ಎಪಿಎಂಸಿ ಸಹಾಯಕ ಕಾರ್ಯದರ್ಶಿ ರಾಮಚಂದ್ರರ ವಿರುದ್ಧ ಲಂಚದ ಆರೋಪದ ಪ್ರಕರಣ-ತನಿಖಾಧಿಕಾರಿಗಳಿಂದ ಯಾರ್ಡ್‌ನಲ್ಲಿ ಪರಿಶೀಲನೆ

0

ಪುತ್ತೂರು:ಎಪಿಎಂಸಿ ಯಾರ್ಡ್‌ನ ತರಕಾರಿ ವರ್ತಕರಿಗೆ ಪರವಾನಿಗೆ ನೀಡಲು ಹಾಗು ಯಾರ್ಡ್ ಒಳಗೆ ವಾಹನ ಪ್ರವೇಶಕ್ಕೆ ಲಂಚದ ಬೇಡಿಕೆ ಇಟ್ಟಿರುವ ಕುರಿತು ಎಪಿಎಂಸಿ ಸಹಾಯಕ ಕಾರ್ಯದರ್ಶಿ ರಾಮಚಂದ್ರ ಅವರ ಮೇಲಿರುವ ಆರೋಪದ ದೂರಿನ ಕುರಿತು ಪರಿಶೀಲನೆ ನಡೆಸಲು ಫೆ.೭ರಂದು ವಿಶೇಷ ತನಿಖಾಧಿಕಾರಿಗಳು ಯಾರ್ಡ್‌ಗೆ ಆಗಮಿಸಿದ್ದಾರೆ.

ರಾಮಚಂದ್ರ ಅವರು ತರಕಾರಿ ವ್ಯಾಪಾರಸ್ಥರಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದು, ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ಮತ್ತು ತರಕಾರಿ ವಾಹನಗಳ ಒಳ ಪ್ರವೇಶಕ್ಕೆ ಅಡ್ಡಿಪಡಿಸುವುದರಿಂದ ವಾಹನ ಮಾಲೀಕರು ಮತ್ತು ಚಾಲಕರು ಪುತ್ತೂರು ಸಮಿತಿಗೆ ಬರಲು ನಿರಾಕರಿಸುತ್ತಿದ್ದರು.ಇದರಿಂದಾಗಿ ತರಕಾರಿ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಭಾರೀ ನಷ್ಟ ಉಂಟಾಗಿತ್ತು.ಈ ಕುರಿತು ವ್ಯಾಪಾರಸ್ಥರು ರಾಮಚಂದ್ರ ಅವರನ್ನು ವಿಚಾರಿಸಿದಾಗ, ತರಕಾರಿ ವರ್ತಕರಿಗೆ ಪರವಾನಿಗೆ ನೀಡಲು ಮತ್ತು ವಾಹನಗಳ ಒಳ ಪ್ರವೇಶಕ್ಕೆ ಲಂಚದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ, ಈ ಎಲ್ಲಾ ಅಂಶಗಳನ್ನು ಪ್ರಸ್ತಾಪಿಸಿ ತರಕಾರಿ ವರ್ತಕರು ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ರಾಮಚಂದ್ರ ಅವರನ್ನು ಜ.೧೬ರಿಂದ ಮುಂದಿನ ೨ ತಿಂಗಳ ತನಕ ಅಥವಾ ಮುಂದಿನ ಆದೇಶದ ತನಕ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಕೃಷಿ ಮಾರಾಟ ಇಲಾಖೆಯ ನಿರ್ದೇಶಕರು ಆದೇಶ ನೀಡಿದ್ದರು.ರಾಮಚಂದ್ರ ಅವರ ಮೇಲಿನ ಆರೋಪದ ದೂರಿನಲ್ಲಿರುವ ಎಲ್ಲಾ ಅಂಶಗಳ ಕುರಿತು ಪರಿಶೀಲಿಸಲು ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸೋಮಶೇಖರ್, ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಹೆಚ್.ಪಿ.ಮೋಹನ್, ಕೃಷಿ ಮಾರಾಟ ಇಲಾಖೆ ತುಮಕೂರು ಇಲ್ಲಿನ ಉಪನಿರ್ದೇಶಕ ಬಿ.ರಾಜಣ್ಣ ಅವರನ್ನೊಳಗೊಂಡ ತನಿಖಾ ತಂಡ ರಚನೆ ಮಾಡಿ, ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದರು.ಫೆ. ೭ರಂದು ತನಿಖಾ ತಂಡದ ಅಧಿಕಾರಿಗಳು ಎಪಿಎಂಸಿ ಯಾರ್ಡ್‌ಗೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ.ಇದೇ ವೇಳೆ ಅವರು ಎಪಿಎಂಸಿ ಯಾರ್ಡ್‌ನ ಎಲ್ಲಾ ವರ್ತಕರೊಂದಿಗೆ ಮಾತನಾಡಿ ಹೇಳಿಕೆ ಪಡೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here