೆ ಪಿಲಿಭೂತದ ನೇಮ ಹಾಗೂ ಬೂಳ್ಯ ಪ್ರಸಾದ, ರಾತ್ರಿ 8-30ಕ್ಕೆ ಸಾರ್ವಜನಿಕ ಅನ್ನಪ್ರಸಾದ, 9.30 ರಾತ್ರಿಯಿಂದ ಬೆಳಗ್ಗಿನ ತನಕ ರಕ್ತೇಶ್ವರಿ, ಶಿರಾಡಿ, ಪಂಜುರ್ಲಿ ಹಾಗೂ ಗುಳಿಗ ದೈವಗಳ ನರ್ತನ ಸೇವೆ ನಡೆದು ಬೆಳಗ್ಗೆ 6.00ಕ್ಕೆ ಗುಳಿಗ ದೈವವು ಅಡ್ಕೆರೆಗುಂಡಿಯಲ್ಲಿರುವ ಗುಳಿಗ ಬನಕ್ಕೆ ಹೊರಡುವ ಕಾರ್ಯಕ್ರಮ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ಷೇತ್ರದ ಪ್ರಕಟಣೆ ತಿಳಿಸಿದೆ.