ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿ – ಜಿಲ್ಲಾಧಿಕಾರಿಯವರಿಂದ ಸಮಸ್ಯೆಗಳ ಪರಿಶೀಲನೆ: ಪರಿಹಾರ

0

ಉಪ್ಪಿನಂಗಡಿ: ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿಗಳ ಸಂದರ್ಭ ಉಂಟಾಗಿರುವ ಸಾರ್ವಜನಿಕರ ಸಮಸ್ಯೆಗಳನ್ನು ಫೆ.7ರಂದು ಖುದ್ದು ಸ್ಥಳ ಪರಿಶೀಲನೆ ನಡೆಸಿ, ಆಲಿಸಿದ ದ.ಕ. ಜಿಲ್ಲಾಧಿಕಾರಿ ಮುಲೈಮುಗಿಲನ್ ಅವರು ಕೆಲವೊಂದು ಸಮಸ್ಯೆಗಳನ್ನು ನಿವಾರಿಸುವಂತೆ ಹಾಗೂ ಜನರ ಬೇಡಿಕೆಗಳನ್ನು ಈಡೇರಿಸುವಂತೆ ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕ ಜಾವೇದ್ ಅಹಮ್ಮದ್ ಅವರಿಗೆ ಸೂಚಿಸಿದರು.
34 ನೆಕ್ಕಿಲಾಡಿ ಗ್ರಾಮದ ಕರ್ವೇಲ್‌ನಲ್ಲಿ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಕರ್ವೇಲ್ ಜಂಕ್ಷನ್ ಬಳಿ ಫೂಟ್ ಬ್ರಿಡ್ಜ್ ನಿರ್ಮಾಣ ಮಾಡುವಂತೆ ಹಾಗೂ ಅಲ್ಲಿಯೇ ಶಾಂತಿನಗರದ ಮೂಲಕ ಪುತ್ತೂರಿಗೆ ಹೋಗುವ ಹಾಗೆ ಅನುಕೂಲವಾಗುವಂತೆ ಹೆದ್ದಾರಿ ಕ್ರಾಸಿಂಗ್ ನೀಡಲು ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕ ಜಾವೇದ್ ಅಹಮ್ಮದ್ ಅವರಿಗೆ ಸೂಚಿಸಿದರು. ಹೆದ್ದಾರಿ ಕಾಮಗಾರಿಯಿಂದಾಗಿ 34 ನೆಕ್ಕಿಲಾಡಿಯ ಬೊಳ್ಳಾರ್ ಸಮೀಪದ ಅಬ್ದುಲ್ ಖಾದರ್ ಎಂಬವರ ಮನೆಗೆ ಹೋಗಲು ದಾರಿ ಇಲ್ಲದಿರುವುದರ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಯವರು ಅವರ ಮನೆಗೆ ದಾರಿ ನಿರ್ಮಿಸಿಕೊಡುವಂತೆ ಸೂಚಿಸಿದರಲ್ಲದೆ, ಉಪ್ಪಿನಂಗಡಿ ಗ್ರಾಮದ ಮಠದಲ್ಲಿಯೂ ಸುಮಾರು 20 ಮನೆಗಳಿಗೆ ದಾರಿಯಿಲ್ಲದಿರುವುದರ ಕುರಿತು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಯೋಜನಾ ನಿರ್ದೇಶಕರಿಗೆ ಸೂಚಿಸಿದರು. ಉಪ್ಪಿನಂಗಡಿಯಲ್ಲಿ ಚರಂಡಿ ನೀರು ನಿಂತು ಸಮಸ್ಯೆಯಾಗುವ ಬಗ್ಗೆ ಸ್ಥಳೀಯರ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಯವರು, ಇಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಉಪ್ಪಿನಂಗಡಿ ಬಸ್‌ನಿಲ್ದಾಣಕ್ಕೆ ಕವಲೊಡೆಯುವಲ್ಲಿ ಚರಂಡಿಯನ್ನು ವಿಸ್ತರಣೆ ಮಾಡಿ ಮೋರಿಗಳನ್ನು ಹಾಕಿಕೊಡುವಂತೆ ಸೂಚಿಸಿದರು. ಇಲ್ಲಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಂದರ್ಭ ಮಾಡಿರುವ ಚರಂಡಿ ಎತ್ತರದಲ್ಲಿದ್ದು, ಇದರಿಂದ ಚರಂಡಿ ನೀರು ಹರಿದು ಹೋಗದೇ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಹೇಳಿದಾಗ, ಇದು ನದಿಯಲ್ಲಿ ನೀರು ತುಂಬಿದಾಗ ಹಿಮ್ಮುಖವಾಗಿ ಚರಂಡಿಯಲ್ಲಿ ನೀರು ಬರಬಾರದೆಂದು ಯೋಜನಾ ಬದ್ಧವಾಗಿಯೇ ಇದನ್ನು ಮಾಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು ಸ್ಪಷ್ಟನೆ ನೀಡಿದರು. ಈ ಸಂದರ್ಭ ಜಿಲ್ಲಾಧಿಕಾರಿಯವರು ಕೂಡಾ ಯಾವುದೇ ಕಾಮಗಾರಿ ನಡೆಸುವಾಗಲೂ ತಜ್ಞರ ವರದಿಯ ಪ್ರಕಾರವೇ ಯೋಜನಾ ಬದ್ಧವಾಗಿ ನಡೆಸಲಾಗುತ್ತದೆ. ಆದರೂ ಇಲ್ಲಿ ಸ್ಥಳೀಯರನ್ನು ಒಳಗೊಂಡಂತೆ ಸಮಿತಿಯನ್ನು ಮಾಡಿ ಈ ಬಗ್ಗೆ ಪರಿಶೀಲನೆ ನಡೆಸಿ, ಪರಿಹಾರ ಕೈಗೊಳ್ಳಿ ಎಂದು ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕರಿಗೆ ಸೂಚಿಸಿದರು.
34 ನೆಕ್ಕಿಲಾಡಿಯಲ್ಲಿ ಈಗ ರಾಷ್ಟ್ರೀಯ ಹೆದ್ದಾರಿಯಿಂದ ಪುತ್ತೂರು ಹೆದ್ದಾರಿಗೆ ಕವಲೊಡೆಯುವ ಜಾಗದಲ್ಲಿ ಮುಂದಕ್ಕೆ ಹೆದ್ದಾರಿ ನಿರ್ಮಾಣವಾಗುವುದರಿಂದ ರಸ್ತೆ ದಾಟಲು ಸಮಸ್ಯೆಯಾಗುವ ಕುರಿತು ಸ್ಥಳೀಯರ ಆತಂಕಕ್ಕೆ ಸ್ಪಷ್ಟನೆ ನೀಡಿದ ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕರು, ಇಲ್ಲಿಂದ ಪುತ್ತೂರು ರಸ್ತೆಗೆ ಹೋಗಲು ಹೆದ್ದಾರಿ ನಿರ್ಮಾಣದ ಬಳಿಕ ಅವಕಾಶವಿಲ್ಲ. ಇಲ್ಲಿಂದ ಸ್ವಲ್ಪ ಮುಂದಕ್ಕೆ ಇರುವ ಅಂಡರ್‌ಪಾಸ್‌ನ ಮೂಲಕ ಪುತ್ತೂರು ರಸ್ತೆಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಅಲ್ಲಿಂದ ನೇರಕ್ಕೆ ಪಿಡಬ್ಲೂಡಿಯವರು ಹೆದ್ದಾರಿಯನ್ನು ನಿರ್ಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು. 34 ನೆಕ್ಕಿಲಾಡಿ ಜಂಕ್ಷನ್‌ನಲ್ಲಿ ಗ್ರಾ.ಪಂ. ಕೂಡಾ ಇರುವುದರಿಂದ ಪಾದಚಾರಿಗಳಿಗೆ ಅನುಕೂಲವಾಗುವಂತೆ ಇಲ್ಲಿಯೂ ಫೂಟ್ ಬ್ರಿಡ್ಜ್ ನಿರ್ಮಾಣ ಮಾಡುವಂತೆ ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕ ಜಾವೇದ್ ಅಹಮ್ಮದ್ ಸೂಚಿಸಿದರು.

