ಉಪ್ಪಿನಂಗಡಿ: ಪ್ರಜಾಪ್ರಭುತ್ವ ವೇದಿಕೆ ಮತ್ತು ಸೌಜನ್ಯ ಹೋರಾಟ ಸಮಿತಿ ಉಪ್ಪಿನಂಗಡಿ ಇವುಗಳ ಸಂಯುಕ್ತಾಶ್ರಯದಲ್ಲಿ ಕು. ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ನ್ಯಾಯ ನೀಡಬೇಕೆಂದು ಆಗ್ರಹಿಸಿ ಫೆ. 18ರಂದು ಉಪ್ಪಿನಂಗಡಿಯಲ್ಲಿ ಬೃಹತ್ ಜನಾಂದಲೋನ ಸಭೆ ನಡೆಯಲಿದೆ.
ಇಲ್ಲಿನ ಎಚ್.ಎಂ. ಅಡಿಟೋರಿಯಂನ ವಠಾರದಲ್ಲಿ ಅಪರಾಹ್ನ 3ಗಂಟೆಗೆ ಸಭೆ ನಡೆಯಲಿದ್ದು, ಕು. ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಕ್ಕಾಗಿ ನ್ಯಾಯಾಂಗದ ಸುಪರ್ದಿಯಲ್ಲಿ ವಿಶೇಷ ತನಿಖಾ ತಂಡ ರಚಿಸಿ ಮರು ತನಿಖೆಗೆ ಒತ್ತಾಯಿಸಲು ಹಾಗೂ ನಿಜವಾದ ಆರೋಪಿಗಳಿಗೆ ಗಲ್ಲು ಶಿಕ್ಷೆ ಮತ್ತು ಆರೋಪಿಗಳನ್ನು ರಕ್ಷಣೆ ಮಾಡಿದವರಿಗೆ ಕಠಿಣ ಶಿಕ್ಷೆಗೆ ಈ ಸಭೆಯಲ್ಲಿ ಆಗ್ರಹ ವ್ಯಕ್ತವಾಗಲಿದೆ. ಸಭೆಯಲ್ಲಿ ಸನಾತನ ಹಿಂದೂ ಧರ್ಮದ ಪ್ರತಿಪಾದಕ ಮಹೇಶ್ ಶೆಟ್ಟಿ ತಿಮರೋಡಿ, ನಿವೃತ್ತ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣವರ್, ಸೌಜನ್ಯಳ ತಾಯಿ ಕುಸುಮಾವತಿ, ತುಳು ಜನಪದ ವಾಗ್ಮಿ ತಮ್ಮಣ್ಣ ಶೆಟ್ಟಿ, ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಭಾಗವಹಿಸಲಿದ್ದಾರೆ ಎಂದು ಉಪ್ಪಿನಂಗಡಿ ಸೌಜನ್ಯ ಹೋರಾಟ ಸಮಿತಿಯ ಪ್ರಕಟನೆ ತಿಳಿಸಿದೆ.