- ಕೆಡ್ಡಸ ಪ್ರಕೃತಿಯ ಸಂರಕ್ಷಣೆಯನ್ನು ಸಾರುತ್ತದೆ: ಶಕುಂತಳಾ ಶೆಟ್ಟಿ
ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫೆ.10ರಂದು ಕೆಡ್ಡಸ ಆಚರಿಸಲಾಯಿತು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಭೂಮಿತಾಯಿಗೆ ಎಣ್ಣೆ ಬಿಟ್ಟು ಭೂಮಿ ಪೂಜೆ ಮಾಡುವುದರ ಮೂಲಕ ಸಾಂಪ್ರದಾಯಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಭೂಮಿ ತಾಯಿ ಸಕಲ ಜೀವ ಸಂಕುಲಗಳಿಗೂ ತಾಯಿ. ಹೇಗೆ ಒಂದು ಹೆಣ್ಣು ಋತುಮತಿಯಾಗಿ ಗರ್ಭಾವಸ್ಥೆಗೆ ಅಣಿಯಾಗುತ್ತಾಳೋ ಹಾಗೆಯೇ ಭೂಮಿ ತಾಯಿ ಎಲ್ಲಾ ಗಿಡಮರಳಿಗೆ ಫಲಪುಷ್ಪ ತುಂಬಲು ಅಣಿಯಾಗುವ ಕಾಲವನ್ನು ಕೆಡ್ಡಸ ಎನ್ನುತ್ತಾರೆ. ಈ ಸಂದರ್ಭದಲ್ಲಿ ಭೂಮಿ ತಾಯಿಯನ್ನು ರಕ್ಷಿಸುವ ಕೆಲಸಗಳನ್ನು ಮಾಡಬೇಕು. ಮರಗಿಡಗಳನ್ನು ಕಡಿಯುವುದಾಗಲಿ, ಭೂಮಿಯನ್ನು ಅಗೆಯುವುದಾಗಲಿ ಮಾಡಬಾರದು. ಕೆಡ್ಡಸ ಪ್ರಕೃತಿಯ ಸಂರಕ್ಷಣೆಯನ್ನು ಸಾರುತ್ತದೆ ಎಂದರು. ಶಾಲೆಗಳಲ್ಲಿ ಇಂತಹ ಆಚರಣೆಗಳನ್ನು ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಅರಿವು ಮೂಡಲು ಸಾಧ್ಯವಾಗುತ್ತದೆ. ತುಳುನಾಡಿನ ವಿಶೇಷ ಹಬ್ಬ ಹರಿದಿನಗಳನ್ನು ಆಚರಿಸಿಕೊಂಡು ಬರುತ್ತಿರುವ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಗೆ ಹಾಗೂ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ಹಿರಿಯರು ಆಚರಿಸಿಕೊಂಡು ಬಂದಿರುವ ತುಳು ಆಚಾರ ವಿಚಾರ ಪದ್ಧತಿಗಳನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದದು ಎಂದರು. ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಮೀನಾಕ್ಷಿ, ಸಂಸ್ಥೆಯ ಆಡಳಿತಾಧಿಕಾರಿ ಆನಂದ ಯಸ್.ಟಿ.ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ಕೆಡ್ಡಸ ಕುರಿತ ಗೀತೆಯನ್ನು ಹಾಡಿದರು. ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕಬ್ ಬುಲ್ ಬುಲ್ ವಿದ್ಯಾರ್ಥಿಗಳಿಗೆ ಹೀರಕ್ ಗರಿ ಮತ್ತು ಚತುರ್ಥ ಚರಣ ಪ್ರಮಾಣ ಪತ್ರವನ್ನು ನೀಡಲಾಯಿತು. ಪ್ರೌಢಶಾಲಾ ಮುಖ್ಯಗುರು ಗಾಯತ್ರಿ ಯು.ಎನ್.ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯಗುರು ಲೋಹಿತಾ ವಂದಿಸಿದರು. ಸಹಶಿಕ್ಷಕಿಯರಾದ ಸರಿತಾ, ಪವಿತ್ರ, ಭವ್ಯ ಕಾರ್ಯಕ್ರಮ ನಿರ್ವಹಿಸಿದರು. ಕೆಡ್ಡಸದ ವಿಶೇಷ ತಿಂಡಿ ನನ್ನೇರಿ ನೀಡಲಾಯಿತು.