ಜಿಲ್ಲಾಧಿಕಾರಿಯವರೊಂದಿಗೆ ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮಹಾಪಾತ್ರ, ತಹಶೀಲ್ದಾರ್ ಪುರಂದರ ಹೆಗ್ಡೆ, ಉಪ್ಪಿನಂಗಡಿ ಕಂದಾಯ ಹೋಬಳಿಯ ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ಕಂದಾಯಾಧಿಕಾರಿ ಚಂದ್ರ ನಾಯ್ಕ, 34 ನೆಕ್ಕಿಲಾಡಿ ಗ್ರಾ.ಪಂ. ವಿಎ ಜಂಗಪ್ಪ, ಉಪ್ಪಿನಂಗಡಿ ಗ್ರಾ.ಪಂ. ನರಿಯಪ್ಪ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್, ಉಪ್ಪಿನಂಗಡಿ ಅರಣ್ಯಾಧಿಕಾರಿ ಗಿರೀಶ್, 34 ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ಸತೀಶ್ ಡಿ. ಬಂಗೇರ, ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ಉಪ್ಪಿನಂಗಡಿ ಪೊಲೀಸ್ ಉಪ ನಿರೀಕ್ಷಕ ಅವಿನಾಶ್, ಹೆದ್ದಾರಿ ಇಲಾಖೆಯ ಎಂಜಿನಿಯರ್‌ಗಳು, ಗುತ್ತಿಗೆದಾರ ಸಂಸ್ಥೆಯ ಎಂಜಿನಿಯರ್‌ಗಳು ಉಪಸ್ಥಿತರಿದ್ದರು. ಈ ಸಂದರ್ಭ ರಾಜ್ಯ ರೈತ ಸಂಘದ ದ.ಕ. ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್, ಮುರಳೀಧರ ರೈ ಮಠಂತಬೆಟ್ಟು, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ., ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಅಬ್ದುರ್ರಹ್ಮಾನ್ ಕೆ., ಅಬ್ದುರ್ರಝಾಕ್, ಧನಂಜಯ ನಟ್ಟಿಬೈಲು, ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್, ಪ್ರಮುಖರಾದ ಅಶ್ರಫ್ ಬಸ್ತಿಕ್ಕಾರ್, ನಾಗೇಶ್ ಪ್ರಭು, ಶಬೀರ್ ಕೆಂಪಿ, ಸದಾನಂದ ನೆಕ್ಕಿಲಾಡಿ ಮತ್ತಿತರರು ಉಪಸ್ಥಿತರಿದ್ದು, ಸಮಸ್ಯೆಗಳ ಬಗ್ಗೆ ತಿಳಿಸಿದರು.

LEAVE A REPLY

Please enter your comment!
Please enter your name here